More

    ಷಾ ಆಗಮನದಿಂದ ಕಾರ್ಯಕರ್ತರಿಗೆ ಹುಮ್ಮಸ್ಸು

    ಬೆಳಗಾವಿ: ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗುಮಿಸುತ್ತಿರುವುದು ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿನ ಸಂಘಟನೆಯ ಹುಮ್ಮಸ್ಸು ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು, ಬೈಲಹೊಂಗಲ, ಖಾನಾಪುರ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಕೇಂದ್ರ ಸ್ಥಾನವಾಗಿ ಎಂ.ಕೆ.ಹುಬ್ಬಳ್ಳಿಯಲ್ಲಿ ಜ.28ರಂದು ವಿಜಯ ಸಂಕಲ್ಪ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಚಿವ ಅಮಿತ್ ಷಾ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದರು.

    ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಸಂಕಲ್ಪದೊಂದಿಗೆ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ವಿಜಯ ಸಂಕಲ್ಪ ಅಭಿಯಾನವನ್ನು ಹತ್ತು ದಿನಗಳ ಕಾಲ ನಿರಂತರವಾಗಿ ನಡೆಸಲಾಗುತ್ತಿದೆ. ಅಲ್ಲದೆ, 10 ಕೋಟಿ ನೂತನ ಸದಸ್ಯರ ನೋಂದಣಿ ಗುರಿ ಹಾಕಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಕ್ಷದ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾಮಗಾರಿಗಳು, ಜನಪ್ರಿಯ ಯೋಜನೆಗಳ ಕುರಿತು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಪಕ್ಷದಿಂದ ಮಾಡಲಾಗುತ್ತಿದೆ. ಬಡವರು, ಕೂಲಿ ಕಾರ್ಮಿಕರಿಗೆ ಸರ್ಕಾರದ ಸಹಾಯ, ಸೌಲಭ್ಯ ಕಲ್ಪಿಸಲಾಗುತ್ತಿದೆ. ಹತ್ತು ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಸರ್ಕಾರದ ಸಾಧನೆಗಳ ಕುರಿತಾದ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದರು.

    ಖಾನಾಪುರ, ಬೈಲಹೊಂಗಲ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಉದ್ದೇಶ ಹಾಗೂ ಪಕ್ಷ ಸಂಘಟನೆಗೆ ಒತ್ತು ನೀಡುವ ಸಲುವಾಗಿ ಎಂ.ಕೆ.ಹುಬ್ಬಳ್ಳಿಯಲ್ಲಿ
    ಅಮಿತ್ ಷಾ ಅವರ ನೇತೃತ್ವದಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ವಿವರಿಸಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ವಕ್ತಾರ ಎಂ.ಬಿ.ಝಿರಲಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇತರರಿದ್ದರು.

    ಸಮಾವೇಶಕ್ಕೆ ಸಕಲ ಸಿದ್ಧತೆ

    ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿ ಜ.28ರಂದು ನಡೆಯಲಿರುವ ಬಿಜೆಪಿ ಜನ ಸಂಕಲ್ಪ ಯಾತ್ರೆ ಸಮಾವೇಶಕ್ಕೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಬೃಹತ್ ವೇದಿಕೆ ಸಿದ್ಧಗೊಂಡಿದೆ. ಸುಮಾರು 50 ಸಾವಿರ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಬರುವ ಜನರಿಗೆ ಊಟ ಮತ್ತು ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ಸ್ಕ್ರೀನ್, ಸಿಸಿ ಕ್ಯಾಮರಾ ಕಂಣ್ಗಾವಲು ಜತೆಗೆ ವಿವಿಧ ಪೊಲೀಸ್ ಅಧಿಕಾರಿಗಳು ಸೇರಿ ಒಂದು ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆ ಕೈಗೊಳ್ಳಲಿದ್ದಾರೆ. ಟ್ರಾಫಿಕ್ ತಡೆಗಟ್ಟುವ ದೃಷ್ಟಿಯಿಂದ ವಿವಿಧೆಡೆ ಪ್ರತ್ಯೇಕ ಪಾಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಮಾರಂಭ ನಡೆಯುವ ಪಕ್ಕದ ಜಾಗದಲ್ಲಿ ಮೂರು ಕಡೆ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಅಲ್ಲಿಯು ಕೂಡ ಜನ ಸುಳಿಯದಂತೆ ಅಗತ್ಯ ಭದ್ರತೆ ಕೈಗೊಳ್ಳಲಾಗಿದೆ. ಮಧ್ಯಾಹ್ನ 1 ಗಂಟೆ ಒಳಗೆ ಸಮಾರಂಭ ನಡೆಯುವ ಸ್ಥಳಕ್ಕೆ ಎಲ್ಲ ಜನರು ಬರುವಂತೆ ಶಾಸಕ ಮಹಾಂತೇಶ ದೊಡಗೌಡರ ಈಗಾಗಲೇ ಮನವಿ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಇಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ಕೆಲಸ ಮಾಡುತ್ತಿದ್ದಾರೆ. ಆಕಾಂಕ್ಷಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಓಡಾಡಿ ಕೆಲಸ ಮಾಡುತ್ತಿರಬಹುದು. ಆದರೆ, ಅಭ್ಯರ್ಥಿಗಳನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡಲಿದೆ. ಪಕ್ಷದ ಹೊರತಾಗಿ ಯಾರೂ ವೈಯಕ್ತಿಕ ಸಮಾವೇಶ, ಸಭೆ ನಡೆಸಿದರೆ ಅವರ ಮೇಲೆ ಪಕ್ಷ ಕ್ರಮ ಕೈಗೊಳ್ಳಲಿದೆ.
    | ಮಹೇಶ ಟೆಂಗಿನಕಾಯಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts