More

    ಸಂವಿಧಾನಕ್ಕೆ ಆಪತ್ತು ಯಾರ ಅವಧಿಯಲ್ಲಿ

    ಚಿತ್ರದುರ್ಗ: ಸಂವಿಧಾನಕ್ಕೆ ಆಪತ್ತು ನೆಹರು, ಇಂದಿರಾಗಾಂಧಿ ಅವಧಿಯಲ್ಲೋ, ಪ್ರಧಾನಿ ನರೇಂದ್ರಮೋದಿ ಅವರ ಕಾಲದಲ್ಲೋ ಎಂಬುದನ್ನು ಆತ್ಮಲೋಕನ ಮಾಡಿಕೊಂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೇ ಹೇಳಲಿ ಎಂದು ಎಂಎಲ್ಸಿ ಕೆ.ಎಸ್.ನವೀನ್ ಒತ್ತಾಯಿಸಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆಹರು ಪ್ರಧಾನಿಯಾಗಿದ್ದ ವೇಳೆ ಮೀಸಲಾತಿ ತೆಗೆದು ಹಾಕಲು ದೇಶದ ಎಲ್ಲ ರಾಜ್ಯಗಳ ಸಿಎಂಗಳಿಗೆ ಪತ್ರ ಬರೆದು, ಅಭಿಪ್ರಾಯ ಕೇಳಿದ್ದರು. ಇಂದಿರಾಗಾಂಧಿ ಅವರು ಸಂವಿಧಾನದ ಹಕ್ಕನ್ನೇ ಉಲ್ಲಂಘಿಸಿ, ಹಲವು ರಾಜ್ಯಗಳ ಅಧಿಕಾರ ಕಸಿದುಕೊಂಡಿದ್ದರು. ಇತಿಹಾಸವೇ ಇದಕ್ಕೆ ನಿದರ್ಶನ. ಕೇವಲ ಮತಕ್ಕಾಗಿ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದರು.

    ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿ, ಅವರ ವಿರುದ್ಧ ಗೆದ್ದವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಕಾಂಗ್ರೆಸ್. ಅಂತ್ಯಸಂಸ್ಕಾರಕ್ಕೂ ಜಾಗ ನೀಡಿರಲಿಲ್ಲ. ಆದರೆ, ಮೋದಿ ಅವರು ಅಂಬೇಡ್ಕರ್ ಜನ್ಮಸ್ಥಳ, ಪರಿನಿರ್ವಾಣ ಸ್ಥಳ ಅಭಿವೃದ್ಧಿ ಪಡಿಸಿದ್ದಾರೆ. ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎಂಬುದು ಜನರಿಗೆ ತಿಳಿದ ವಿಚಾರ ಎಂದರು.

    ಶೋಷಿತ ಸಮಾವೇಶ ಮಾಡಿ ಎಸ್ಸಿಇಪಿ-ಟಿಎಸ್‌ಪಿ ಅನುದಾನವನ್ನು ಅಲ್ಪಸಂಖ್ಯಾತರಿಗೆ ಸಿಎಂ ನೀಡಿದ್ದು, ದಲಿತರು, ಹಿಂದುಳಿದವರು, ಹಾಗೂ ಶೋಷಿತರ ಕುರಿತು ಇರುವ ಕಾಳಜಿ ಇದೇನಾ ಎಂದು ಪ್ರಶ್ನಿಸಿದರು.

    ಚಿತ್ರದುರ್ಗ ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯದಡಿ ಎಸ್ಸಿ ಎಡಗೈ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಲಾಗಿದೆಯೇ ಹೊರತು, ರಘುಚಂದನ್ ಅವರಿಗೆ ತಪ್ಪಿಸುವ ಉದ್ದೇಶ ನನಗಾಗಲಿ, ತಿಪ್ಪಾರೆಡ್ಡಿ ಅವರಿಗಾಗಲಿ ಇಲ್ಲ. ಯುವ ಮುಖಂಡನಾಗಿದ್ದು, ಬೆಳೆಯಲು ಸಾಕಷ್ಟು ಅವಕಾಶವಿದೆ ಎಂದರು.

    ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಶಾಸಕ ಚಂದ್ರಪ್ಪ ನೀಡಿರುವ ಹೇಳಿಕೆಯಿಂದಾಗಿ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಲಕ್ಷಕ್ಕೂ ಹೆಚ್ಚು ಮತದಾರರಿರುವ ವೀರಶೈವ ಲಿಂಗಾಯತ ಸಮಾಜದವರಿಗೆ ತುಂಬಾ ನೋವಾಗಿದೆ. ಪಕ್ಷದ, ಅವರ, ಪುತ್ರನ ಹಿತದೃಷ್ಟಿಯಿಂದ ಕೈಜೋಡಿಸಿದರೆ ಮುಂದೆ ಪಕ್ಷವೇ ಗುರುತಿಸಿ ಸ್ಥಾನಮಾನ ನೀಡಲಿದೆ. ಯೋಚಿಸಿ ನಿರ್ಧರಿಸಲಿ ಎಂದು ಒತ್ತಾಯಿಸಿದರು.

    ಪುತ್ರನಿಗೆ ಟಿಕೆಟ್ ಕೈ ತಪ್ಪಿದ ಕಾರಣಕ್ಕೆ ಭೋವಿ ಸಮಾಜಕ್ಕೆ ಅನ್ಯಾಯವಾಗಿದೆ ಎಂಬುದು ಸರಿಯಲ್ಲ. ಹೊಳಲ್ಕೆರೆ ಮೀಸಲು ಕ್ಷೇತ್ರವಾದ ವರ್ಷದಿಂದ ಈವರೆಗೆ ಬಿಜೆಪಿ ಭೋವಿ ಸಮುದಾಯದ ಚಂದ್ರಪ್ಪ ಅವರಿಗೆ, ಚಿತ್ರದುರ್ಗ ಲೋಕಸಭೆ ಎಸ್ಸಿ ಮೀಸಲು ಕ್ಷೇತ್ರವಾದ ತಕ್ಷಣ ಜನಾರ್ದನಸ್ವಾಮಿ ಅವರಿಗೆ, ಹೊಸದುರ್ಗ ಸಾಮಾನ್ಯ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಅವರಿಗೆ ಈ ಹಿಂದೆ ಟಿಕೆಟ್ ನೀಡಿದೆ. ಧೃತರಾಷ್ಟ್ರ ಪ್ರೇಮ ಒಳ್ಳೆಯದಲ್ಲ ಎಂದು ಹೇಳಿದರು.

    ರಾಜಕೀಯವಾಗಿ ಬೆಳೆಯಲು ಕಾರಣರಾದ ಬಿಎಸ್‌ವೈ, ಬಿ.ಟಿ.ಚನ್ನಬಸಪ್ಪ ಅವರ ಫೋಟೊ ಮನೆಯಲ್ಲಿ ಹಾಕಿಕೊಳ್ಳಬೇಕು. ಪಟ್ಟು ಸಡಿಲಿಸಿ, ಪಕ್ಷದ ಅಭ್ಯರ್ಥಿ ಗೆಲ್ಲಿಸಿ, ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿ ಎಂದು ಮನವಿ ಮಾಡಿದರು.

    ಹೊಳಲ್ಕೆರೆಯಲ್ಲಿ ಬೃಹತ್ ಸಮಾವೇಶ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಹೊಳಲ್ಕೆರೆ ಪ್ರವೇಶಿಸಲು ಅಡ್ಡಿ ಮಾಡಿದ್ದಾರೆ. ಈ ಕುರಿತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಗಮನಕ್ಕೆ ತರಲಾಗಿದೆ. ಏ. 12ರಂದು 50 ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆ.ಎಸ್.ನವೀನ್ ತಿಳಿಸಿದರು.

    ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಟಿ.ಸುರೇಶ್, ಸಂಪತ್, ಎಸ್.ಆರ್.ಗಿರೀಶ್, ಛಲವಾದಿ ತಿಪ್ಪೇಸ್ವಾಮಿ, ನವೀನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts