More

    ಸಂಘಟನೆ ಹಾದಿಯಲ್ಲಿ ಮತ್ತಷ್ಟು ಪರಿಣಾಮಕಾರಿ ಹೆಜ್ಜೆ ಇಡಬೇಕು : ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯ ಸಿದ್ದೇಶ್ ನಾಗೇಂದ್ರ ಹೇಳಿಕೆ

    ಹಾಸನ : ವೀರಶೈವ ಲಿಂಗಾಯತ ಸಮಾಜಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಆದರೂ ಸಂಘಟನೆ ಹಾಗೂ ಸಾಮರಸ್ಯದ ಹಾದಿಯಲ್ಲಿ ನಾವು ಇನ್ನಷ್ಟು ಪರಿಣಾಮಕಾರಿ ಹೆಜ್ಜೆ ಇಡಬೇಕಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯ ಸಿದ್ದೇಶ್ ನಾಗೇಂದ್ರ ಹೇಳಿದರು.

    ಆಲೂರು ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ವೀರಶೈವ ಸಂಘದ 2021-2022ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಜಗತ್ತಿನಲ್ಲಿ ಇರುವುದೆಲ್ಲವೂ ನನಗಾಗಿಯೇ ಎಂಬುದಕ್ಕಿಂತ, ನನ್ನಲ್ಲಿ ಇರುವುದೆಲ್ಲವೂ ಜಗತ್ತಿಗಾಗಿ ಎಂಬ ತತ್ವ ನಂಬಿಕೊಂಡು ಬಂದ ಸಮಾಜ ವೀರಶೈವ ಸಮಾಜ. ಈ ರೀತಿಯ ಸಾಮರಸ್ಯ ಎಲ್ಲರಲ್ಲೂ ಮೂಡಿದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾಪ್ರಸಾದ್ ಅವರ ನೇತೃತ್ವದಲ್ಲಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಮುಂದೆ ಸಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.


    ತಾಲೂಕಿನ ಹಲವು ಗ್ರಾಮಗಳಲ್ಲಿ ವೀರಶೈವ ಸಮಾಜದವರಿದ್ದು, ಎಲ್ಲರೂ ಆರ್ಥಿಕವಾಗಿ ಅಭಿವೃದ್ಧಿಯಾಗಲು ಮುಂದಾಗಬೇಕು ಜತೆಗೆ ಸಮಾಜದ ಮುಂದಿನ ಪೀಳಿಗೆಗೆ ಸಮಾಜವು ಮಾರ್ಗದರ್ಶವಾಗಬೇಕು ಸಮಾಜ ಮುಖ್ಯ ವಾಹಿನಿಗೆ ಬರಲು ಶೈಕ್ಷಣಿಕ ಅಭಿವೃದ್ಧಿ ಅಗತ್ಯವಾಗಿದೆ ಎಂದು ತಿಳಿಸಿದರು.


    ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕ ಪ್ರಸಾದ್ ಮಾತನಾಡಿ, ಸಹಕಾರ ಮನೋಭಾವ ಎಂಬುದು ಎಲ್ಲರಲ್ಲಿ ಬಂದಾಗ ಮಾತ್ರ ಪರಸ್ಪರ ಅಭಿವೃದ್ಧಿ ಸಾಧ್ಯವಾಗುತ್ತದೆ. ಈವರೆಗೂ ತಾಲೂಕು ವೀರಶೈವ ಸಂಘದಲ್ಲಿ 1649 ಸದಸ್ಯರಿದ್ದು, ಎಲ್ಲರೂ ಸಹಕಾರ ನೀಡುತ್ತಾ ಬಂದಿದ್ದು, ಇನ್ನು ಮುಂದೆಯೂ ಇದೇ ಸಹಕಾರ ಅಗತ್ಯವಿದೆ ಎಂದರು.
    ಆರ್ಥಿಕ ವರ್ಷದಲ್ಲಿ ಸಂಘದಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಹಾಗೂ ನೂತನ ದೇವಾಲಯಗಳ ಉದ್ಘಾಟನೆಗೆ ಸಹಾಯಧನ ನೀಡುತ್ತಾ ಬಂದಿರುವುದಾಗಿ ತಿಳಿಸಿದರು.


    ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ಲಿಂಗಕ್ಕರದ ಎಲ್ಲಾ ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಾಜದ ಹಿರಿಯ ಮುಖಂಡರಾದ ನಂಜುಂಡಪ್ಪರವರನ್ನು ಗೌರವಿಸಿ ಸನ್ಮಾನಿಸಲಾಯಿತು ಎಲ್ಲರಿಗೂ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ವೀರಶೈವ ಸಂಘದ ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಕಾರ್ಯದರ್ಶಿ ಎಸ್.ಎಸ್.ಶಿವಮೂರ್ತಿ, ಸಹಕಾರ್ಯದರ್ಶಿ ಡಾ. ಜಯರಾಜ್ ಖಜಾಂಚಿ ಟೀಕರಾಜು, ಕರವೇ ಅಧ್ಯಕ್ಷ ನಟರಾಜ್, ನಿರ್ದೇಶಕರುಗಳಾದ ಎಂ.ಬಿ ವಿಜಯ ಕಾಂತ್, ಮೋಹನ್ ಅಬ್ಬನ, ಶಾಂತಪ್ಪ, ಉಮಾ ರವಿಪ್ರಕಾಶ್, ಹೇಮಂತ್ ಮುಂತಾದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts