More

    ಸಂಚಾರ ನಿಲ್ಲಿಸಿದ ಆರೋಗ್ಯ ಘಟಕ

    ರಾಜೇಂದ್ರ ಶಿಂಗನಮನೆ ಶಿರಸಿ

    ಎಂಡೋಸಲ್ಪಾನ್ ಬಾಧಿತರ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿದ್ದ ಸಂಚಾರ ಆರೋಗ್ಯ ಘಟಕಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಿಂದ ಸೇವೆ ಸ್ಥಗಿತಗೊಳಿಸಿವೆ. ಎಂಡೋಸಲ್ಪಾನ್ ಬಾಧಿತರು ಆರೋಗ್ಯ ಸೇವೆ ಹಾಗೂ ಔಷಧ ಸಿಗದೆ ಪರದಾಡುತ್ತಿದ್ದಾರೆ.

    ಮೂರು ವರ್ಷಗಳಿಂದ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಸಿದ್ದಾಪುರ ತಾಲೂಕಿಗೆ ಸೇರಿ ಒಟ್ಟು ನಾಲ್ಕು ಸಂಚಾರ ಆರೋಗ್ಯ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದವು. 2 ಸಾವಿರಕ್ಕಿಂತ ಹೆಚ್ಚು ಎಂಡೋಸಲ್ಪಾನ್ ಬಾಧಿತರು ಹಾಗೂ ಅವರ ಕುಟುಂಬಗಳಿಗೆ ನಿರಂತರವಾಗಿ ಆರೋಗ್ಯ ಸೇವೆ, ಉಚಿತ ಜೀವನಾವಶ್ಯಕ ಔಷಧವನ್ನು ನೀಡುತ್ತಾ ಜನರ ಜೀವನಾಡಿಯಾಗಿದ್ದವು. ಆದರೆ, ಸೇವೆ ಮುಂದುವರಿಸುವಂತೆ

    ಸಂಚಾರ ಆರೋಗ್ಯ ಘಟಕಗಳಿಗೆ ಸೂಚನೆ ಬರದ ಹಿನ್ನೆಲೆಯಲ್ಲಿ ಏ.1ರಿಂದ ಸೇವೆ ಸ್ಥಗಿತಗೊಂಡಿದೆ. ಈ ಸೇವೆಯನ್ನೇ ಅವಲಂಬಿಸಿರುವ ಬಹುವಿಧದ ಅಂಗವೈಕಲ್ಯತೆ ಹಾಗೂ ದೈಹಿಕ ಸಮಸ್ಯೆಯಿಂದ ಬಳಲುತ್ತಿರುವ ಎಂಡೋಸಲ್ಪಾನ್ ಬಾಧಿತರು ಸರಿಯಾಗಿ ಔಷಧ ಹಾಗೂ ಸೇವೆ ಲಭ್ಯವಾಗದೆ ಕಂಗಾಲಾಗಿದ್ದಾರೆ.

    ಸಿಬ್ಬಂದಿಯೂ ಅತಂತ್ರ: ಎಂಡೋಸಲ್ಪಾನ್ ಬಾಧಿತರ ಸೇವೆಗೆ ನಿಯೋಜನೆಗೊಂಡ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 30 ಸಿಬ್ಬಂದಿ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ಬೇರೆ ಬೇರೆ ಊರುಗಳಿಂದ ಉದ್ಯೋಗಕ್ಕಾಗಿ ಬಂದು, ಆಯಾ ತಾಲೂಕುಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದವರು ತೊಂದರೆಗೆ ಸಿಲುಕಿದ್ದಾರೆ.

    ಅಧಿಕಾರಿಗಳ ನಿರ್ಲಕ್ಷ್ಯ: ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆಯಂತೆ ಎಂಡೋಸಲ್ಪಾನ್ ಬಾಧಿತರಿಗೆ ಉಚಿತ ಆರೋಗ್ಯ ಸೇವೆಯೊಂದಿಗೆ ಇತರ ಸೌಲಭ್ಯಗಳನ್ನೂ ಸಹ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ, ಕೆಲವು ಅಧಿಕಾರಿಗಳ ನಿರ್ಲಕ್ಷತನದಿಂದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಂಚಾರಿ ಆರೋಗ್ಯ ಘಟಕಗಳನ್ನು ತಕ್ಷಣದಲ್ಲಿ ಪುನರಾರಂಭಿಸಲು ಅಗತ್ಯ ಕ್ರಮಕೈಗೊಳ್ಳದಿದ್ದರೆ ಬಾಧಿತರು ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವ ಹಾಗೂ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.

    ಮಾತಿಗಿಲ್ಲ ಕಿಮ್ಮತ್ತು: ಈಗಾಗಲೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲ ಸಂಚಾರಿ ಆರೋಗ್ಯ ಘಟಕಗಳನ್ನು ಮುಂದುವರಿಸುವಂತೆ

    ಆರೋಗ್ಯ ಸಚಿವರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೂ ಈ ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳ ಮನವಿಯನ್ನೂ ಲೆಕ್ಕಿಸದೇ ಸಂಚಾರ ಆರೋಗ್ಯ ಘಟಕಗಳ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

    ನಮಗೆ ಸಂಚಾರ ಆಸ್ಪತ್ರೆಯಿಂದ ತುಂಬಾ ಅನುಕೂಲವಾಗಿತ್ತು. ಪ್ರತಿ ವಾರವೂ ಮನೆಗೆ ಬಂದು ತಪಾಸಣೆ ಮಾಡಿ, ಔಷಧ ಕೊಡುತ್ತಿದ್ದರು. ಇದರಿಂದ ಮಂಗಳೂರಿಗೆ ಅಲೆಯುವುದು ತಪ್ಪಿತ್ತು. ಈಗ ಒಂದು ವಾರದಿಂದ ವೈದ್ಯರು ಬರುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಈ ಸಂಚಾರಿ ಆಸ್ಪತ್ರೆ ಸೇವೆ ಪುನಃ ಆರಂಭವಾಗುವಂತೆ ಮಾಡಬೇಕು. | ಗಣಪತಿ ರಾಮಚಂದ್ರ ಅಂಬಿಗ ಎಂಡೋಸಲ್ಪಾನ್ ಪೀಡಿತನ ತಂದೆ

    ಸಂಚಾರ ಆರೋಗ್ಯ ಘಟಕಗಳನ್ನು ಮುಂದುವರೆಸುವ ಬಗ್ಗೆ ಅಥವಾ ಸ್ಥಗಿತಗೊಳಿಸುವ ಬಗ್ಗೆ ಇಲಾಖೆಯಿಂದ ಸ್ಪಷ್ಟ ನಿರ್ದೇಶನ ಬರದೇ ಇರುವುದರಿಂದ ಒಪ್ಪಂದದ ನಿಯಮಾವಳಿಯಂತೆ ಮಾರ್ಚ್ 31ಕ್ಕೆ ಸೇವೆ ನಿಲ್ಲಿಸಿದ್ದೇವೆ. ಸ್ಪಷ್ಟ ನಿರ್ದೇಶನ ಬಂದರೆ ಸೇವೆ ಮುಂದುವರಿಸುತ್ತೇವೆ. | ಡಾ.ವೆಂಕಟೇಶ ನಾಯ್ಕ ಸ್ಕೋಡ್​ವೆಸ್ ಸಂಸ್ಥೆ ಮುಖ್ಯಸ್ಥ

    ಸಂಚಾರ ಆರೋಗ್ಯ ಘಟಕಗಳ ಸೇವೆ ಮುಂದುವರಿಸುವುದು ತೀರಾ ಅಗತ್ಯ. ಅವುಗಳ ಸೇವೆಯನ್ನು ಮುಂದುವರಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದರೆ, ಈವರೆಗೆ ಅವರಿಂದ ಸ್ಪಷ್ಟ ನಿರ್ದೇಶನ ಬರದೆ ಇರುವುದರಿಂದ ಈ ಬಗ್ಗೆ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. | ಡಾ.ಶರದ್ ನಾಯಕ ಡಿಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts