More

    ಸಂತೆಗುಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಹಾನಿ

    ಕುಮಟಾ: ತಾಲೂಕಿನಲ್ಲಿ ಬುಧವಾರ ರಾತ್ರಿ ವಿಪರೀತ ಮಳೆಯಾಗಿದ್ದು, ಸಂತೆಗುಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರಿ ಹಾನಿಯಾಗಿದೆ.

    ತಪ್ಪಲು ಪ್ರದೇಶದಲ್ಲಿ ಬೆಟ್ಟದ ಮೇಲಿಂದ ಮಳೆ ನೀರು ಪ್ರವಾಹದಂತೆ ಹರಿದುಬಂದು ಅಬ್ಬರಿಸಿದೆ. ಎತ್ತರ ಪ್ರದೇಶದಲ್ಲಿನ ಮನೆಗಳಿಗೂ ನೀರು ನುಗ್ಗಿದ್ದರಿಂದ ರಾತ್ರೋರಾತ್ರಿ 35ಕ್ಕೂ ಹೆಚ್ಚು ಕುಟುಂಬಗಳು ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿವೆ. ಬೆಟ್ಟದ ಕಡೆಯಿಂದ ಪ್ರವಾಹ ಬಂದು ತೋಟ, ಗದ್ದೆ, ಕಟ್ಟಡಗಳು, ಕಾಂಪೌಂಡ್​ಗಳಿಗೆ ಹಾನಿಯಾಗಿದೆ. ಮುಖ್ಯವಾಗಿ ಸಂತೇಗುಳಿ, ಉಳ್ಳೂರಮಠ, ದೊಡ್ಡಕುಂಬ್ರಿ, ಬಸ್ತಿಕೇರಿ, ಮಾವಿನಗದ್ದೆ ಮುಂತಾದ ಗ್ರಾಮಗಳಲ್ಲಿ ಪ್ರವಾಹ ತನ್ನ ಪ್ರಕೋಪ ತೋರಿಸಿದೆ.

    ಸಂತೇಗುಳಿಯ ಜಮೀಲಾಬಿಸಾಬ್ ಅವರ ಮನೆಗೆ ನೀರು ನುಗ್ಗಿ ಗೊಬ್ಬರ, ನೂರಾರು ಅಡಕೆ ಸಸಿಗಳು, ಎರಡು ದನ, ಇನ್ನಿತರ ಪರಿಕರಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೆಗಡೆ ಹೊಸಳ್ಳಿಯ ಆಬ್ದುಲ್ ರವೂಫ್ ತೋಟದಲ್ಲೂ ಅಪಾರ ಪ್ರಮಾಣದ ಹಾನಿಯಾಗಿದೆ. ಜಾನಕಿ ನಾಗಪ್ಪ ನಾಯ್ಕ ಅವರ ತೋಟ, ಭತ್ತದ ಗದ್ದೆ, ಭದ್ರಾವತಿ ತಿಮ್ಮಣ್ಣ ನಾಯ್ಕ ಅವರ ಮನೆಗೆ ನೀರು ನುಗ್ಗಿ ಪಾತ್ರೆಗಳು ಕೊಚ್ಚಿಹೋಗಿವೆ. ರತ್ನಾ ನಾಗೇಶ ಭಂಡಾರಿ ಎಂಬುವವರ ಮನೆ ಬೀಳುವ ಹಂತ ತಲುಪಿದೆ. ದೊಡ್ಡಕುಂಬ್ರಿಯ ಶೌಕತ್​ಅಲಿ ಶೇಖ್, ಸೈಯದ್ ಅಬ್ದುಲ್ ಮುಂತಾದವರ ಸಾವಿರಾರು ಅಡಕೆ, ಬಾಳೆ ಗಿಡಗಳು, ನೀರಾವರಿಗೆ ಹಾಕಿದ್ದ ಪೈಪುಗಳು ಕೊಚ್ಚಿಹೋಗಿವೆ. ಪ್ರವಾಹದ ವೇಗಕ್ಕೆ ಉಳ್ಳೂರಮಠ ರಸ್ತೆಯೂ ಹಲವು ಕಡೆಗಳಲ್ಲಿ ಕಿತ್ತು ಕೊರಕಲುಗಳಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.

    ಸ್ಥಳಕ್ಕೆ ಜಿಪಂ ಸದಸ್ಯ ಗಜಾನನ ಪೈ, ವಿನಾಯಕ ಭಟ್, ತಾಪಂ ಇಒ ಸಿ.ಟಿ. ನಾಯ್ಕ, ಎಇ ರಾಮದಾಸ ಗುನಗಿ, ತೋಟಗಾರಿಕೆ ಅಧಿಕಾರಿ ಪ್ರವೀಣ, ಕೃಷಿ ಸಹಾಯಕ ನಿರ್ದೇಶಕಿ ಚಂದ್ರಕಲಾ ಬರ್ಗಿ, ಪಿಡಿಒ ಬಾಲಚಂದ್ರ ಪಟಗಾರ, ಕಂದಾಯ ಅಧಿಕಾರಿಗಳು ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರಾದ ಸುರೇಶ ನಾಯ್ಕ, ಸಿರಿಲ್ ಸಂತಾನ್, ಭಾರತಿ ರಾಜೇಂದ್ರ, ಜನಿಕಾ ಮಹಮದ್, ಅಹಮದ್ ಅಬುಸಾಬಿ ಇತರರಿದ್ದರು.

    ತಾಲೂಕಿನ ಕೋನಳ್ಳಿ, ಗುಡ್ನಕಟ್ಟು ಭಾಗದಲ್ಲೂ ಚಂದಾವರ ಹೊಳೆ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ನಿರ್ವಣವಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಗುರುವಾರ ಮಳೆ ಕಡಿಮೆಯಾಗಿ ಪರಿಸ್ಥಿತಿ ಎಲ್ಲೆಡೆ ಸುಧಾರಿಸಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts