More

    ಶೌಚಗೃಹ ಕಾಮಗಾರಿಗೆ ಇಂದು ಚಾಲನೆಯ ಭರವಸೆ

    ರಟ್ಟಿಹಳ್ಳಿ: ಪಟ್ಟಣದ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾ.ಪಂ. ಸದಸ್ಯರ ಸಭೆಯಲ್ಲಿ ಸ್ಥಳೀಯ ನಿವಾಸಿಗಳು ಆಗಮಿಸಿ ಗ್ರಾ.ಪಂ. ಕೇಂದ್ರದ ಮುಂಭಾಗದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

    ಸ್ಥಳೀಯ ನಿವಾಸಿ ನಾಗರಾಜ ಸುಣಗಾರ ಮಾತನಾಡಿ, 6 ತಿಂಗಳ ಹಿಂದೆ ಇಲ್ಲಿದ್ದ ಹಳೆಯ ಸಾರ್ವಜನಿಕ ಶೌಚಗೃಹವನ್ನು ತೆರವುಗೊಳಿಸಿ ತಾತ್ಕಾಲಿಕವಾಗಿ ತಾಡಪತ್ರಿ ಶೆಡ್ ಹಾಕಿ ಶೌಚಗೃಹ ನಿರ್ಮಾಣ ಮಾಡಲಾಗಿದೆ. ಮಹಿಳೆಯರಿಗೆ ಇದು ಬಳಸಲು ಯೋಗ್ಯವಾಗಿಲ್ಲ. ಪ್ರತಿದಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರು ಆಗಮಿಸುತ್ತಾರೆ. ಅವರಿಗೆ ಶೌಚಗೃಹದ ಸಮಸ್ಯೆ ಇದ್ದು, ಶೀಘ್ರವೇ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಬೇಕು. ನಂತರ ವಾಣಿಜ್ಯ ಮಳಿಗೆಗಳ ನಿರ್ವಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

    ಸ್ಥಳೀಯ ನಿವಾಸಿ ವೀರೇಶ ಬುಳ್ಳಾಪುರ ಮಾತನಾಡಿ, ಮಹಿಳೆಯರು ಶೌಚಗೃಹಕ್ಕಾಗಿ ತಮ್ಮ ಪರಿಚಯಸ್ಥರ ಮನೆಗಳಿಗೆ ಹೋಗಬೇಕಾಗಿದೆ. ಗ್ರಾಮ ಪಂಚಾಯಿತಿಯವರು ಇಲ್ಲಿನ ಸಮಸ್ಯೆಯನ್ನು ಮನಗಂಡು ಶೌಚಗೃಹ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

    ಪಿಡಿಒ ಪ್ರಕಾಶ ಸುಂಕಾಪುರ ಮಾತನಾಡಿ, ಜ. 4ರಂದು ಸಾರ್ವಜನಿಕ ಶೌಚಗೃಹ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಶನಿವಾರ ಗ್ರಾ.ಪಂ. ಸಭೆ ಇದ್ದುದರಿಂದ ಗ್ರಾ.ಪಂ. ಸದಸ್ಯರ ಗಮನಕ್ಕೆ ತಂದಿದ್ದು, ಜ. 5ರಿಂದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

    ಗ್ರಾಮಸ್ಥರಾದ ಅಜ್ಜಪ್ಪ ಜಾದವ, ದೇವರಾಜ ನಾಯ್ಕ, ಮಂಜು ಅಸ್ವಾಲಿ, ವೆಂಕಟೇಶ ಓಗೀಕೊಪ್ಪ, ಗಣೇಶ ಮಕರಿ, ಶಂಕ್ರಪ್ಪ ಚಲವಾದಿ ಇತರರು ಇದ್ದರು.

    ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದ ವಿಜಯವಾಣಿ: ಶೌಚಗೃಹ ಸಮಸ್ಯೆ ಕುರಿತು ಜ. 3ರಂದು ‘ವಿಜಯವಾಣಿ’ಯಲ್ಲಿ ‘ಪಟ್ಟಣದಲ್ಲಿಲ್ಲ ಸಾರ್ವಜನಿಕ ಶೌಚಗೃಹ’ ಶೀರ್ಷಿಕೆಯಡಿ ವಿಸ್ತ್ರ್ತತ ವರದಿ ಪ್ರಕಟಿಸಲಾಗಿತ್ತು. ಈ ಮೂಲಕ ಸಾರ್ವಜನಿಕರು ನಿತ್ಯ ಅನುಭವಿಸುತ್ತಿರುವ ಸಂಕಷ್ಟದ ಕುರಿತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts