More

    ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಗು ಸಾವು, ಬಾಣಂತಿ ಸ್ಥಿತಿಯೂ ಗಂಭೀರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

    ದಾಬಸ್‌ಪೇಟೆ: ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮಗು ಗರ್ಭದಲ್ಲೇ ಮೃತಪಟ್ಟಿದೆ. ಈಗ ಬಾಣಂತಿ ಸ್ಥಿತಿಯೂ ಗಂಭೀರವಾಗಿದ್ದು, ಇದಕ್ಕೆಲ್ಲ ದಾಬಸ್‌ಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

    ಒಡಿಶಾ ಮೂಲದ ಕೂಲಿ ಕಾರ್ಮಿಕರಾದ ಸುಜಾ (22) ತೊಂದರೆಗೆ ಒಳಗಾಗಿರುವ ಬಾಣಂತಿ. ಸುಜಾ ಹಾಗೂ ಪತಿ ರಘು ಆರು ತಿಂಗಳಿಂದ ರಾಯರಪಾಳ್ಯದ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೊದಲಿನಿಂದಲೂ ಈಕೆ ಸರ್ಕಾರಿ ಆಸ್ಪತ್ರೆಯಲ್ಲಿ ಸಲಹೆ ಪಡೆಯುತ್ತಿದ್ದರು. ಗುರುವಾರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ಬಂದಿದ್ದರು. ಆದರೆ, ಆ ಸಂದರ್ಭದಲ್ಲಿ ವೈದ್ಯರು ಇರಲಿಲ್ಲ. ಶುಶ್ರೂಷಕಿಯರು ಪರೀಕ್ಷಿಸಿದಾಗ, ರಕ್ತದೊತ್ತಡದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ನೆಲಮಂಗಲ ಅಥವಾ ತುಮಕೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಆದರೆ ತಕ್ಷಣವೇ ಆಂಬುಲೆನ್ಸ್ ಲಭ್ಯವಾಗಲಿಲ್ಲ. ಗಂಟೆ ಬಳಿಕ ವೈದ್ಯರೇ ಯಾವುದೋ ಒಂದು ವಾಹನ ವ್ಯವಸ್ಥೆ ಮಾಡಿ ತ್ಯಾಮಗೊಂಡ್ಲುಗೆ ಕಳುಹಿಸಿಕೊಟ್ಟಿದ್ದರು. ಆದರೆ, ಅಲ್ಲಿಯೂ ವೈದ್ಯರು ಇಲ್ಲದ ಕಾರಣ ತುಮಕೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು.

    ಆ ವೇಳೆಗೆ ಮಗು ಗರ್ಭದಲ್ಲೇ ಮೃತಪಟ್ಟಿತ್ತು. ಇದರಿಂದಾಗಿ ಆಕೆಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ ವೈದ್ಯರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದೊತ್ತಡ ನಿಯಂತ್ರಣಕ್ಕೆ ಬಂದ ಬಳಿಕ ಶಸಚಿಕಿತ್ಸೆ ಮಾಡಿದ ವೈದ್ಯರು ಮಗುವನ್ನು ಹೊರತೆಗೆದಿದ್ದರು. ಆದರೆ ಪ್ರಜ್ಞಾಹೀನ ಸ್ಥಿತಿ ತಲುಪಿರುವ ಸುಜಾ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

    ದಾಬಸ್‌ಪೇಟೆಯಲ್ಲಿ ಪ್ರತಿಭಟನೆ: ಗರ್ಭಿಣಿ ಸ್ಥಿತಿ ಹದಗೆಟ್ಟರೂ ಸರ್ಕಾರಿ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಕೆಲ ಸಂಘಟನೆಗಳ ಮುಖಂಡರು ಆಸ್ಪತ್ರೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಕನಿಷ್ಠ ನಾಲ್ವರು ವೈದ್ಯರನ್ನು ನೇಮಿಸಬೇಕು. ಅದರಲ್ಲಿ ಒಬ್ಬರು ಮಹಿಳಾ ವೈದ್ಯರಾಗಿರಬೇಕು. 6 ಡಿ ದರ್ಜೆ ನೌಕರರು ಇರಬೇಕು. 2 ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ರಾತ್ರಿ ಪಾಳಿಯಲ್ಲಿ ಕಡ್ಡಾಯವಾಗಿ ವೈದ್ಯರು ಇರಬೇಕು ಎಂದು ಪ್ರತಿಭಟನಾಕಾರರ ಒತ್ತಾಯಿಸಿದರು.

    ಮುಖಂಡರಾದ ಎಡೇಹಳ್ಳಿ ಪ್ರದೀಪ್, ದಾಬಸ್‌ಪೇಟೆ ಮಹೇಶ್, ಬಿಜೆಪಿ ಉಪಾಧ್ಯಕ್ಷ ಜಗದೀಶ್ ಚೌಧರಿ, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷ ಮುರಳೀಧರ, ಜಯಕರ್ನಾಟಕ ಅಧ್ಯಕ್ಷ ಸುಚಿಂದ್ರ, ಸೀಶಕ್ತಿ ಸಂಘಟನೆ ಅಧ್ಯಕ್ಷ ವೇದಾವತಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಸಿ. ಜಯಣ್ಣ, ಜಿ.ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿಇಒ ಜತೆ ಚರ್ಚಿಸುವ ಭರವಸೆ: ಆಸ್ಪತ್ರೆಯಲ್ಲಿ ಕಾಯಂ ವೈದ್ಯರನ್ನು ನೇಮಿಸಲಾಗಿದೆ. ಇನ್ನಿಬ್ಬರು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವುದು, ಡಿ ದರ್ಜೆ ಸಿಬ್ಬಂದಿಯ ಕಾಯಂ ನೇಮಕಾತಿ ಸೇರಿ ಆಸ್ಪತ್ರೆ ಮೂಲಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಜಿಪಂ ಸಿಇಒ ಅವರ ಜತೆ ಚರ್ಚಿಸುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts