More

    ಸಂಬಂಧಿಕರ ಹೆಸರಲ್ಲಿ ಕಾಮಗಾರಿ ಗುತ್ತಿಗೆ

    ಕಾರವಾರ/ಸಿದ್ದಾಪುರ : ಒಂದೆಡೆ ಬಿಎಸ್​ಎನ್​ಎಲ್ ನಷ್ಟದಲ್ಲಿ ಬಿದ್ದು ಸಂಕಷ್ಟದಲ್ಲಿದೆ. ಈ ನಡುವೆ ಕೆಲವು ಅಧಿಕಾರಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಗ್ರಾಹಕರಿಗೆ ಹಾಗೂ ನಿಗಮಕ್ಕೆ ವಂಚಿಸುತ್ತಿರುವ ಆರೋಪ ಕೇಳಿಬಂದಿದೆ.

    ಸಿದ್ದಾಪುರ ತಾಲೂಕಿನಲ್ಲಿ ಬಿಎಸ್​ಎನ್​ಎಲ್ ಅಧಿಕಾರಿಯೊಬ್ಬ ತಮ್ಮ ಪತ್ನಿಯ ಹೆಸರಿನಲ್ಲಿ ಹೇರೂರು, ಹೆಗ್ಗರಣಿ, ಕಾನಗೋಡ ಭಾಗದ ಫೈಬರ್ ಟು ದ ಹೋಮ್ (ಎಫ್​ಟಿಟಿಎಚ್) ಪ್ರಾಂಚೈಸಿ ಪಡೆದಿರುವುದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಗಳಿಂದ ತಿಳಿದುಬಂದಿದೆ. ಅಲ್ಲದೆ, ಪ್ರಾಂಚೈಸಿಗೆ ಲಾಭ ಮಾಡಿಕೊಡುವ ಸಲುವಾಗಿ ಗ್ರಾಹಕರಿಗೆ ಸರಿಯಾಗಿ ಸೇವೆ ನೀಡದೇ ವಂಚಿಸುತ್ತಿರುವ ಆರೋಪ ಕೇಳಿ ಬಂದಿದೆ.

    ಸಿದ್ದಾಪುರ ತಾಲೂಕಿನ ಹಲವು ಹಳ್ಳಿಗಳು ಗುಡ್ಡಗಾಡು ಪ್ರದೇಶದಲ್ಲಿವೆ. ಅಲ್ಲಿಗೆ ಸದ್ಯ ಬಿಎಸ್​ಎನ್​ಎಲ್ ಮಾತ್ರ ಸಂಪರ್ಕ ಸಾಧನ. ಆದರೆ, ಅಧಿಕಾರಿಗಳ ಅತ್ಯಂತ ಕಳಪೆ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಅಲ್ಲಿನ ಹೆಚ್ಚಿನ ಸ್ಥಿರ ದೂರವಾಣಿ ಮಾರ್ಗಗಳು ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದು ದಿನ ಸರಿ ಇದ್ದರೆ ಇನ್ನೆರಡು ದಿನ ಬಂದಾಗಿರುತ್ತವೆ. ಮೊಬೈಲ್ ಫೋನ್​ಸಂಪರ್ಕ ಸರಿಯಾಗಿ ಸಿಗುವುದಿಲ್ಲ. ಇಂದರಿಂದ ಮಳೆಗಾಲ ಬಂತು ಎಂದರೆ ಈ ಗ್ರಾಮಗಳು ಹೊರ ಜಗತ್ತಿನ ಸಂಪರ್ಕವನ್ನು ಅಕ್ಷರಶಃ ಕಡಿದುಕೊಳ್ಳುತ್ತವೆ.

    ಗ್ರಾಹಕರಿಂದ ಹಣ ಸಂಗ್ರಹ: ಬಿಎಸ್​ಎನ್​ಎಲ್ ಈ ಸಮಸ್ಯೆಗಳನ್ನು ತಪ್ಪಿಸಲು ಹಾಗೂ ವೇಗದ ಇಂಟರ್​ನೆಟ್ ಒದಗಿಸಲು ಎಫ್​ಟಿಟಿಎಚ್ ಸೇವೆ ಆರಂಭಿಸಿದೆ.ಈ ಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊರ ಗುತ್ತಿಗೆ ಸಂಸ್ಥೆಗಳಿಗೆ ಒದಗಿಸಲಾಗಿದೆ. ಬಿಎಸ್​ಎನ್​ಎಲ್ ಹಾಗೂ ಪ್ರಾಂಚೈಸಿಗಳ ನಡುವೆ ಆದ ಒಪ್ಪಂದದಂತೆ ಪ್ರಾಂಚೈಸಿಗಳು ಗ್ರಾಹಕರಿಂದ ಮೋಡೆಮ್ ಠೇವಣಿ ಮಾತ್ರ ಪಡೆಯಬೇಕು. ಕೇಬಲ್ ಅಳವಡಿಕೆ ಖರ್ಚನ್ನು ಬಿಎಸ್​ಎನ್​ಎಲ್ ಭರಿಸುತ್ತದೆ. ಆದರೆ, ಪ್ರಾಂಚೈಸಿಗಳು ಗ್ರಾಹಕರನ್ನು ಕತ್ತಲೆಯಲ್ಲಿಟ್ಟು ಗ್ರಾಹಕರಿಂದ ಕೇಬಲ್​ಗಾಗಿ ಹಣ ಸಂಗ್ರಹಿಸುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

    ಸದ್ಯ ವಿವಿಧೆಡೆ ಕೋವಿಡ್ ಕಾರಣಕ್ಕೆ ಬೆಂಗಳೂರಿನಲ್ಲಿದ್ದ ಈ ಭಾಗದ ಹಲವು ಜನ ಊರಿಗೆ ಆಗಮಿಸಿದ್ದಾರೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತುರ್ತು ನೆಟ್ವರ್ಕ್ ಅವಶ್ಯಕತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಗ್ರಾಹಕರಿಂದ ಹಣ ಕೀಳುತ್ತಿದ್ದಾರೆ. ಜನ ತಮ್ಮ ಸ್ಥಿರ ದೂರವಾಣಿ ಸಮಸ್ಯೆ ಹೇಳಲು ಹೋದರೆ, ಸ್ಪಂದಿಸದ ಅಧಿಕಾರಿ ಎಫ್​ಟಿಟಿಎಚ್ ಲೈನ್ ಪಡೆಯಿರಿ ಎಂದು ಪುಸಲಾಯಿಸುತ್ತಾರೆ ಎಂಬುದು ಇಲ್ಲಿನ ಹಲವು ಗ್ರಾಮಗಳ ಜನರ ದೂರು.

    ನಮ್ಮ ಮನೆಯ ಫೋನ್ ಇಂಟರ್​ನೆಟ್ ಸಮಸ್ಯೆ ಹೇಳಲು ಹೋದರೆ ಎಫ್​ಟಿಟಿಎಚ್ ಪಡೆಯಿರಿ ಎಂದು ಅಧಿಕಾರಿ ಪ್ರೇರೇಪಿಸುತ್ತಾರೆ. ಇಲಾಖೆ ವಾಹನದಲ್ಲಿ ಓಡಾಡುತ್ತಾ, ಸರ್ಕಾರದ ವೇತನ ಪಡೆದು, ತಮ್ಮ ಪತ್ನಿಯ ಹೆಸರಿನ ಖಾಸಗಿ ಪ್ರಾಂಚೈಸಿ ಪಡೆದುಕೊಂಡು ಅದಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ.

    | ಮಂಜುನಾಥ ಹೆಗಡೆ, ಸಿದ್ದಾಪುರ ತಾಲೂಕಿನ ಬಿಎಸ್​ಎನ್​ಎಲ್ ಗ್ರಾಹಕ

    ಎಫ್​ಟಿಟಿಎಚ್ ಸೇವೆಯನ್ನು ಹೊರ ಗುತ್ತಿಗೆ ನೀಡಲಾಗಿದೆ. ಈ ಹಿಂದೆ ಅಧಿಕಾರಿಗಳ ಸಂಬಂಧಿಕರೂ ಗುತ್ತಿಗೆ ಪಡೆಯಲು ಅವಕಾಶವಿತ್ತು. ಈಗ ನಿಯಮಾವಳಿಯಲ್ಲಿ ಬದಲಾವಣೆಯಾಗಿದ್ದು, ಸಿದ್ದಾಪುರ ಹೆಗ್ಗರಣಿ ಭಾಗದಲ್ಲಿ ಅಧಿಕಾರಿಯ ಪತ್ನಿ ಪಡೆದ ಎಫ್​ಟಿಟಿಎಚ್ ಪ್ರಾಂಚೈಸಿಯನ್ನು ಬದಲಾಯಿಸಲು ಕ್ರಮ ವಹಿಸಲಾಗಿದೆ.
    | ರವಿಕಿರಣ ವಿ.ಜನ್ನು , ಡಿಜಿಎಂ, ಬಿಎಸ್​ಎನ್​ಎಲ್, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts