More

    ಸಚಿವರ ಹೆಸರಲ್ಲಿ ಸಿಡಿಪಿಒ ಹಣ ವಸೂಲಿ?

    ಹಾನಗಲ್ಲ: ಅಂಗನವಾಡಿ ಕಾರ್ಯಕರ್ತೆಯರಿಂದ ತಲಾ ಒಂದು ಸಾವಿರ ರೂಪಾಯಿಯನ್ನು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಸೂಲಿ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಆಡಿಯೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಬೆಳ್ಳಿ ತಟ್ಟೆಯಲ್ಲಿ ಫಲಗಳನ್ನಿಟ್ಟು ಗೌರವಿಸಬೇಕು. ಸರ್ಕಾರದ ವತಿಯಿಂದ ಕಾನ್ವೆಂಟ್ ಶಾಲೆ ತೆರೆದರೆ ಅಂಗನವಾಡಿ ಮುಚ್ಚಲಾಗುತ್ತದೆ. ಆದ್ದರಿಂದ ಕಾನ್ವೆಂಟ್ ತೆರೆಯದಂತೆ ತಡೆಯಬೇಕಾದರೆ, ನಿಮ್ಮ ಉಳಿವಿಗಾಗಿ ತಲಾ ಸಾವಿರ ರೂ. ಕೊಡಿ‘ ಎಂದು ಸಿಡಿಪಿಒ ಸಂತೋಷಕುಮಾರ, ತಾಲೂಕಿನ 319 ಕಾರ್ಯಕರ್ತೆಯರಿಂದ 3 ಲಕ್ಷ ರೂ.ಗಿಂತ ಅಧಿಕ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದೆ.

    ಅಂಗನವಾಡಿ ಹಿರಿಯ ಕಾರ್ಯಕರ್ತೆಯೊಬ್ಬರು ಸಿಡಿಪಿಒ ಕಚೇರಿಯಲ್ಲೇ ಸಭೆ ನಡೆಸಿ, ಹಣ ನೀಡುವಂತೆ ಇನ್ನುಳಿದ ಕಾರ್ಯಕರ್ತೆಯರಿಗೆ ಮನವಿ ಮಾಡಿದ ವಿಡಿಯೋ ಹಾಗೂ ಆಡಿಯೋ ಸಾರ್ವಜನಿಕ ವಲಯದಲ್ಲೆಲ್ಲ ಹರಿದಾಡಿ, ಇಲಾಖೆಯ ಗೌರವವನ್ನೇ ಮಣ್ಣು ಪಾಲಾಗಿಸಿದೆ.

    ಪೋಷಣ ಅಭಿಯಾನ ಹಣ ಆಪೋಷನ

    ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪೋಷಣ ಅಭಿಯಾನ ಜುಲೈನಲ್ಲಿ ಆರಂಭಗೊಂಡಿದೆ. ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಖಾತೆಗೆ 3000 ರೂ. ಅನುದಾನ ಬರುತ್ತದೆ. ಇದರಲ್ಲಿ ಪಾಲಕರ ಸಭೆ ನಡೆಸಿ, ಇಲಾಖೆ ಯೋಜನೆಗಳ ಮಾಹಿತಿ ನೀಡಬೇಕು. ಆದರೆ, ಈ ಸಭೆಗಳನ್ನು ಮಾಡುವ ಅಗತ್ಯವಿಲ್ಲ ಎಂದು ಹೇಳಿ, ಅದರ ಬದಲಾಗಿ ತಲಾ 1 ಸಾವಿರ ರೂ. ಅನ್ನು ಮೇಲ್ವಿಚಾರಕರ ಮೂಲಕ ಹಣ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಎಲ್ಲರೂ ಹಣ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಕೆಲವರು ಈ ಎಲ್ಲ ಬೆಳವಣಿಗೆಗಳನ್ನೂ ಮೊಬೈಲ್ ಫೋನ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಹಣ ವಸೂಲಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳದೇ ಮೇಲಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಕಾಟಾಚಾರದ ತನಿಖೆ-ಸಾಕ್ಷ್ಯ ನಾಶ

    ಈ ಕುರಿತು ಜಿಲ್ಲಾಡಳಿತ ಹಾಗೂ ಇಲಾಖೆ ಸಚಿವರಿಗೆ ದೂರು ಹೋಗುತ್ತಿದ್ದಂತೆ ಜಿಲ್ಲಾ ನೋಡಲ್ ಅಧಿಕಾರಿಗಳು ತನಿಖೆ ನಡೆಸುವಂತೆ ಆದೇಶಿಸಿದ್ದರು. ಇಲಾಖೆ ಜಿಲ್ಲಾ ಉಪನಿರ್ದೇಶಕರು ಸಿಡಿಪಿಒ ಪಕ್ಕದಲ್ಲಿ ಕೂಡಿಸಿಕೊಂಡು ತನಿಖೆ ನಡೆಸಿದ್ದು, ಕಾಟಾಚಾರಕ್ಕೆ ಎಂಬಂತಾಗಿದೆ. ಸಿಡಿಪಿಒ ಸಂತೋಷಕುಮಾರ ಎದುರೇ ಕೆಲವು ಕಾರ್ಯಕರ್ತೆಯರು ಹಣ ನೀಡಿರುವುದಾಗಿಯೂ ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ.

    ಈ ಪ್ರಕರಣದ ಸಾಕ್ಷ್ಯನ್ನು ನಾಶಪಡಿಸಲು ರಾತ್ರೋರಾತ್ರಿ ಕಾರ್ಯಕರ್ತೆಯರ ಮನೆಗೆ ತೆರಳಿದ್ದ ಮೇಲ್ವಿಚಾರಕಿಯರು, ಸಿಡಿಪಿಒ ನೌಕರಿಗೆ ಕುತ್ತು ಬರುತ್ತದೆ ಎಂದು ಕಾರ್ಯಕರ್ತೆಯರಿಂದ ಹಣ ನೀಡಿಲ್ಲ ಎಂಬ ಪತ್ರವನ್ನೂ ಒತ್ತಾಯಪೂರ್ವಕವಾಗಿ ಬರೆಯಿಸಿಕೊಂಡಿದ್ದಾರೆ. ಅಲ್ಲದೆ, ಮೇಲ್ವಿಚಾರಕಿಯರು ಒತ್ತಡದಿಂದ ಕಾರ್ಯಕರ್ತೆಯರು ಹಣ ನೀಡಿಲ್ಲ ಎಂದು ತನಿಖೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

    ಸಮರ್ಪಕ ತನಿಖೆ ಒತ್ತಾಯಿಸಿ ಪತ್ರ

    ಸಿಡಿಪಿಒ ಉಪಟಳ ಸಹಿಸದ ಕಾರ್ಯಕರ್ತೆಯರು ಹಾನಗಲ್ಲ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಮುಚ್ಚಂಡಿ ಹಾಗೂ ಜಿಲ್ಲಾಧಿಕಾರಿಗೆ ಅನಾಮಧೇಯ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಸಿ.ಎಂ. ಉದಾಸಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಮುಚ್ಚಂಡಿ ಪತ್ರ ಬರೆದು ‘ಸಿಡಿಪಿಒ, ಎಫ್​ಡಿಸಿ, ಮೇಲ್ವಿಚಾರಕರು ಅಂಗನವಾಡಿ ಕಾರ್ಯಕರ್ತೆಯರಿಂದ ಹಣ ವಸೂಲಿ ಮಾಡಿದ ಪ್ರಕರಣದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸನ್ಮಾನ ಮಾಡಿ ಗೌರವ ಧನ ನೀಡಬೇಕು. ಇಲಾಖೆಯ ಕೆ-2 ಬಿಲ್​ಗಳನ್ನು ಪಾಸ್ ಮಾಡಲು ಖಜಾನೆ ಅಧಿಕಾರಿಗಳಿಗೆ ಹಣ ನೀಡಬೇಕು. ಜಿಪಂ, ತಾಪಂ ಅಧಿಕಾರಿಗಳಿಗೆ, ಮುಂಬಡ್ತಿ ಹೊಂದಿದ ಜಂಟಿ ನಿರ್ದೇಶಕರು, ಉಪ ನಿರ್ದೇಶಕರಿಗೆ ಹಣ ನೀಡಬೇಕು. ಪೋಷಣ ಅಭಿಯಾನದ ಹಣದಲ್ಲಿ ಇವನ್ನೆಲ್ಲ ಭರಿಸಬೇಕು ಎಂದು ಹಿರಿಯ ಕಾರ್ಯಕರ್ತೆಯರೆದುರು ಸ್ವತಃ ಸಿಡಿಪಿಒ ಹೇಳಿದ್ದಾರೆ.
    | ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts