More

    ಸಂವಿಧಾನದ ಹೆಮ್ಮರವೇ ಆಶ್ರಯ- ಡಾ.ಚನ್ನಪ್ಪ 

    ದಾವಣಗೆರೆ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನ ಮತ್ತು ಚಿಂತನೆಗಳು ದೊಡ್ಡ ಮರದಂತೆ ಆಶ್ರಯ ಹಾಗೂ ಫಲ ನೀಡುತ್ತಿವೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಚನ್ನಪ್ಪ ತಿಳಿಸಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದ ಮರದ ನೆರಳು ಪಡೆದ ನಾವು, ಅದನ್ನು ಪೋಷಿಸುವ ಜವಾಬ್ದಾರಿ ಹೊಂದಿದ್ದೇವೆ ಎಂದು ತಿಳಿಸಿದರು.
    ಅಂಬೇಡ್ಕರ್ ಅವರಿಗೆ ಭಾರತರತ್ನ ಗೌರವ ಸಿಕ್ಕಿದೆ. ಆದರೆ, ಅವರು ವಿಶ್ವರತ್ನವೇ ಆಗಿದ್ದಾರೆ. ವಿಶ್ವಮಾನವರೆಂದು ಅವರನ್ನು ದಿನನಿತ್ಯವೂ ಸ್ಮರಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
    ಅಪರ ಜಿಲ್ಲಾಧಿಕಾರಿ ಬಿ.ಎನ್.ಲೋಕೇಶ್ ಮಾತನಾಡಿ, ಅಂಬೇಡ್ಕರ್ ಅವರು ಮಹಾ ಮಾನವತಾವಾದಿ. ಅವರು ರಚಿಸಿರುವ ಸಂವಿಧಾನ ಕೇವಲ ಮೂಲ ಕಾನೂನು ಅಷ್ಟೇ ಅಲ್ಲ, ಅದು ಸಾಮಾಜಿಕ ರೋಗಗಳಿಗೆ ಚಿಕಿತ್ಸೆ ನೀಡುವ ಔಷಧವೂ ಆಗಿದೆ ಎಂದರು.
    ದೇಶ ಎಷ್ಟೆಲ್ಲ ಪ್ರಗತಿ ಸಾಧಿಸಿದ್ದರೂ ಸಹ, ಇಂದಿಗೂ ಒಂದಲ್ಲ ಒಂದು ರೂಪದಲ್ಲಿ ಶೋಷಣೆಗಳು ನಡೆಯುತ್ತಿವೆ. ಇದರ ನಿವಾರಣೆಗೆ ಸಂವಿಧಾನದಲ್ಲಿರುವ ಅಂಶಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕಿದೆ ಎಂದರು.
    ಸಮಾರಂಭದಲ್ಲಿ ದಾವಣಗೆರೆ ನಗರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ. ನಾಗರಾಜ, ಹಿಂದುಳಿದ ವರ್ಗಗಳ ಅಧಿಕಾರಿ ರಮೇಶ್ ಮಾದರ್, ದಲಿತ ಮುಖಂಡರಾದ ಬಿ.ಎಂ.ಈಶ್ವರ್, ಆವರಗೆರೆ ವಾಸು ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts