More

    ಸಂಸ್ಕಾರದ ಕೇಂದ್ರಗಳಾಗಲಿ ದೇಗುಲಗಳು  * ವಾಗ್ಮಿ ಚಕ್ರವರ್ತಿ ಸೂಲಿಬೆಲೆ – ದೇವಾಲಯಗಳ ಚಿಂತನಾ ಸಭೆ 

    ದಾವಣಗೆರೆ: ಸಮಾಜದಲ್ಲಿ ಸಂಸ್ಕಾರದ ಕೊರತೆ ಇದ್ದು, ಶಿಥಿಲತೆಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ದೇವಸ್ಥಾನಗಳು ಸಂಸ್ಕಾರ ಬಿತ್ತುವ ಕೇಂದ್ರಗಳಾಗಬೇಕು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆಶಯ ವ್ಯಕ್ತಪಡಿಸಿದರು.
    ಇಲ್ಲಿನ ದಾವಣಗೆರೆ-ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸಮುದಾಯ ಭವನದಲ್ಲಿ, ದೇವಾಲಯ ಸಂವರ್ಧನಾ ಸಮಿತಿ-ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ದೇವಾಲಯಗಳ ಆಡಳಿತ ಸಮಿತಿಯವರ ಚಿಂತನಾ ಸಭೆಯಲ್ಲಿಮಾತನಾಡಿದರು.
    ದೇವಸ್ಥಾನಗಳು ಧರ್ಮ ಸಂಸ್ಥಾನ ಕೇಂದ್ರಗಳಾಗಬೇಕು. ಸಮಾಜದ ಸಹಭಾಗಿತ್ವ ಇರಬೇಕು. ಮನೆಗಳಲ್ಲಿ ಕಲಿಸಲಾಗದ ಸಂಸ್ಕಾರವನ್ನು ದೇವಸ್ಥಾನಗಳು ಕಲಿಸುತ್ತಿವೆ. ಸಾಮಾಜಿಕ ಕಾರ್ಯಕರ್ತರು ದೇವಾಲಯಗಳ ರಾಷ್ಟ್ರದ ಜೀವಾಳ. ದೇವಾಲಯವನ್ನು ಗ್ರಾಮ, ಸಮಾಜ ಹಾಗೂ ರಾಷ್ಟ್ರದ ಕೇಂದ್ರ ಮಾಡಬೇಕಾಗಿದೆ ಎಂದರು.
    ಎಲ್ಲಾ ರೀತಿಯ ಸೇವಾ ಕಾರ್ಯಗಳ ಕೇಂದ್ರಗಳಾಗಿ ದೇಗುಲಗಳನ್ನು ಬೆಳೆಸಬೇಕು. ಧಾರ್ಮಿಕ ಕೇಂದ್ರದ ಜತೆಗೆ ಸೇವೆ ಹಾಗೂ ಶಿಕ್ಷಣ ಕೇಂದ್ರಗಳೂ ಆಗಬೇಕು. ಆಗ ಸಮಾಜಕ್ಕೆ ಭದ್ರ ಬುನಾದಿಯಾಗುತ್ತದೆ. ಗುಡಿ ಜನರ ಜೀವನಾಡಿಯಾಗಬೇಕು ಎಂದು ಹೇಳಿದರು.
    ಸನಾತನ ಧರ್ಮವನ್ನು ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಧರ್ಮದ ಮಾರ್ಗದಲ್ಲಿ ಸಾಗಿದರೆ, ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
    ಕಣ್ವಕುಪ್ಪೆ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯತ್ವದಿಂದ ಮಾನವತ್ವದೆಡೆಗೆ ಸಾಗಬೇಕಾಗಿದೆ. ಸಜ್ಜನ ವ್ಯಕ್ತಿಗಳ ನಿರ್ಮಾಣಕ್ಕಾಗಿ ದೇವಾಲಯದ ಕಾರ್ಯದ ಅವಶ್ಯಕತೆ ಇದೆ. ಸಜ್ಜನ ಶಕ್ತಿ ಸೂಕ್ತಶಕ್ತಿಯನ್ನು ಜಾಗೃತ ಶಕ್ತಿಯನ್ನಾಗಿ ಮಾಡಬೇಕಾದ ಕಾಲ ಒದಗಿ ಬಂದಿದೆ ಎಂದರು.
    ದೇವಾಲಯಗಳ ಮುಂದಿನ ಚಟುವಟಿಕೆ ಮತ್ತು ಅಗತ್ಯತೆಗಳ ಬಗ್ಗೆ ದೇವಾಲಯ ಸಂವರ್ಧನ ಸಮಿತಿ -ಕರ್ನಾಟಕ ರಾಜ್ಯ ಸಂಯೋಜಕ ಮನೋಹರ್ ಮಠದ್ ವಿವರಿಸಿದರು.
    ಆರೆಸ್ಸೆಸ್ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ದೇವಾಲಯ ಕಾರ್ಯದ ಜತೆಗೆ ಸಮಾಜಸೇವೆ ಹಾಗೂ ದೇಶಸೇವೆಯೂ ಒಟ್ಟಾಗಿ ಸಾಗಬೇಕು. ದೇವಾಲಯ ಸಮಾಜದ ಏಕತಾ ಕೇಂದ್ರವಾಗಬೇಕು ಎಂದು ಹೇಳಿದರು.
    ಸಭೆಯಲ್ಲಿ 150ಕ್ಕೂ ಅಧಿಕ ದೇವಾಲಯಗಳ 510 ಧರ್ಮದರ್ಶಿ ಮಂಡಳಿ ಸದಸ್ಯರಿದ್ದರು. ದೇವಾಲಯ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಶ್ರೀನಿವಾಸ್ ನಿರೂಪಿಸಿದರು. ಧರಣೇಂದ್ರ ಸ್ವಾಗತಿಸಿದರು. ಕರಿಯಣ್ಣ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts