More

    ಸಚಿವ ಪರಮೇಶ್ವರಗೆ ಅದ್ದೂರಿ ಸ್ವಾಗತ

    ವಿಜಯವಾಣಿ ಸುದ್ದಿಜಾಲ ತುಮಕೂರು
    ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಡಾ.ಜಿ.ಪರಮೇಶ್ವರ ಅವರನ್ನು ತುಮಕೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
    ಕ್ಯಾತಸಂದ್ರ ಜಾಸ್ ಟೋಲ್ ಬಳಿ ಸೋಮವಾರ ಅವರನ್ನು ಸ್ವಾಗತಿಸಿದ ಅಪಾರ ಕಾರ್ಯಕರ್ತರು ಬಿ.ಎಚ್.ರಸ್ತೆಯುದ್ದಕ್ಕೂ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕಾಂಗ್ರೆಸ್ ಕಚೇರಿಯವರೆಗೂ ಕರೆತಂದರು.

    ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಪರಮೇಶ್ವರ ಅವರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಘಟಕಗಳ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲೆಯೆಲ್ಲೆಡೆಯಿಂದ ಆಗಮಿಸಿದ ಎಲ್ಲ ಮುಖಂಡರು ಪ್ರತ್ಯೇಕವಾಗಿ ಸನ್ಮಾನಿಸಿದರು. ಆದರೆ, ಈ ಸಂಭ್ರಮದ ವೇಳೆ ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ಬಿಟ್ಟು ಉಳಿದ ಯಾವ ಶಾಸಕರೂ ಭಾಗಿಯಾಗಿರಲಿಲ್ಲ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಳಿದೆಲ್ಲ ಶಾಸಕರೂ ಪರಮೇಶ್ವರ ಸ್ವಾಗತಕ್ಕೆ ಆಗಮಿಸದೆ ದೂರವಿದ್ದರು. ತೆರೆದ ಜೀಪ್‌ನಲ್ಲಿ ಆಗಮಿಸಿದ ಪರಮೇಶ್ವರಗೆ ಹೂವಿನ ಮಳೆಯನ್ನೇ ಸುರಿಸಿದರು.

    ತಮಟೆ ನುಡಿಸುವ ಮೂಲಕ ಬಿ.ಎಚ್.ರಸ್ತೆಯುದ್ದಕ್ಕೂ ಆಗಮಿಸಿದ ಮೆರವಣಿಗೆಯಿಂದ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಜಿ.ಪರಮೇಶ್ವರ, ಜಿಲ್ಲೆಯಲ್ಲಿ ನಾನು ಆಡಿ, ಬೆಳೆದು, ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯಾಗಿದ್ದು, ಹಾಗಾಗಿ, ಕ್ಷೇತ್ರ ಬದಲಾವಣೆಗೆ ಸಾಕಷ್ಟು ಸಲಹೆಗಳು ಬಂದರೂ ಜಿಲ್ಲೆಯಿಂದಲೇ ಸ್ಪರ್ಧೆ ಮಾಡಿದೆ ಎಂದು ಭಾವುಕರಾದರು.
    ಕೊರಟಗೆರೆ ಕ್ಷೇತ್ರದ ಜನರ ಆಶೀರ್ವಾದದಿಂದ ಸಚಿವನಾಗುವ ಅವಕಾಶ ಸಿಕ್ಕಿದೆ, ಸಿಕ್ಕಿರುವ ಅವಕಾಶ ಬಳಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

    ತುಮಕೂರಿಗೆ ಮೆಟ್ರೋ ವಿಸ್ತರಣೆ ಖಚಿತ

    ಹೆಲ್ಮೆಟ್ ಧರಿಸದೆ ಬೈಕ್ ರ‌್ಯಾಲಿ: ಕಾಂಗ್ರೆಸ್ ಯುವ ಮೋರ್ಚಾ ಕಾರ್ಯಕರ್ತರು ಬ್ಯಾಕ್ ರ‌್ಯಾಲಿ ಮೂಲಕ ಬಿ.ಎಚ್.ರಸ್ತೆಯಲ್ಲಿ ನೆಚ್ಚಿನ ನಾಯಕನ್ನು ಕಾಂಗ್ರೆಸ್ ಕಚೇರಿಗೆ ಕರೆತಂದರು. ಈ ಸಂದರ್ಭದಲ್ಲಿ ಬೈಕ್ ಸವಾರರಾಗಿದ್ದ ಯಾರೊಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ, ದಾರಿಯುದ್ದಕ್ಕೂ ಭದ್ರತೆ ಒದಗಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಜಾಣಮೌನಿಗಳಾಗಿದ್ದರು.
    ತುಮಕೂರು, ಬೆಂಗಳೂರಿನ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತೆ ಮಾಡುವುದು ನನ್ನ ಕನಸು, ತುಮಕೂರನ್ನು ಗ್ರೇಟರ್ ಬೆಂಗಳೂರು ಮಾಡಬೇಕು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕನಸು ಕಂಡಿದ್ದು ನನಸು ಮಾಡಲು ಸರ್ವಪ್ರಯತ್ನ ಮಾಡುತ್ತೇನೆ. ತುಮಕೂರಿಗೆ ಮೆಟ್ರೋ ರೈಲು ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆ ಎಂದು ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ತುಮಕೂರಿನಲ್ಲಿ ಬಿಜೆಪಿ ಗೆಲ್ಲಲು ಅವಕಾಶ ನೀಡಬಾರದು, ಮುಂದಿನ ದಿನಗಳಲ್ಲಿ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯಾಗಿ ಮಾಡುವ ಕೆಲಸ ಮಾಡಬೇಕು ಎಂದರು. ನಾಲ್ಕು ವರ್ಷ ತುಮಕೂರಿಗೆ ಯಾವುದೇ ಯೋಜನೆಗಳನ್ನು ರೂಪಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂದರು.

    ಸಿಎಂ ಸಿದ್ದರಾಮಯ್ಯ ಮುಂದಿನ ತಿಂಗಳು ಬಜೆಟ್ ಘೋಷಿಸಲಿದ್ದಾರೆ, ರಾಹುಲ್‌ಗಾಂಧಿ ಮಾತುಕೊಟ್ಟಂತೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಐದು ಗ್ಯಾರಂಟಿ ಕಾರ್ಯಕ್ರಮಗಳನ್ನು ಘೋಷಿಸಿದ್ದೇವೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಆಯಾ ಇಲಾಖೆಯ ಲೆಕ್ಕಾಚಾರ ನಮ್ಮ ಮುಂದೆ ಬರಲಿದೆ. ನುಡಿದಂತೆ ನಡೆದು ಬದ್ಧತೆ ತೋರಿಸುತ್ತೇವೆ ಎಂದರು. ಕಾನೂನು ವಿರುದ್ಧವಾಗಿ ಕೆಲಸ ಮಾಡುವ, ಅಶಾಂತಿ ತರುವ ಯಾರನ್ನೂ ನಮ್ಮ ಸರ್ಕಾರ ಬಿಡುವುದಿಲ್ಲ, ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು, ಒಂದೇ ಸಂವಿಧಾನ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts