More

    ಸಂಸ್ಕಾರ, ಅಧ್ಯಾತ್ಮ ಬದುಕಿನ ಸಂತ

    ಹುಬ್ಬಳ್ಳಿ: ಹುರಕಡ್ಲಿ ಅಜ್ಜನವರ 30ನೇ ಪುಣ್ಯ ಸ್ಮರಣೋತ್ಸವ ಜ. 2ರಿಂದ ಎರಡು ದಿನಗಳವರೆಗೆ ಭಕ್ತಿಭಾವದಿಂದ ನವಲಗುಂದದಲ್ಲಿ ನಡೆಯಲಿದ್ದು, ಸಂಸ್ಕೃತಿ, ಸಂಸ್ಕಾರ, ಮೌಲ್ಯ, ಅಧ್ಯಾತ್ಮದೊಂದಿಗೆ ಬದುಕಿದ ಸಂತನ ನೆನೆಯಲು ಸಾವಿರಾರು ಭಕ್ತರು ಸೇರಲಿದ್ದಾರೆ.

    ನವಲಗುಂದ ತಾಲೂಕಿನ ಇಬ್ರಾಹಿಂಪುರದ ಶರಣ ದಂಪತಿ ನಾಗಲಿಂಗ ಚನ್ನಬಸವ್ವ ಅವರ 2ನೇ ಪುತ್ರರಾಗಿ 16-5- 1900ರಲ್ಲಿ ಜನಿಸಿದ ಅನ್ನದಾನೀಶರು 20ನೇ ವರ್ಷಕ್ಕೆ ಬಸವಣ್ಣನವರ ಕಾಯಕವೇ ಕೈಲಾಸ ನಾಣ್ಣುಡಿಯಂತೆ ಕನ್ನಡ ಶಾಲೆ ಮಾಸ್ತರರಾಗಿ ಸೇವೆ ಆರಂಭಿಸಿದರು.

    ಅಜ್ಜ ಫಕೀರಪ್ಪ ಸುಂಕದ ಅವರಿಗೆ ಪವಾಡ ಪುರುಷ ನಾಗಲಿಂಗ ಯತಿಗಳು ಹುರಿದ ಕಡಲೆ ಹೊಲದಲ್ಲಿ ಬಿತ್ತಿಸಿದ್ದರು. ಆಗ ಫಸಲು ಹುಲುಸಾಗಿ ಬಂದಿತ್ತು. ಅಂದಿನಿಂದ ಶಾಲೆ ಮಾಸ್ತರರು ಹುರಕಡ್ಲಿ ಅನ್ನದಾನೀಶ ಎಂದು ಪ್ರಖ್ಯಾತರಾದರು. ಸಂಸಾರವೆಂಬ ಜಂಜಾಟಕ್ಕೆ ಶರಣು ಹೊಡೆದು ವೈರಾಗ್ಯದತ್ತ ವಾಲಿದರು.

    ನಾಗನೂರ ಶಿವಾನಂದ ಗುರುಗಳಿಂದ ಪ್ರಭಾವಿತರಾಗಿ ಅವರಿಂದ ಮಂತ್ರದೀಕ್ಷೆ ಪಡೆದು ಗೌರಿ ಉಪಾಸನಾ ಮಹತ್ವ ಅರಿತುಕೊಂಡರು.

    ಕೋಲ್ಕತದ ರಾಮಕೃಷ್ಣ ಆಶ್ರಮದ ಗೌರ್ಯಾನಂದರಿಂದ ಶಕ್ತಿ ಉಪಾಸನಾ ಆಯಾಮಗಳನ್ನು ವ್ಯಾಸಂಗ ಮಾಡಿ ಜಾಗೃತಾವಸ್ಥೆ, ಸ್ವಪ್ನಾವಸ್ಥೆ, ಸುಷುಪ್ತಾವಸ್ಥೆ, ತೂರ್ಯಾವಸ್ಥೆಯ ಪರಿಣಾಮ, ಫಲಗಳನ್ನು ಮನಗಂಡರು.

    ಜಗನ್ಮಾತೆ ಶ್ರೀಗೌರಿ ಕರುಣಾಂಬೆ, ದಯಾಸಾಗರೆ ಭಕ್ತೋದ್ಧಾರೆ. ಅವಳನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿದರೆ ತೀವ್ರ ಆಶೀರ್ವದಿಸುತ್ತಾಳೆ. ಜೊತೆಗೆ ತಾಂತ್ರಿಕ ಶಕ್ತಿಯ ಯಂತ್ರ ತಂತ್ರ ಮಂತ್ರ ಅಭ್ಯಸಿಸಿ ಶ್ರೀ ಚಕ್ರಪೂಜೆ, ಲಿಂಗಾರ್ಚನೆ, ರುದ್ರಾಕ್ಷಿ ಜಪದಿಂದ ಒಳ್ಳೆಯ ಸಾಧಕನಾಗಬಲ್ಲೆ ಎಂದು ಹರಿಸಿದ ಗೌರ್ಯಾನಂದರು ಹಸ್ತಸಾಮುದ್ರಿಕವನ್ನೂ ಕಲಿಸಿ ತಮ್ಮ ಅನುಭವ ಸಾರ ಧಾರೆ ಎರೆದರು.

    ಚಿದಾನಂದ ಅವಧೂತರ ಶ್ರೀಬಗಳಾಂಬಾ ಸ್ತುತಿಯಿಂದ ವಾಕ್ಸಿದ್ಧಿ ಸಂಪಾದಿಸಿ ಸಿದ್ಧಾರೂಢರ ಆಧ್ಯಾತ್ಮಿಕತೆಗೆ ಶರಣಾಗಿ ಅಥಣಿ ಶಿವಯೋಗಿಗಳ ಕೃಪಾಕಟಾಕ್ಷ ಪಡೆದು ಪ್ರಸಿದ್ಧ ವೈದ್ಯ ಪಂ. ತಾರಾನಾಥರ ಸಂಪರ್ಕ ಲಭಿಸುವದರೊಂದಿಗೆ ಅಜ್ಜನವರ ಜೀವನ ಪೂರ್ತಿಯಾಗಿ ಪರಿವರ್ತನೆಗೊಂಡಿತು. ಅಷ್ಟ ಸಿದ್ಧಿಗಳೂ ಕರಗತವಾದವು.

    ಅಜ್ಜನವರ 12 ತಾಸಿನ ಪೂಜೆ ದ್ವೈತದಿಂದ ಅದ್ವೈತಕಡೆಗೆ ತಿರುಗಿ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದಿಂದ ಪ್ರೇರಣೆ ದೊರಕಿ ಕೊನೆ ಹಂತದಲ್ಲಿ ಅನೇಕತ್ವದ ಸ್ಥಿತಿಯಲ್ಲಿ ಲಿಂಗಾರ್ಚನೆಯಲ್ಲಿ ನಿರತರಾಗಿ ದೇವಿ ಒಬ್ಬಳೆ, ದೇವ ಒಬ್ಬನೆ ಅದೇ ಶಿವ ಶಕ್ತಿ, ಬ್ರಹ್ಮಾಂಡ, ಜೀವಾತ್ಮ ಎಲ್ಲವೂ ಎಂದು ಸಂದೇಶ ನೀಡಿದರು.

    90 ವರ್ಷ ಬಾಳಿದ ಸಂತ ಶ್ವೇತಧಾರಿ, ಹಸ್ತಸಾಮುದ್ರಿಕ, ಆಧ್ಯಾತ್ಮಿಕ, ಶಿಕ್ಷಣ ಪ್ರೇಮಿ ಸಂತ ಜ. 3, 1990ರಂದು ಅಮರತ್ವ ಪಡೆದರು.

    | ಬಿ.ಎಸ್. ಪಾಟೀಲ ನಿವೃತ್ತ ಗ್ರಂಥಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts