More

    ಸಂಭ್ರಮದ ಕೃಷ್ಣ-ಬಲರಾಮರ ರಥಯಾತ್ರೆ

    ಹುಬ್ಬಳ್ಳಿ: ನಗರದ ದುರ್ಗದಬೈಲ್​ನಲ್ಲಿ ಶನಿವಾರ ಸಂಜೆ ಇಸ್ಕಾನ್ ಆಶ್ರಯದಲ್ಲಿ ಶ್ರೀ ಕೃಷ್ಣ ಬಲರಾಮರ ಸಂಭ್ರಮದ ವಾರ್ಷಿಕ ರಥಯಾತ್ರೆ ನಡೆಯಿತು. ಸಂಜೆ 4ಕ್ಕೆ ದುರ್ಗದಬೈಲ್​ನಲ್ಲಿ ರಥೋತ್ಸವ ಸಮಾರಂಭವನ್ನು ದಾವಣಗೆರೆಯ ರೆಡ್ಡಿ ಗುರುಪೀಠದ ವೇಮನನಂದ ಸ್ವಾಮೀಜಿ, ಇಸ್ಕಾನ್ ಹಾಗೂ ಅಕ್ಷಯ ಪಾತ್ರೆ ಫೌಂಡೇಷನ್ ಅಧ್ಯಕ್ಷ ಪದ್ಮಶ್ರೀ ಮಧುಪಂಡಿತ ದಾಸ್, ಪಂಡಿತ ನರಹರಿ ಆಚಾರ್ಯ ವಾಳ್ವೇಕರ, ಮಧ್ವ ಪಂಡಿತರು ಹಾಗೂ ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

    ರಥ ಯಾತ್ರೆಯು ರಾತ್ರಿ 8ಗಂಟೆಗೆ ನೆಹರು ಮೈದಾನದಲ್ಲಿ ಕೊನೆಗೊಂಡಿತು. ಶ್ರೀಕೃಷ್ಣ ಬಲರಾಮರ ವಿಗ್ರಹಗಳನ್ನು ಸುಂದರ ವಸ್ತ್ರಗಳಿಂದ ಹಾಗೂ ಹೊಳೆಯುವ ವಿವಿಧ ಬಗೆಯ ಆಭರಣಗಳಿಂದ ಅಲಂಕರಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಅಲಂಕೃತ ರಥದಲ್ಲಿ ವಿರಾಜಮಾನರಾದ ಕೃಷ್ಣ ಬಲರಾಮರು ಭಕ್ತರ ಮೇಲೆ ಕೃಪೆ ಬೀರುತ್ತ, ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

    ಮೆರವಣಿಗೆಗೂ ಮುನ್ನ ಭಕ್ತರು ರಥವನ್ನು ಅಲಂಕರಿಸಿದರು. ರಥ ಸಾಗುವ ದಾರಿಯನ್ನು ಸ್ವಚ್ಛಗೊಳಿಸಿ, ನೀರನ್ನು ಸಿಂಪಡಿಸಿ ವಿವಿಧ ಬಗೆಯ ರಂಗೋಲಿಗಳನ್ನು ಹಾಕಿದರು. ಭಗವಂತನ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತ ನರ್ತಿಸಿದರು. ಮೆರವಣಿಗೆಯುದ್ದಕ್ಕೂ ನೂರಾರು ಭಕ್ತರು ಹರೇ ಕೃಷ್ಣ ಮಹಾಮಂತ್ರವನ್ನು ವಿವಿಧ ಬಗೆಯ ಇಂಪಾದ ರಾಗಗಳಲ್ಲಿ ಹಾಡುತ್ತ ಸಾಗಿದರು.

    ರಥಯಾತ್ರೆಯು ಹುಬ್ಬಳ್ಳಿಯ ಬ್ರಾಡ್ ವೇ, ಮರಾಠಾ ಗಲ್ಲಿ, ಸ್ಟೇಶನ್ ರಸ್ತೆ, ಕೊಪ್ಪಿಕರ್ ರಸ್ತೆ, ದಾಜಿಬಾನ್ ಪೇಟ, ರಾಣಿ ಚನ್ನಮ್ಮ ಸರ್ಕಲ್ ಮಾರ್ಗವಾಗಿ ನೆಹರು ಮೈದಾನ ತಲುಪಿತು. ಶ್ರೀಕೃಷ್ಣ ಬಲರಾಮರ ವೈಭವಯುತವಾದ ಮಹಾಮಂಗಳಾರತಿ ರಥಯಾತ್ರೆ ನಂತರ ನೆರವೇರಿತು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts