More

    ಸಚಿವ ಶಿವಾನಂದ ಪಾಟೀಲ ರಾಜೀನಾಮೆಗೆ ಆಮ್‌ಆದ್ಮಿ ಆಗ್ರಹ

    ದಾವಣಗೆರೆ: ಸರ್ಕಾರದ ಪರಿಹಾರಧನಕ್ಕಾಗಿ ರೈತರ ಆತ್ಮಹತ್ಯೆ ಹೆಚ್ಚಿದೆ ಎಂಬ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಆಮ್‌ಆದ್ಮಿ ಪಕ್ಷ, ಸಚಿವರ ರಾಜೀನಾಮೆಗೆ ಆಗ್ರಹಿಸಿದೆ.
    ಕುಟುಂಬಕ್ಕೆ ಆಧಾರವಾದ ರೈತ ಸಾಲದ ಸುಳಿಗೆ ಸಿಲುಕಿದ್ದಾನೆ. ಬೆಳೆ ನಷ್ಟದಿಂದ, ಶ್ರಮಕ್ಕೆ ತಕ್ಕ ಬೆಲೆ ಸಿಗದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬ ಆರ್ಥಿಕವಾಗಿ ಕುಸಿಯದಿರಲಿ ಎಂಬ ಕಾರಣಕ್ಕೆ ಸರ್ಕಾರ ಪರಿಹಾರ ಘೋಷಣೆ ಮಾಡುತ್ತಿದೆ. ಆದರೆ ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲಘುವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಮ್ ಆದ್ಮ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್‌ಶಿವಕುಮಾರಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    2020ನೇ ವರ್ಷದಲ್ಲಿ 500 ರೈತರು, 2022 ರಲ್ಲಿ 651 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಸಿಗಲಿದೆ ಎಂಬ ದುರಾಸೆ ಮನಸ್ಸಿನಲ್ಲಿ ಬರಲಿದೆ ಎಂದು ಹೋಲಿಕೆ ಮಾಡಿರುವುದು ದುರದೃಷ್ಟಕರ. ಅನ್ನದಾತ ದೇಶದ ಬೆನ್ನಲುಬು. ಆತನ ಕಷ್ಟಗಳಲ್ಲಿ ಪಾಲುದಾರರಾಗಿ, ಹೆಗಲಾಗಿ ರಾಜ್ಯ ಸರ್ಕಾರ ಭಾಗಿದಾರನಾಗಬೇಕು. ಅದನ್ನು ಬಿಟ್ಟು ಹಗುರವಾಗಿ ಮಾತನಾಡಕೂಡದು ಎಂದರು.
    ಕಾರ್ಯದರ್ಶಿ ಕೆ.ರವೀಂದ್ರ ಮಾತನಾಡಿ, ಆತ್ಮಹತ್ಯೆಗೀಡಾದ ರೈತರ ಕುಟುಂಬಕ್ಕೆ ಪರಿಹಾರ ನೀಡಲು ದುಡ್ಡಿಲ್ಲದಿದ್ದರೆ ನೇರವಾಗಿ ಹೇಳಿಕೆ ನೀಡಲಿ. ಬದಲಾಗಿ ದುಡ್ಡಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಣಕಿಸಬಾರದು. ರೈತರು ಸ್ವಾಭಿಮಾನಿಗಳು. ಸಚಿವರ ವಿರುದ್ಧ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಕೆ.ಎಲ್.ರಾಘವೇಂದ್ರ, ಸಿ.ಆರ್.ಅರುಣ್‌ಕುಮಾರ್, ಎಸ್.ಕೆ.ಆದಿಲ್ಖಾನ್, ಸಿಡ್ಲಪ್ಪ ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts