More

    ಸಂಡೇ ಲಾಕ್​ಡೌನ್​ಗೆ ಉತ್ತಮ ಸ್ಪಂದನೆ

    ಹಾವೇರಿ: 4ನೇ ಭಾನುವಾರದ ಲಾಕ್​ಡೌನ್​ಗೆ ಜಿಲ್ಲೆಯಾದ್ಯಂತ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು. ಕಾರಣವಿಲ್ಲದೇ ಮನೆಯಿಂದ ಹೊರ ಬಂದವರಿಗೆ ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಲಾಠಿ ಬೀಸಿ ಕೆಲ ವಾಹನಗಳನ್ನು ಜಪ್ತ್ ಮಾಡಿದ ಘಟನೆಯೂ ಜರುಗಿತು.

    ಕೆಲ ಕಾರ್, ಬೈಕ್ ಚಾಲಕರು ಪೊಲೀಸರ ಲಾಠಿ ಏಟಿಗೆ ಹೆದರಿ ದಂಡ ತುಂಬಿದರು. ಅನವಶ್ಯಕವಾಗಿ ಹೊರ ಬಂದವರಿಗೆ, ಮಾಸ್ಕ್ ಧರಿಸದೇ ಬಂದ ಜನರಿಗೆ ಪೊಲೀಸರು ತಿಳಿ ಹೇಳಿ ಜಾಗೃತಿ ಮೂಡಿಸಿದರು. ನಗರ ಸಾರಿಗೆ ಸೇರಿ ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ಅಲ್ಲಲ್ಲಿ ಬೈಕ್, ಆಟೋ ಸೇರಿ ಕೆಲ ವಾಹನಗಳು ಕಾಣಿಸುತ್ತಿದ್ದವು. ಹಾವೇರಿಯ ಜನನಿಬಿಡ ಪ್ರದೇಶಗಳಾದ ಸಿದ್ದಪ್ಪ ವೃತ್ತ, ಸುಭಾಸ ವೃತ್ತ, ಎಂ.ಜಿ. ರಸ್ತೆ, ಬಸ್ ನಿಲ್ದಾಣ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.ನಿತ್ಯ ಜೀವನಕ್ಕೆ ಅಗತ್ಯವಾಗಿರುವ ಹಾಲು, ಔಷಧಗಳು, ಪೆಟ್ರೋಲ್ ಬಂಕ್, ತರಕಾರಿ, ಹೋಟೆಲ್​ನಲ್ಲಿ ಪಾರ್ಸಲ್, ಮಾಂಸ ಮಾರಾಟಕ್ಕೆ ವಿನಾಯಿತಿ ನೀಡಲಾಗಿತ್ತು.

    ಮನೆಯಲ್ಲೇ ನರಳಾಡಿದ ಸೋಂಕಿತ
    ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ 50 ವರ್ಷದ ಕರೊನಾ ಸೋಂಕಿತ ವ್ಯಕ್ತಿಯ್ಬೊರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಸೇರಿಸದ ಕಾರಣ ಆತ ಮನೆಯಲ್ಲಿಯೇ ನರಳಾಡುವ ಪರಿಸ್ಥಿತಿ ನಿರ್ವಣವಾಗಿತ್ತು. ಈತ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದರು. ಜು. 16ರಂದು ಜಿಲ್ಲಾಸ್ಪತ್ರೆಯಲ್ಲಿ ಗಂಟಲ ದ್ರವ ಮಾದರಿ ನೀಡಿ ವಾಪಸ್ ಮನೆಗೆ ಬಂದಿದ್ದರು. ಜು. 25ರಂದು ಆರೋಗ್ಯ ಇಲಾಖೆಯವರು ಫೋನ್ ಮಾಡಿ ‘ನಿಮ್ಮ ವರದಿ ಪಾಸಿಟಿವ್ ಬಂದಿದೆ. ಮನೆಯಲ್ಲಿ ಇರೀ ಕರೆದುಕೊಂಡು ಹೋಗುತ್ತೇವೆ’ ಎಂದು ತಿಳಿಸಿದ್ದರು. ಆದರೆ, ಭಾನುವಾರ ಮಧ್ಯಾಹ್ನ 2 ಗಂಟೆಯಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಇವರನ್ನು ಕರೆದುಕೊಂಡು ಹೋಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಆತನ ಕುಟುಂಬಸ್ಥರು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಮಧ್ಯಾಹ್ನದ ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಆಂಬುಲೆನ್ಸ್​ನಲ್ಲಿ ಬಂದು ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿದರು.

    ಯೂರಿಯಾ ಗೊಬ್ಬರಕ್ಕಾಗಿ ಪರದಾಟ
    ಹಿರೇಕೆರೂರ ತಾಲೂಕಿನ ಚಿಕ್ಕೇರೂರ ಗ್ರಾಮದ ವ್ಯವಸಾಯ ಉತ್ಪನ್ನ ಸಹಕಾರಿ ಸಂಘದ ಎದುರು ನೂರಾರು ರೈತರು ಯೂರಿಯಾ ಗೊಬ್ಬರ ಖರೀದಿಸಲು ನಸುಕಿನ ಜಾವವೇ ಬಂದು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ, ಗೊಬ್ಬರದ ಕೊರತೆಯಿಂದಾಗಿ ಬೆರೆಳೆಣಿಕೆಯಷ್ಟು ರೈತರಿಗೆ ಮಾತ್ರ ದೊರೆತಿದ್ದು, ಇನ್ನುಳಿದ ರೈತರು ಪರದಾಡಬೇಕಾಯಿತು. ಮಾಸ್ಕ್ ಧರಿಸದೇ, ಪರಸ್ಪರ ಅಂತರ ಸಹ ಕಾಯ್ದುಕೊಳ್ಳದೇ ರೈತರು ಮುಗಿಬಿದ್ದಿದ್ದರು. ಸಹಕಾರಿ ಸಂಘದಲ್ಲಿ ಸಂಪೂರ್ಣ ಗೊಬ್ಬರ ಖಾಲಿಯಾದ ನಂತರ ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸಾದರು.

    ರಾಣೆಬೆನ್ನೂರಿನಲ್ಲಿ ಹೆಚ್ಚು ವಾಹನ ಓಡಾಟ
    ವಾಣಿಜ್ಯ ನಗರಿ ರಾಣೆಬೆನ್ನೂರಿನಲ್ಲಿ ಬೆಳಗ್ಗೆ ಪೊಲೀಸರು ಬಂದೋಬಸ್ತ್ ಕೈಗೊಂಡ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ತಗ್ಗಿತ್ತು. ಆದರೆ, ಮಧ್ಯಾಹ್ನ 1 ಗಂಟೆ ಬಳಿಕ ಪೊಲೀಸರು ಯಾವುದೇ ವಾಹನ ತಡೆಯದ ಕಾರಣ ಬೈಕ್, ಕಾರುಗಳ ಓಡಾಟ ಹೆಚ್ಚಾಗಿ ಕಂಡು ಬಂತು.

    1.12 ಲಕ್ಷ ರೂ. ದಂಡ ವಸೂಲಿ
    ಸಂಡೇ ಲಾಕ್​ಡೌನ್ ಉಲ್ಲಂಘಿಸಿದ ಆರೋಪದಡಿ ಜಿಲ್ಲೆಯಲ್ಲಿ 217 ವಾಹನಗಳಿಂದ 89,100 ರೂ. ದಂಡ, ಮಾಸ್ಕ್ ಧರಿಸದೇ ಓಡಾಡಿದ 143 ಜನರಿಂದ 19,700 ರೂ. ದಂಡ ಹಾಗೂ ತಂಬಾಕು ಸೇವನೆ ಮಾಡುತ್ತಿದ್ದ 39 ಜನರಿಂದ 3900 ರೂ. ಸೇರಿ ಒಟ್ಟು 399 ಪ್ರಕರಣಗಳಲ್ಲಿ 1,12,700 ರೂ. ವಸೂಲಿ ಮಾಡಲಾಗಿದೆ ಎಂದು ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts