More

    ಸಂಚಾರ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್

    ಚಿಕ್ಕಬಳ್ಳಾಪುರ : ಹಲವು ದಿನಗಳ ಬಳಿಕ ಜಿಲ್ಲೆಯಲ್ಲಿ ಬಸ್ ಸಂಚಾರ ಮಂಗಳವಾರದಿಂದ ಪ್ರಾರಂಭವಾಗಿದ್ದು ಮೊದಲ ದಿನ ವಿವಿಧ ಊರುಗಳಿಗೆ ಅಲ್ಪ ಪ್ರಮಾಣದಲ್ಲಿ ಪ್ರಯಾಣಿಕರು ತೆರಳಿದರು.

    ಮೇ 31 ರವರೆಗೆ ಜಾರಿಯಲ್ಲಿರುವ ಲಾಕ್‌ಡೌನ್ ಅವಧಿಯಲ್ಲಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ಮೊದಲಿನಿಂದಲೂ ಎದುರು ನೋಡುತ್ತಿದ್ದ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಬಸ್ ವ್ಯವಸ್ಥೆ ಒದಗಿಸಿದರು. ಮೊದಲ ಹಂತವಾಗಿ ದಿನಕ್ಕೆ 35 ಬಸ್‌ಗಳನ್ನು ಓಡಿಸಲು ಯೋಜನೆ ರೂಪಿಸಿದ್ದು ಪ್ರಯಾಣಿಕರ ಪ್ರತಿಕ್ರಿಯೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.

    ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರ ಸಂಖ್ಯೆಯನ್ನು ಕನಿಷ್ಠ 30 ಕ್ಕೆ ಇಳಿಸಲಾಗಿದೆ. ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಳಿಕ ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ. ಟಿಕೆಟ್ ಖರೀದಿಗಾಗಿ ನಿಲ್ದಾಣದಲ್ಲಿ ಗುರುತಿಸಿರುವ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸೂಚಕ ವೃತ್ತಗಳನ್ನು ಬರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಬಳಸುತ್ತಿದ್ದು ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲು ಸೂಚಿಸಲಾಗಿದೆ.

    ಸಂಚಾರಿ ಮಾರ್ಗಗಳು : ಪ್ರಸ್ತುತ ಜಿಲ್ಲೆಯ 6 ತಾಲೂಕುಗಳು ಮತ್ತು ರಾಜಧಾನಿ ಬೆಂಗಳೂರಿಗೆ ಮಾತ್ರ ಬಸ್ ಸಂಚಾರದ ವ್ಯವಸ್ಥೆ ಇದೆ. ಉಳಿದಂತೆ ಇತರ ಜಿಲ್ಲೆ ಮತ್ತು ರಾಜ್ಯದ ಹೊರ ಭಾಗಗಳಿಗೆ ತೆರಳಲು ಅವಕಾಶ ನೀಡಿಲ್ಲ. ಜಿಲ್ಲೆಯ 6 ತಾಲೂಕುಗಳಲ್ಲಿ ಹಂತ ಹಂತವಾಗಿ ದಿನಕ್ಕೆ 15 ಬಸ್ ಸೌಲಭ್ಯ ಹೆಚ್ಚಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಸಾಮಾನ್ಯ ದಿನಗಳ ಮಾದರಿಯ ಸೇವೆಯ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ.

    ಕಡಿಮೆ ಸಂಖ್ಯೆಯ ಪ್ರಯಾಣಿಕರು : ಮಂಗಳವಾರ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದು ಹಿಂದಿನ ಮಾದರಿಯಲ್ಲಿ ನೂಕು ನುಗ್ಗಲು ಇರಲಿಲ್ಲ. ಪ್ರಯಾಣಿಕರು ಯಾವುದೇ ಸಮಸ್ಯೆ ಇಲ್ಲದೇ ತಾಳ್ಮೆಯಿಂದ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನು ಹಲವು ದಿನಗಳಿಂದ ರಜೆಯಲ್ಲಿದ್ದ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿ, ಸಂತಸ ವ್ಯಕ್ತಪಡಿಸಿದರು. ಈಗಲೂ ಮನೆಯಲ್ಲಿಯೇ ಇದ್ದಿದ್ದರೆ ಬೇಸರ, ವೇತನ ವಿಳಂಬದ ಆತಂಕ ಕಾಡುತ್ತಿತ್ತು. ಇದೀಗ ಕರ್ತವ್ಯ ನಿರ್ವಹಣೆಯಿಂದ ತ್ವರಿತವಾಗಿ ವೇತನ ಸಿಗುವುದು ಖಾತ್ರಿಯಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ರಸ್ತೆಗಿಳಿಯದ ಖಾಸಗಿ ಬಸ್ : ಕಡಿಮೆ ಸಂಖ್ಯೆಯ ಪ್ರಯಾಣಿಕರ ಸಂಚಾರಕ್ಕೆ ಅವಕಾಶದಿಂದ ನಷ್ಟ ಉಂಟಾಗುವ ಲೆಕ್ಕಾಚಾರದಲ್ಲಿ ಖಾಸಗಿ ಬಸ್‌ಗಳನ್ನು ಮಾಲೀಕರು ರಸ್ತೆಗಿಳಿಸಲಿಲ್ಲ. ತಿಂಗಳಾನುಗಟ್ಟಲೇ ಕೆಲಸವಿಲ್ಲದೇ ಆದಾಯಕ್ಕೆ ಖೋತಾ ಬಿದ್ದಿರುವ ಸಂದರ್ಭದಲ್ಲಿ ಹೊಸದಾಗಿ ತೆರಿಗೆ ಪಾವತಿ, ದುಬಾರಿ ನಿರ್ವಹಣೆ ಮತ್ತು ಮುಂಜಾಗ್ರತಾ ಕ್ರಮಗಳ ಪಾಲನೆಯು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದು, ಬಗೆಹರಿಸಿಕೊಂಡ ಬಳಿಕ ಸೇವೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts