More

    ಸಂಚಾರಿ ಆರೋಗ್ಯ ಘಟಕ ಸ್ಥಗಿತ

    ಗೋಣಿಕೊಪ್ಪ: ಗಿರಿಜನರ ಆರೋಗ್ಯ ಸೇವೆಗೆ ಮೀಸಲಿಟ್ಟಿರುವ ಸಂಚಾರಿ ಆರೋಗ್ಯ ಸೇವೆ ಘಟಕ 9 ತಿಂಗಳಿಂದ ಸ್ಥಗಿತಗೊಂಡಿದೆ. ಇದರಿಂದ ಅರಣ್ಯ ನಿವಾಸಿಗಳ ಗೋಳು ಕೇಳುವವರಿಲ್ಲದೆ ನರಳಾಡುವಂತಾಗಿದೆ.

    ಸಾರಿಗೆ ಸಂಪರ್ಕವಿಲ್ಲದ, ಆರೋಗ್ಯ ಸಂಸ್ಥೆಯಿಂದ ದೂರವಿರುವ ಗ್ರಾಮಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಾಗಿ ವಾಸಿಸುವ ಹಾಡಿ, ಗ್ರಾಮ ನಿವಾಸಿಗಳು ಕನಿಷ್ಠ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಗಿರಿಜನ ಉಪ ಯೋಜನೆ ಅನುದಾನದಿಂದ ವಿರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಹಾಡಿಗಳಲ್ಲಿ ಸಂಚಾರಿ ಆರೋಗ್ಯ ಘಟಕ ಕಾರ್ಯನಿರ್ವಹಿಸುತ್ತಿವೆ. ಘಟಕದಲ್ಲಿ ಅಗತ್ಯ ಔಷಧಗಳು, ಲ್ಯಾಬ್ ಸೇವೆ, ಒಬ್ಬ ಎಂಬಿಬಿಎಸ್ ವೈದ್ಯ, ಶುಶ್ರೂಷಕರು, ಔಷಧ ವಿತರಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು, ಪ್ರಯೋಗಾಲಯ ತಜ್ಞರು ಮತ್ತು ವಾಹನ ಚಾಲಕರೊಂದಿಗೆ ಗ್ರಾಮೀಣ ಪ್ರದೇಶದವರೆಗೆ ಸೇವೆ ಲಭ್ಯವಾಗುತ್ತಿತ್ತು. ಅವರು ವಾಸಿಸುವ ಸ್ಥಳಕ್ಕೆ ಸೇವೆ ದೊರೆಯುತ್ತಿತ್ತು.

    ಯೋಜನೆಯನ್ನು ಖಾಸಗಿ ಸಂಸ್ಥೆ ದತ್ತು ಪಡೆದು ಕಾರ್ಯನಿರ್ವಹಿಸುತ್ತಿದ್ದು, ಗುತ್ತಿಗೆ ಅವಧಿ ಮುಗಿದ ನಂತರ ಸಂಚಾರಿ ಘಟಕ ನಿಂತುಹೋಗಿವೆ. ತಾಲೂಕು ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಅಧಿಕ ಗಿರಿಜನರಿದ್ದು, ಸೇವೆಯಿಂದ ವಂಚಿತರಾಗಿದ್ದಾರೆ.

    ಘಟಕಗಳು ವಾರದಲ್ಲಿ ಆರು ದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಒಂದು ಹಾಡಿ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತ್ತೊಂದು ಗ್ರಾಮದಲ್ಲಿ ಸೇವೆ ನೀಡುತ್ತಿದ್ದವು. ತಿಂಗಳಿಗೆ 4 ರಿಂದ 5 ಬಾರಿ ಒಂದು ಹಾಡಿಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿತ್ತು. ವಿರಾಜಪೇಟೆ ತಾಲೂಕಿನ 140 ಗಿರಿಜನ ಹಾಡಿ, 190 ಕಾಲನಿ, 6 ಆಶ್ರಮ ಶಾಲೆ, 6 ವಿದ್ಯಾರ್ಥಿನಿಲಯಗಳಲ್ಲಿ ದೊರೆಯುತ್ತಿದ್ದ ಸೇವೆ ಮತ್ತೆ ಆರಂಭಿಸಬೇಕಿದೆ ಎಂಬ ಕೂಗು ಗಿರಿಜನರಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts