More

    ಶ್ರೀ ಈಶಪ್ರಿಯರಿಗೆ ಪರ್ಯಾಯ ಸರ್ವಜ್ಞ ಪೀಠ

    ಪಡುಬಿದ್ರಿ: ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪರ್ಯಾಯ ಸರ್ವಜ್ಞ ಪೀಠ ಏರಲಿದ್ದಾರೆ ಎಂದು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸೋಮವಾರ ಪ್ರಕಟಿಸಿದರು. 1956-58, 1972-74ರಲ್ಲಿ ವಿಭುದೇಶ ತೀರ್ಥರು ಪರ್ಯಾಯ ನಡೆಸಿ ನಮ್ಮನ್ನು 1988-90ರಲ್ಲಿ ಪರ್ಯಾಯ ಪೀಠವೇರಲು ಅವಕಾಶ ಕಲ್ಪಿಸಿದ್ದರು. ಎರಡು ಪರ್ಯಾಯ ನಡೆಸಿದ್ದೇವೆ. ಗುರುಗಳ ಕ್ರಮದಂತೆ ಈ ಬಾರಿಯ ಪರ್ಯಾಯ ಪೀಠವನ್ನು ಕಿರಿಯ ಶ್ರೀಗಳು ಏರಲಿದ್ದಾರೆ. ಅದಕ್ಕಾಗಿ ಅವರನ್ನು ಒಪ್ಪಿಸಿದ್ದೇವೆ. ನನಗಿಂತ ಉತ್ತಮವಾಗಿ ಅವರು ಪರ್ಯಾಯ ನಡೆಸುತ್ತಾರೆಂಬ ವಿಶ್ವಾಸವಿದೆ ಎಂದು ವಿಶ್ವಪ್ರಿಯ ತೀರ್ಥರು ಅದಮಾರು ಮೂಲ ಮಠದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಪೀಠದಲ್ಲಿ ಯಾರು ಕುಳಿತರೇನು? ನಮ್ಮಿಬ್ಬರ ಸಂಕಲ್ಪ ಒಂದೇ. ಕೃಷ್ಣ ಮಾಹಾಪೂಜೆ ಸಾಂಗವಾಗಿ ನೆರವೇರಬೇಕು. ಲೋಕದ ಕ್ಷೇಮವಾಗಬೇಕು. ಕೃಷ್ಣನಿಗೆ ಯಾವ ಕಾಲಕ್ಕೆ ಸಮಾಜಕ್ಕೆ ಏನು ಕೊಡಬೇಕೆಂದು ಗೊತ್ತಿದೆ. ಅದನ್ನು ಆತ ಕೊಡುತ್ತಾನೆ. ಸಮಾಜದಲ್ಲಿ ನನ್ನದೊಂದು ಕೋರಿಕೆ ಇದೆ. ಸಂಬಂಧ ಪಡದ ವಿಷಯವನ್ನು ಯಾರೂ ಮಾತನಾಡಬಾರದು. ಇಲ್ಲದಿದ್ದರೆ ಪೌರತ್ವದ ಬಗ್ಗೆ ಗಲಾಟೆ ಮಾಡಿದಂತಾಗುತ್ತದೆ. ಗಲಾಟೆ ಮಾಡಿದವರಲ್ಲಿ ವಿಷಯ ಕೇಳಿದರೆ ಗೊತ್ತಿಲ್ಲ ಎನ್ನುವ ಉತ್ತರ ಸಿಗುತ್ತಿದೆ. ಅದೇ ರೀತಿ, ಆಧ್ಯಾತ್ಮಿಕ ವಿಷಯ ದಲ್ಲಿ ಖುಷಿ ಬಂದಂತೆ ಮಾತನಾಡಿದರೆ ಅವರ ಆತ್ಮಕ್ಕೇ ತೊಂದರೆಯಾಗುತ್ತದೆ. ಇನ್ನು ಮುಂದೆಯಾದರೂ ಸಮಾಜ, ಪೀಠದ ಬಗ್ಗೆ, ಆಧ್ಯಾತ್ಮಿಕ ವಿಷಯದಲ್ಲಿ ಮಾತಾಡುವಾಗ ಮೊದಲು ವಿಮರ್ಶಿಸಿ ಹೌದೆಂದಾದಾರೆ ಮಾತಾಡಬೇಕು ಎಂದು ಸಂದೇಶ ಕೊಡುತ್ತಿದ್ದೇನೆ ಎಂದರು.

    ಜನರ ಮಾತಿನಿಂದ ನೋವಾಗಿದೆ: ಪುರಪ್ರವೇಶದಿಂದ ಪೀಠಾರೋಹಣದವರೆಗೂ ಕಿರಿಯ ಶ್ರೀಗಳೇ ಇರಲಿದ್ದಾರೆ. ಆಧಿಕಾರ ಬಿಟ್ಟುಕೊಟ್ಟಿರುವ ಬಗ್ಗೆ ಯಾವುದೇ ನೋವು ಇಲ್ಲ. ಅಧಿಕಾರ ಕಸಿದುಕೊಂಡದ್ದಲ್ಲ. ಜನ ಸುಮ್ಮನೆ ಮಾತನಾಡುವಾಗ ನೋವಾಯಿತು ಎಂದು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಸಾಮಾಜಿಕ ಜಾಲತಾಣದ ವಿಷಯಗಳು ಬೇಸರ ತಂದಿದೆ. ಪೂಜೆ ಮಾಡುತ್ತೇನೆ. ಅವಸರ ಸನಕಾದಿ ಪೂಜೆ, ಮಹಾಪೂಜೆ, ರಾತ್ರಿ ಚಾಮರ ಸೇವೆಯನ್ನು ಪರ್ಯಾಯ ಪೀಠದಲ್ಲಿ ಕುಳಿತವರೇ ಮಾಡುತ್ತಾರೆ. ಉಳಿದೆಲ್ಲ ಪೂಜೆಗಳನ್ನು ಇತರ ಸ್ವಾಮಿಗಳು ನೆರವೇರಿಸುತ್ತಾರೆ. ಉಡುಪಿಯಲ್ಲಿರುವಾಗ ಪ್ರವಚನ ನಿರಾತಂಕವಾಗಿ ನಡೆಯಲಿವೆ. ಶಿಕ್ಷಣ ಸಂಸ್ಥೆಗಳ ನಿಭಾವಣೆ ಹೊಣೆಗಾರಿಕೆಯಿಂದ ಸಂಚಾರದಲ್ಲಿರುತ್ತೇನೆ ಎಂದರು.

    ಮೆರವಣಿಗೆ, ದರ್ಬಾರಿನಲ್ಲಿ ಪಾಲ್ಗೊಳ್ಳಲಾರೆ: ನಮ್ಮ ಹಿಂದಿನ ಪರ್ಯಾಯದ ಬಳಿಕದ ಯಾವುದೇ ಪರ್ಯಾಯ ಮೆರವಣಿಗೆ, ದರ್ಬಾರಿನಲ್ಲಿ ಪಾಲ್ಗೊಂಡಿಲ್ಲ. ಈ ಬಾರಿಯೂ ಪರ್ಯಾಯ ಮೆರವಣಿಗೆ ಸಹಿತ ದರ್ಬಾರಿನಲ್ಲಿ ಪಾಲ್ಗೊಳ್ಳುವುದಿಲ್ಲ. ನನ್ನ ಗುರುಗಳೂ ಅದೇ ರೀತಿ ಮಾಡಿದ್ದರು. ನಾನು ಉಡುಪಿಯಲ್ಲೇ ಇರುತ್ತೇನೆ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

    ಹಿರಿಯ ಶ್ರೀಗಳ ಆಜ್ಞೆಯಂತೆ ಪರ್ಯಾಯ ನಡೆಸುತ್ತೇನೆ. ಸಂಪ್ರದಾಯಕ್ಕೆ ತೊಡಕಾಗದಂತೆ ಬಡಗು ಮಾಳಿಗೆಯಲ್ಲಿ ಅರಳುಗದ್ದಿಗೆ ಸಹಿತ ಒಳಗಿನ ಕಾರ್ಯಗಳು ನಡೆಯಲಿವೆ. ಒಳಗಿನ ಪೂಜೆಗಳ ಬಳಿಕ ದರ್ಬಾರು ನಡೆಯಲಿದೆ. ತಿಳಿಸಿದರು. ಜನರ ಅನುಕೂಲತೆ ದೃಷ್ಟಿಯಿಂದ, ಎಲ್ಲ ಸ್ವಾಮೀಜಿಗಳ ಒಪ್ಪಿಗೆಯಂತೆ ಪರ್ಯಾಯ ದರ್ಬಾರು ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇದು ನಿರೆಂತರವೆಂದೇನಿಲ್ಲ. ಪ್ರಯೋಗ ಹೊಸದಾಗಿದ್ದರಿಂದ ಸಾಧಕ-ಬಾಧಕಗಳನ್ನರಿತು ಮುಂದುವರಿಸಲೂಬಹುದು.
    – ಶ್ರೀ ಈಶಪ್ರಿಯ ತೀರ್ಥರು

    ಕಾಲೇ ವರ್ಷತು ಪರ್ಜನ್ಯಃ ಎಂಬಂತೆ ತಮ್ಮ ಶಿಷ್ಯ ಮಠದಲ್ಲಿ ನೀರಿಂಗಿಸುವ ಕಾರ್ಯಕ್ರಮ ಮೂಲಕ ಸಮಾಜಕ್ಕೆ ತಿಳಿಹೇಳುವ ನೈತಿಕ ಹಕ್ಕು ಕಂಡುಕೊಂಡಿದ್ದಾರೆ. ನೀರಿಲ್ಲದೆ ಜನರು ಒದ್ದಾಡುತ್ತಿದ್ದಾರೆ. ನೀರಿಗೆ ಬಹಳ ಮಹತ್ವವಿದೆ. ಸಮಾಜಕ್ಕೆ ಒಳ್ಳೆದಾಗಬೇಕೆಂಬ ಕಾನೂನು ಜಾರಿ ಮಾಡಿದರೆ ಅದನ್ನು ನಮ್ಮವರೇ ಸೇರಿ ಕ್ಷೋಭೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಯಾರೂ ಹಾಳಾಗಲಿ ನಾವು ಹೇಳುವುದಿಲ್ಲ.
    – ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಅದಮಾರು ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts