More

    ಸಂಸ್ಕೃತಿ ಅಭಿವ್ಯಕ್ತಿಯೇ ಜನಪದ

    ರಿಪ್ಪನ್​ಪೇಟೆ: ಜನರ ಮನಸ್ಸಿನ ಭಾವನೆಗಳ ಸಂಸ್ಕೃತಿಯ ಅಭಿವ್ಯಕ್ತಿಯೇ ಜನಪದ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.

    ಸಮೀಪದ ಹೆದ್ದಾರಿಪುರ ಗ್ರಾಪಂ ಆವರಣದಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ನೆಹರು ಯುವ ಕೇಂದ್ರ ನಾಡೋಜ ಡಾ. ಎಚ್.ಎಲ್.ನಾಗೇಗೌಡರ ಸ್ಮರಣಾರ್ಥ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಪ್ರಥಮ ಜಾನಪದ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು.

    ಗ್ರಾಮಿಣ ಸಂಸ್ಕೃತಿ ಇತ್ತೀಚೆಗೆ ಅಳಿದು ಹೋಗುತ್ತಿದೆ. ಅಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಸಂಘಟನೆಗಳಿಂದ ಆಗಬೇಕಾಗಿದೆ. ಜನಪದ ಸಾಹಿತ್ಯ, ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಪ್ರಾಚೀನ ಇತಿಹಾಸವಿದೆ. ಶ್ರೀಮಂತ ಪರಂಪರೆಯನ್ನು ಹೊಂದಿರುವ ಜನಪದ ಜನರ ಆಶಾಭಾವವಾಗಿದೆ. ಇಂತಹ ಜನಪದವನ್ನು ನಮ್ಮ ಯುವ ಪೀಳಿಗೆಗೆ ತಲುಪಿಸಬೇಕಾದ ಅಗತ್ಯ ನಮ್ಮೆಲ್ಲರ ಮೇಲಿದೆ ಎಂದರು.

    ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆಗೆ ವಿಶಿಷ್ಟವಾದ ಪರಂಪರೆಯಿದೆ. ಸಂಘಟಿಸುವಲ್ಲಿ ಡಿ.ಮಂಜುನಾಥ ಮತ್ತು ಅವರ ತಂಡದ ಪರಿಶ್ರಮ ಶ್ಲಾಘನೀಯ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಅವಕಾಶವನ್ನು ನೀಡುವ ಮೂಲಕ ಕಲಾವಿದರನ್ನು ಪೋ›ತ್ಸಾಹಿಸುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಸಂಪನ್ಮೂಲದ ಹಿಂದೆ ಬೀಳದೆ ಸಂಘಟನೆಗೆ ಆದ್ಯತೆಯನ್ನು ಕೊಡುವ ಕಾರ್ಯ ನಡೆಯುತ್ತಿರುವುದು ಉತ್ತಮ ಎಂದು ಹೇಳಿದರು.

    ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಕಲೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಶ್ರೀಮಂತ ಪರಂಪರೆಯಿದೆ. ಅಂತಹ ಪರಂಪರೆಯನ್ನು ಗಟ್ಟಿಗೊಳಿಸುವ ಕಾರ್ಯಗಳಾಗಬೇಕಿದೆ. ಶಿವಮೊಗ್ಗ ಜಿಲ್ಲೆ ಸಂಸ್ಕೃತಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಪ್ರತಿಭೆ ಯಾರ ಸ್ವತ್ತು ಅಲ್ಲ. ಅಂತಹ ಪ್ರತಿಭೆಗಳನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ. ಒಂದು ಹೊಸ ಪ್ರಯತ್ನ ಮಾಡುವಾಗ ಅನೇಕ ಅಡೆತಡೆಗಳು ಬರುತ್ತವೆ. ಅವುಗಳನ್ನೆಲ್ಲ ದಾಟಿ ಮುಂದೆ ಬರಬೇಕಾಗಿದೆ. ನಿಂದನೆಗಳಿಗೆ ಅಂಜಿದರೇ ನಮ್ಮ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಇದಕ್ಕೆ ನಮ್ಮ ಅನೇಕ ದಾರ್ಶನಿಕರು ನಮಗೆ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.

    ತಾಪಂ ಮಾಜಿ ಅಧ್ಯಕ್ಷ ಕೆ.ವೈ.ವಾಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಮೋಹನ್ ಚಂದ್ರಗುತ್ತಿ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಜಿಪಂ ಸದಸ್ಯೆ ಶ್ವೇತಾ ಬಂಡಿ ಕಲಾವಿದರ ಗಣತಿಗೆ ಚಾಲನೆ ನೀಡಿದರು. ಎಪಿಎಂಸಿ ಸದಸ್ಯ ಲೋಕಪ್ಪಗೌಡ ಪ್ರಾಸ್ತಾವಿವಾಗಿ ಮಾತನಾಡಿದರು. ತಾಪಂ ಅಧ್ಯಕ್ಷೆ ಸುಶೀಲಮ್ಮ ರಘುಪತಿ, ಹೆದ್ದಾರಿಪುರ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಬಸಪ್ಪ, ಉಪಾಧ್ಯಕ್ಷೆ ಹೇಮಾ ನಾಗರಾಜ್, ಸದಸ್ಯರಾದ ಎ.ಎಲ್.ಹೇಮರಾಜ್, ಡಿ.ಮಂಜಪ್ಪ, ವಿ.ಡಿ.ಲಿಂಗಪ್ಪ, ಮಂಜುನಾಥ ತಳಲೆ, ನೇತ್ರಾವತಿ, ಚಂದ್ರಶೇಖರ್, ಪಾರ್ವತಮ್ಮ, ಗೌರಮ್ಮ, ನಾಗರತ್ನಮ್ಮ, ಶೋಭಾ, ಪ್ರಮೀಳಾ, ಪಿಡಿಒ ನಟೇಶ್, ವಿಎಸ್​ಎಸ್​ಎನ್ ಅಧ್ಯಕ್ಷ ದಿನೇಶ ಗೌಡ, ಉಪಾಧ್ಯಕ್ಷ ಮಂಜುನಾಥ ಇದ್ದರು.

    ಯಮುನಾ ಸತೀಶ್ ಪ್ರಾರ್ಥಿಸಿದರು. ಹೊಸನಗರ ಕಜಾಪ ಅಧ್ಯಕ್ಷ ಎನ್.ಸತೀಶ್ ಸ್ವಾಗತಿಸಿದರು. ಮಂಜುನಾಥ ಕಾಮತ್ ವಂದಿದರು. ಶಿವಮೂರ್ತಿ ಹಾಗೂ ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು.

    ಜನಪದದ ನಿರ್ಲಕ್ಷ್ಯ ಬೇಡ: ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಜನಪದ ಕಲಾವಿದ ಗುಡ್ಡಪ್ಪ ಜೋಗಿ ಮಾತನಾಡಿ, ಅನಕ್ಷರಸ್ಥರೇ ಹೆಚ್ಚಿರುವ ಜನಪದ ಪ್ರಪಂಚ ಒಂದು ರೀತಿಯ ನಿರ್ಲಕ್ಷ್ಯೆಗೆ ಒಳಗಾಗುತ್ತಿದೆ. ಪ್ರಾದೇಶಿಕ ಮಹತ್ವವನ್ನು ಹೊಂದಿರುವ ಜನಪದ ಜನರ ಜೀವನಾಡಿಯಾಗಿದೆ ಎಂದು ಹೇಳಿದರು.

    ಜನಪದ ಕಲಾವಿದರು ಸರ್ಕಾರಗಳ ಮುಂದೆ ಕೈ ಕಟ್ಟಿ ನಿಲ್ಲುವಂತಾಗಿದೆ. ಸರ್ಕಾರಗಳು ಜನಪದವನ್ನು ನಿರ್ಲಕ್ಷ್ಯಂದ ಕಾಣುತ್ತಿರುವುದು ಬೇಸರದ ಸಂಗತಿ. ಜನಪದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಸರ್ಕಾರ, ಅಕಾಡೆಮಿಗಳ ಮೂಲಕ ನಡೆಸಬೇಕಿದೆ ಎಂದು ಹೇಳಿದರು.

    ‘ಜೋಗಿ’ ಎಂಬುದು ಒಂದು ಜಾತಿ ಸೂಚಕ ಪದವಲ್ಲ. ಅದೊಂದು ಪಾರಂಪರಿಕ ಆಚರಣೆ. ಇಂತಹ ಆಚರಣೆಕಾರರನ್ನು ಜೋಗಿ ಜನಾಂಗ ಎಂದು ಗುರುತಿಸಲಾಗುತ್ತಿದೆ. ಕಿನ್ನರಿ ಜೋಗಿ ಹುಟ್ಟಿಗೆ ಮಹಾಭಾರತದ ಪೌರಾಣಿಕ ಹಿನ್ನೆಲೆ ಇದ್ದು ಇತ್ತೀಚೆಗೆ ಜನರನ್ನು ರಂಜಿಸುವ ವಿಶೇಷ ಜಾನಪದ ಕಲೆಯಾಗಿ ಪ್ರಚಲಿತದಲ್ಲಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts