More

    ಸಚಿವರ ಸಭೆಗೆ ಹೊರಟ ಅಧಿಕಾರಿ ಅಪಘಾತದಲ್ಲಿ ಸಾವು

    ಅಂಕೋಲಾ: ಕಾರವಾರದಲ್ಲಿ ಗುರುವಾರ ಆಯೋಜನೆಯಾಗಿದ್ದ ಸಚಿವ ಶಿವರಾಮ ಹೆಬ್ಬಾರ ಅವರ ಸಭೆಗೆ ತೆರಳುತ್ತಿದ್ದ ಶಿರಸಿ ಲೋಕೋಪಯೋಗಿ ಇಲಾಖೆ ಕಾರು ತಾಲೂಕಿನ ಬಾಳೆಗುಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಪರಿಣಾಮ ಒಬ್ಬ ಅಧಿಕಾರಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಾಳೆಗುಳಿ ಸಮೀಪದ ಗೌರಿಕೇರಿಯಲ್ಲಿ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಾಲಿ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ಎಇಇ ಮಾರುತಿ ಎಚ್.ಮುದಕಣ್ಣನವರ್(58) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಿಡಬ್ಲ್ಯುಡಿ ಶಿರಸಿ ಇಇ ಕೃಷ್ಣಾ ರೆಡ್ಡಿ, ಅಧಿಕಾರಿ ರವಿ ಪಾಟೀಲ್ ಹಾಗೂ ಚಾಲಕ ಚೇತನ ತಳವಾರ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

    ‘ಉಡುಪಿ ಜಿಲ್ಲಾಧಿಕಾರಿಗೆ ಕರೆ ಮಾಡಿ, ಮಣಿಪಾಲ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ’ ಎಂದು ಸಚಿವ ಶಿವರಾಮ ಹೆಬ್ಬಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಂಜಿನಿಯರ್ ರಾಮು ಅರ್ಗೆಕರ್ ಗಾಯಾಳುಗಳ ಚಿಕಿತ್ಸೆಗೆ ಶ್ರಮಿಸಿದರು.

    ಘಟನೆ ಸ್ಥಳಕ್ಕೆ ಹೆಬ್ಬಾರ: ಘಟನೆಯ ಮಾಹಿತಿ ಪಡೆದ ಸಚಿವ ಹೆಬ್ಬಾರ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ನಂತರ ಆಸ್ಪತ್ರೆಗೆ ತೆರಳಿ ಮೃತರ ಅಂತಿಮ ದರ್ಶನ ಪಡೆದರು. ಡಿಸಿ ಮುಲ್ಲೈ ಮುಗಿಲನ್, ಎಸ್​ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕುಮಟಾ ಎಸಿ ರಾಹುಲ್ ಪಾಂಡೆ, ಶಾಸಕ ದಿನಕರ ಶೆಟ್ಟಿ, ಪಿಐ ಸಂತೋಷಕುಮಾರ ಶೆಟ್ಟಿ, ಪಿಎಸ್​ಐ ಪ್ರವೀಣ ಕುಮಾರ ಆರ್., ಕಾರವಾರ ಲೋಕೋಪಯೋಗಿ ಇಲಾಖೆ ಇಇ ದೇವಿದಾಸ ಚವ್ಹಾಣ್ ಇದ್ದರು.

    ಸಭೆ ರದ್ದುಪಡಿಸಿದ ಹೆಬ್ಬಾರ: ಎರಡನೇ ಬಾರಿ ಸಚಿವರಾದ ನಂತರ ಶಿವರಾಮ ಹೆಬ್ಬಾರ ಕಾರವಾರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದರು. ನೆರೆ ಹಾನಿ ಹಾಗೂ ಕೋವಿಡ್ ಸಂಬಂಧ ರ್ಚಚಿಸಲು ಶನಿವಾರ ಅಧಿಕಾರಿಗಳ ಸಭೆ ಕರೆದಿದ್ದರು. ಆದರೆ, ಅದಕ್ಕೂ ಪೂರ್ವದಲ್ಲಿ ಅಪಘಾತ ಸಂಭವಿಸಿದ್ದರಿಂದ ಸಚಿವರು ಸಭೆಯನ್ನು ರದ್ದು ಮಾಡಿದರು. ಪ್ರವಾಸಿಮಂದಿರದಲ್ಲಿ ಕುಳಿತು ಅಧಿಕಾರಿಗಳಿಂದ ನೆರೆ ಹಾನಿ ಮಾಹಿತಿ ಪಡೆದು ಸೂಚನೆಗಳನ್ನು ನೀಡಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts