More

    ಸಂಸ್ಕಾರದಿಂದಲೇ ಭಾರತಕ್ಕೆ ವಿಶ್ವಗುರು ಪಟ್ಟ-ಬಿ.ಸಿ. ಉಮಾಪತಿ

    ದಾವಣಗೆರೆ: ಭಾರತೀಯರು ಕಲಿತ ಸಂಸ್ಕಾರದ ಪರಿಣಾಮವಾಗಿ ಭಾರತ ಇಂದಿಗೂ ಇಡೀ ವಿಶ್ವದಲ್ಲಿ ಗುರು ಸ್ಥಾನದಲ್ಲಿದೆ ಎಂದು ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಹೇಳಿದರು.
    ಮಕ್ಕಳ ಸಾಹಿತ್ಯ ಪರಿಷತ್ತಿನ ದಾವಣಗೆರೆ ದಕ್ಷಿಣ ವಲಯ ಹಾಗೂ ಶಾಲಾ ಶಿಕ್ಷಣ- ಸಾಕ್ಷರತೆ ಇಲಾಖೆಯ ಸಹಯೋಗದಲ್ಲಿ ಜಿಲ್ಲಾ ಗುರುಭವನದಲ್ಲಿ ಭಾನುವಾರ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಭಾರತ ಪುಣ್ಯಭೂಮಿ. ವೈದ್ಯರು, ಇಂಜಿನಿಯರ್‌ಗಳು, ಐಎಎಸ್, ಐಒಇಎಸ್ ಏನನ್ನೇ ಓದಿದರೂ ವಿದ್ಯಾರ್ಥಿಗಳು ಧಾರ್ಮಿಕ ಪರಂಪರೆ, ದೇಶಭಕ್ತಿ ಮರೆಯುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಕೆಯೂ ಅಗತ್ಯ. ಯಾವುದೇ ಧರ್ಮೀಯರಿರಲಿ ಧರ್ಮಾಚರಣೆ ಪಾಲಿಸಿದರೆ ದುಶ್ಚಟಗಳತ್ತ ವಾಲುವುದನ್ನು ತಡೆಯಬಹುದು ಎಂದು ಹೇಳಿದರು.
    ಪಾಲಕರು ಸಮಸ್ಯೆಗಳನ್ನು ಹೇಳಿಕೊಳ್ಳದೆ ಮಕ್ಕಳನ್ನು ವಿದ್ಯಾವಂತರಾಗಿಸಲು ಶ್ರಮಿಸುತ್ತಿದ್ದಾರೆ. ನಾವು ಪೂಜಿಸುವ ದೇವರು ವರ ಕೊಡದಿದ್ದರೂ ಹೆತ್ತವರು ಮಕ್ಕಳ ಬೇಕು ಬೇಡ ಎಲ್ಲದರ ಬಗ್ಗೆ ಗಮನ ಹರಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಋಣಿಯಾಗಬೇಕಿದೆ ಎಂದರು.
    ಹಿಂದೆಲ್ಲ ರೈತರ ಮಕ್ಕಳು ಕೃಷಿ ಜೀವನ ಮಾಡುತ್ತ, ಕೂಲಿಕಾರ್ಮಿಕರ ಮಕ್ಕಳು ಅದೇ ವೃತ್ತಿ ಮುಂದುವರಿಸುತ್ತಿದ್ದರು. ಇಂದಿನ ಕಾಲಘಟ್ಟ ಬದಲಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದೇ ಪಾಲಕರ ಜೀವನದ ದೊಡ್ಡ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.
    ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಮಾತನಾಡಿ, ಪಠ್ಯಶಿಕ್ಷಣ, ಮೌಲ್ಯ ಶಿಕ್ಷಣ ಹಾಗೂ ಲೌಕಿಕ ಶಿಕ್ಷಣ ಇವು ಇಂದಿನ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಓದುವುದು, ಸುಳ್ಳು ಹೇಳದಿರುವುದು, ವಿಶ್ವಾಸ ಗಳಿಸುವುದು, ಮೌಲ್ಯ ಶಿಕ್ಷಣ ಇವುಗಳ ಜತೆಗೆ ಬಾಹ್ಯ ಪ್ರಪಂಚ ಜ್ಞಾನವನ್ನು ರೂಢಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.
    120 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ವಿಭಾಗದ ಅಧ್ಯಕ್ಷ ಎ.ಜೆ.ರವಿಕುಮಾರ್, ಪ್ರಾಧ್ಯಾಪಕ ಮಂಜುನಾಥ್ ಶ್ಯಾಗಲೆ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ಶಾಮನೂರಿನ ಅನ್ನಪೂರ್ಣಮ್ಮ, ಮಹಾನಗರ ಪಾಲಿಕೆ ಪ್ರಥಮದರ್ಜೆ ಸಹಾಯಕ ಎಸ್.ಡಿ.ತ್ರಿನೇತ್ರ ಇದ್ದರು. ಡಾ.ಧನಂಜಯಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಎಂ.ಆರ್. ಹರಿ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts