More

    ಶ್ರೀ ಚನ್ನಕೇಶವಸ್ವಾಮಿ ದರ್ಶನ ಪಡೆದ ಡಿಸಿ

    ಬೇಲೂರು: ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ನಂತರ ಪ್ರಥಮ ಬಾರಿಗೆ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಗುರುವಾರ ಆಗಮಿಸಿದ ಅರ್ಚನಾ ಅವರಿಗೆ ದೇಗುಲ ಆಡಳಿತ ಮಂಡಳಿಯಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

    ದೇವರಿಗೆ ಪೂಜೆ ಸಲ್ಲಿಸಿದ ಅರ್ಚನಾ ಅವರು ಕೆಲ ಸಮಯ ದೇಗುಲದ ಶಿಲ್ಪಕಲೆಯನ್ನು ವೀಕ್ಷಿಸಿ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
    ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳನ್ನು 2022-23ನೇ ಸಾಲಿನ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ (ಯುನೆಸ್ಕೊ) ಸೇರಿಸಲು ಕೇಂದ್ರ ಸರ್ಕಾರ ಈಗಾಗಲೇ ನಾಮನಿರ್ದೇಶನ ಮಾಡಿದೆ. ಮುಂದಿನ ತಿಂಗಳು ಯುನೆಸ್ಕೊ ತಂಡ ಬೇಲೂರು-ಹಳೇಬೀಡಿಗೆ ಅಧಿಕೃತ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಿತಿ-ಗತಿ ಬಗ್ಗೆ ಖುದ್ದು ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

    ಕೇಂದ್ರ ಸರ್ಕಾರ ತನ್ನ ಅಂತಿಮ ಪಟ್ಟಿಯಲ್ಲಿ ಬೇಲೂರು ಚನ್ನಕೇಶವ ದೇಗುಲ, ಹಳೇಬೀಡಿನ ಹೊಯ್ಸಳೇಶ್ವರ ಹಾಗೂ ಸೋಮನಾಥಪುರದ ದೇಗುಲಗಳನ್ನು ಸೇರಿಸಿದೆ. ಮೂರು ಕಡೆಗಳಲ್ಲೂ ಹೊಯ್ಸಳ ಸಾಮ್ರಾಜ್ಯದ ವಾಸ್ತುಶಿಲ್ಪ ವೈಭವ ಅತ್ಯುತ್ತಮವಾಗಿದೆ. ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆ ದೇಗುಲದ ಸ್ವಚ್ಛತೆ ಕಾರ್ಯದ ಜೊತೆಗೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದನ್ನು ಖುದ್ದು ಪರಿಶೀಲಿಸುತ್ತಿದ್ದೇವೆ. ಈಗಾಗಲೇ ದೇಗುಲದ ಒಳ ಆವರಣದ ನೆಲಹಾಸಿನ ಬದಲಾವಣೆ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ನೆಲಹಾಸು ಸ್ಥಗಿತವಾಗಿದೆ ಎಂದರು.

    ರಾಸಾಯನಿಕ ಬಳಸಿ ದೇಗುಲದ ಸ್ವಚ್ಛತಾ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿನ ಶಿಲ್ಪಕಲೆಗಳಿಗೆ ಯಾವುದೇ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಲು ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇದರೊಂದಿಗೆ ದೇಗುಲದ ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ಪಾರಂಪರಿಕ ತಾಣವನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಿದೆ. ಈ ಬಗ್ಗೆ ಜಿಲ್ಲಾಡಳಿತ ಪೂರಕವಾಗಿ ಸ್ಪಂದಿಸಲಿದೆ ಎಂದು ಹೇಳಿದರು.

    ಚನ್ನಕೇಶವಸ್ವಾಮಿ ದೇಗುಲದಲ್ಲಿ ಪ್ರತಿ ಶನಿವಾರ ನಡೆಯುವ ಅಭಿಷೇಕದ ದಿನಾಂಕ ಮತ್ತು ಸಮಯ ಬದಲಾವಣೆ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂಬುದು ಗಮನಕ್ಕೆ ಬಂದಿದ್ದು, ಶನಿವಾರ ಮತ್ತು ಭಾನುವಾರ ಹೆಚ್ಚು ಪ್ರವಾಸಿ ಜನಸಂದಣಿ ಕಾರಣದಿಂದ ಮುಜರಾಯಿ ಇಲಾಖೆಯ ಒಪ್ಪಿಗೆ ಪಡೆದು ಅಭಿಷೇಕ ನಡೆಸಿದ್ದಾರೆ. ಭಕ್ತರ ಮನಸ್ಸಿಗೆ ನೋವು ಉಂಟಾಗಿದ್ದರೆ ಪರಿಶೀಲಿಸಲಾಗುವುದು. ಬೇಲೂರಿಗೆ ಯುನೆಸ್ಕೊ ತಂಡ ಭೇಟಿ ನೀಡುವ ಮುನ್ನ ಬೆಂಗಳೂರಿನಲ್ಲಿ ಮುಖ್ಯ ಕಾರ್ಯದರ್ಶಿಗಳ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಇಲ್ಲಿನ ಸಮಸ್ಯೆಗಳು ಸೇರಿದಂತೆ ಸ್ಥಳೀಯರ ಅಭಿಪ್ರಾಯಗಳನ್ನು ಸಭೆಯಲ್ಲಿ ತಿಳಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts