More

    ಸಕ್ರಮದ ಮುಕುಟ ತೊಡಿಸಲು ಸಕಾಲ

    ಯು. ಎಸ್. ಪಾಟೀಲ ದಾಂಡೇಲಿ

    ರಾಜ್ಯದ ಪ್ರಮುಖ ಕೈಗಾರಿಕೆ ನಗರ ದಾಂಡೇಲಿ. ಬ್ರಿಟಿಷರ ಕಾಲದಲ್ಲೇ ಪ್ರಮುಖ ರೂಪುಗೊಂಡ ಈ ಪ್ರಮುಖ ವಾಣಿಜ್ಯ ಕೇಂದ್ರದ ಸಾಕಷ್ಟು ಪ್ರದೇಶವು ಅಕ್ರಮ ಎಂಬುದು ಕಟುಸತ್ಯ. ಈ ಅಕ್ರಮ ಪ್ರದೇಶವನ್ನು ಸಕ್ರಮಗೊಳಿಸಿ ಸರ್ಕಾರವು ತನ್ನ ಬೊಕ್ಕಸವನ್ನು ಬಹುದೊಡ್ಡ ಪ್ರಮಾಣದಲ್ಲಿ ವೃದ್ಧಿಸಿಕೊಳ್ಳಬಹುದು ಎಂಬ ಚಿಂತನೆಯನ್ನು ಲಾಕ್​ಡೌನ್​ನ ಈ ಸಂದರ್ಭವು ಈಗ ಮತ್ತೆ ಮುನ್ನೆಲೆಗೆ ತಂದಿದೆ. ಲಾಕ್​ಡೌನ್ ಸಂಕಷ್ಟದ ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ಮಹಾನಗರಗಳಲ್ಲಿನ ಸರ್ಕಾರಿ ಮೂಲೆ ನಿವೇಶನ ಮಾರಿ ಬೊಕ್ಕಸ ತುಂಬಿಸಿಕೊಳ್ಳಲು ಆಲೋಚಿಸಿರುವಂತೆಯೇ ಇಲ್ಲಿಯೂ ಸಕ್ರಮಕ್ಕೆ ಮುಂದಾಗಲಿ ಎಂಬ ಚಿಂತನೆ ವ್ಯಾಪಕವಾಗತೊಡಗಿದೆ.

    ದಾಂಡೇಲಿ ಕೇವಲ 5 ಕುಟಂಬಗಳೊಂದಿಗೆ ಆರಂಭವಾದ ಒಂದು ಕುಗ್ರಾಮ. ಮುಂದೆ 1909 ಬ್ರಿಟಿಷರು ಬಂದು ದಾಂಡೇಲಿಯಲ್ಲಿ ಕಟ್ಟಿಗೆ ಮಿಲ್ ಆರಂಭಿಸಿದರು. ಕಟ್ಟಿಗೆ ಸಾಗಣೆಗಾಗಿ ರೈಲು ಮಾರ್ಗ ನಿರ್ವಿುಸಿದರು. ಪ್ಲೈವುಡ್ ಉತ್ಪಾದಿಸುವ ಐಪಿಎಂ ಕಾರ್ಖಾನೆ , ವೆಸ್ಟ್​ಕೋಸ್ಟ್ ಪೇಪರ್ ಮಿಲ್, ಫೇರೋ ಮ್ಯಾಂಗನೀಜ್ ಕಾರ್ಖಾನೆ ಆರಂಭವಾದವು. ಇಲ್ಲಿ ಕೆಲಸ ಮಾಡಲು ಕಾರ್ವಿುಕರು ಬಂದರು. ಅರಣ್ಯ ಪ್ರದೇಶದಲ್ಲಿಯೇ ಮನೆ ನಿರ್ವಿುಸಿಕೊಂಡರು. ಕೆಪಿಸಿ ವಿದ್ಯುತ್ ಉತ್ಪಾದನಾ ಘಟಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಯಿಂದ ಇಂದು ಹೆಮ್ಮರವಾಗಿ ಬೆಳೆದು ಕಾಗದ ನಗರಿ ಎಂಬ ಖ್ಯಾತಿ ಪಡೆಯಿತು.

    1962ರಲ್ಲಿ ಸರ್ಕಾರ ದಾಂಡೇಲಿ ನಗರದ ಡಿನೋಟಿಫಿಕೇಶನ್​ಗೆ ಆದೇಶ ಹೊರಡಿಸಿತು. ಅಂದಿನಿಂದ ದಾಂಡೇಲಿಗೆ ನೌಕರಿ, ವ್ಯಾಪಾರ, ಕೂಲಿಗಾಗಿ ರಾಜ್ಯ, ಹೊರ ರಾಜ್ಯದ ಜನರು ನಗರಕ್ಕೆ ಆಗಮಿಸಿ, ನಗರದ ಜನವಸತಿ ಹೆಚ್ಚಿದಂತೆ ಮನೆಗಳ ಅವಶ್ಯಕತೆ ಹೆಚ್ಚಿತು. ನಂತರ, ದಾಂಡೇಲಿ ಪುರಸಭೆ, ನಗರಸಭೆಯಾಗಿ ಬೆಳೆದರೂ ನಗರದ ಸುತ್ತಮುತ್ತ ಅರಣ್ಯ ಪ್ರದೇಶವೇ ಹೆಚ್ಚಾಗಿರುವುದರಿಂದ ಜನರಿಗೆ ಮನೆ ಕಟ್ಟಲು ಸ್ಥಳಾವಕಾಶ ಕಡಿಮೆ ಇತ್ತು. ಅತಿ ಹೆಚ್ಚು ಜನವಸತಿ ಇರುವ ಪ್ರದೇಶ ಕೂಡ ಅರಣ್ಯ ಇಲಾಖೆಯ ದಾಖಲೆಯಡಿಯಲ್ಲಿಯೇ ಇದ್ದ ಕಾರಣ ಮತ್ತು ನಗರದ ಸಂಪೂರ್ಣ ಪ್ರದೇಶ ಅರಣ್ಯ ಇಲಾಖೆಯಿಂದ ನಗರಸಭೆಗೆ ಹಸ್ತಾಂತರವಾಗದ ಪರಿಣಾಮ ನಗರದಲ್ಲಿ ಲೀಜ್ ಆಧಾರದ ಮೇಲೆ ಜಾಗ ಹಂಚಿಕೆಯಾಗಿ ಮನೆಗಳು ನಿರ್ಮಾಣ ಗೊಂಡವು. ಅಲ್ಲದೆ, ಅಕ್ರಮ ನಿವೇಶನಗಳ ಮೇಲೂ ಕಟ್ಟಡಗಳು ತಲೆಎತ್ತಿದವು.

    ಲೀಜ್ ಜಾಗೆಯ ಸಮಸ್ಯೆ: ಈಗ ನಗರದಲ್ಲಿರುವ ಸಾಕಷ್ಟು ಮಂದಿರಗಳು, ಶಾಲೆ-ಕಾಲೇಜ್​ಗಳು, ಮನೆ ಕಟ್ಟಡಗಳು ನಿರ್ವಣಗೊಂಡಿರುವ ನಿವೇಶನಗಳು 1981ರಲ್ಲಿಯೇ ಗುತ್ತಿಗೆ (ಲೀಜ್) ಆಧಾರದ ಮೇಲೆ ನೀಡಿದವುಗಳು ಆಗಿವೆ. ಈ ಪೈಕಿ ಒಂದಿಷ್ಟು ಜಾಗಗಳನ್ನು 5 ವರ್ಷಗಳ ಅವಧಿಯ ಲೀಜ್ ಮೇಲೆ ನೀಡಿದ್ದರೆ, ಇನ್ನಷ್ಟು 99 ವರ್ಷ ಲೀಜ್ ಆಧಾರದ ಮೇಲೆ ನೀಡಿದವುಗಳಾಗಿವೆ. ಇವು ಒಟ್ಟು 792 ನಿವೇಶನಗಳಾಗಿವೆ. 2000ನೇ ಇಸ್ವಿಯ ಫೆಬ್ರವರಿಯಲ್ಲಿ ಸರ್ಕಾರವು ಲೀಜ್ ಪಡೆದ ನಿವೇಶನಗಳನ್ನು ಮಾರಲು ಮುಂದಾಯಿತು. ಪ್ರತಿ ನಿವೇಶನಕ್ಕೆ 30 ಸಾವಿರ ರೂಪಾಯಿ ದರ ನಿಗದಿಪಡಿಸಲಾಯಿತು. ಈ ಪ್ರಕಾರ 486 ನಿವೇಶನಗಳಲ್ಲಿ ವಾಸ ಹಾಗೂ ವಾಣಿಜ್ಯಕ್ಕೆ ಉಪಯೋಗಿಸುತ್ತಿರುವ ಲೀಜ್​ದಾರರು ನಿಗದಿಪಡಿಸಿದ ಹಣ ಭರಣ ಮಾಡಿ ಖರೀದಿ ಮಾಡಿಕೊಂಡಿದ್ದಾರೆ. ಇನ್ನುಳಿದ 306 ಲೀಜ್​ದಾರರು ದರ ಹೆಚ್ಚಾಯಿತು ಎಂದು ಹಣ ಪಾವತಿಗೆ ಒಪ್ಪಲಿಲ್ಲ, ಹಾಗಾಗಿ ಇವು ಅಕ್ರಮ ಪ್ಲಾಟ್​ಗಳಾಗಿಯೇ ಉಳಿದುಕೊಂಡಿವೆ. ಈ ಪೈಕಿ 259 ನಿವೇಶನಗಳಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳನ್ನು ಕಟ್ಟಿಸಿಕೊಂಡಿದ್ದಾರೆ. ಇದರ ಹೊರತಾಗಿ, 47 ಪ್ಲಾಟ್​ಗಳು ಖಾಲಿ ಇವೆ. ಈ 47 ಲೀಜ್​ದಾರರು, ಯಾವುದೇ ರೀತಿ ಕಟ್ಟಡ ಕಟ್ಟಿಸದೆ, ಇವುಗಳ ಬಳಕೆ ಮಾಡದೆ ಇದುವರೆಗೂ ಖಾಲಿ ಇಟ್ಟಿದ್ದಾರೆ. ಇದರ ಮಧ್ಯೆ 2002-2003ರಲ್ಲಿ ಸರ್ಕಾರವು ಈ 47 ಖಾಲಿ ನಿವೇಶನಗಳನ್ನು ನಗರಸಭೆಯ ವಾಪ್ತಿಗೆ ಪಡೆದುಕೊಳ್ಳಬೇಕೆಂದು ಆದೇಶಿಸಿದೆ. ಈ ಮೊದಲು ನಗರದ ಎಲ್ಲ ಲೀಜ್ ಜಾಗದವರು ನಗರಸಭೆ ನಿಗದಿಪಡಿಸಿದ ಲೀಜ್ ಬಾಡಿಗೆಯನ್ನು ನಗರಸಭೆಗೆ 1981ರಿಂದ ತುಂಬತ್ತಿದ್ದರು. ಆದರೆ, 2002-2003ರಿಂದ ಸರ್ಕಾರ 5 ವರ್ಷ ಹಾಗೂ 99 ವರ್ಷ ಲೀಜ್​ದಾರರಿಂದ ಯಾವುದೇ ಲೀಜ್ ಬಾಡಿಗೆಯನ್ನು ಪಡೆದುಕೊಳ್ಳದಂತೆ ನಗರಸಭೆಗೆ ಆದೇಶಿಸಿತು. ಇದರಿಂದ ನಗರಸಭೆಗೆ ಬರುವ ಅಲ್ಪ ಸ್ವಲ್ಪ ಆದಾಯಕ್ಕೂ ಬೀಗ ಬಿದ್ದಂತಾಗಿದೆ. ಸರ್ಕಾರ ಈ ಪ್ಲಾಟ್​ಗಳಿಗೆ ವಾರ್ಷಿಕವಾಗಿ ಲೀಜ್ ಹಣ ಪಡೆಯಲು ಸೂಚಿಸಿದರೆ, ನಗರಸಭೆಗೆ ಕೋಟ್ಯಂತರ ರೂ. ಆದಾಯ ಬರುತ್ತದೆ. ಇನ್ನು, ಇವುಗಳನ್ನು ಮಾರಿದರಂತೂ ಬರುವ ಆದಾಯ ಸಹಸ್ರಾರು ಕೋಟಿ ರೂಪಾಯಿ ಆಗಲಿದೆ.

    ರಾಜ್ಯದಲ್ಲಿ ಅಕ್ರಮ, ಸಕ್ರಮ ಬಹು ವರ್ಷಗಳಿಂದ ಬಗೆಹರಿಯದೆ ಉಳಿದ ಒಂದು ಗಂಭೀರ ಸಮಸ್ಯೆ. ಈ ಸಮಸ್ಯೆ ಬಗೆಹರಿಸಲು ಮೊದಲು ಕಾನೂನಿನ ಅಡೆತಡೆಗಳನ್ನು ಬಗೆಹರಿಸಿಕೊಳ್ಳಬೇಕು. ಸರ್ಕಾರ ಅಕ್ರಮ, ಸಕ್ರಮಕ್ಕೆ ಚಿಂತನೆ ಮಾಡುತ್ತಿರುವುದು ಸಂತೋಷದ ಸಂಗತಿ. ಈ ಕುರಿತು ನಾನು ಕೂಡ ಅನೇಕ ಸಲ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿಕೊಂಡಿದ್ದೇನೆ. | ಆರ್.ವಿ. ದೇಶಪಾಂಡೆ ಶಾಸಕರು, ಹಳಿಯಾಳ-ದಾಂಡೇಲಿ ಜೊಯಿಡಾ ಕೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts