More

    ಶೋಷಿತರ ಸಮಾವೇಶಕ್ಕೆ ಸಾವಿರ ಬಸ್ -ಹೊದಿಗೆರೆ ರಮೇಶ್ – ಸಮಾಲೋಚನಾ ಸಭೆ

    ದಾವಣಗೆರೆ: ಚಿತ್ರದುರ್ಗದಲ್ಲಿ ಜ.28ರಂದು ಆಯೋಜಿಸಿರುವ ಶೋಷಿತರ ಜಾಗೃತಿ ಸಮಾವೇಶದಲ್ಲಿ ಹಿಂದುಳಿದ ವರ್ಗಗಳ ಶಕ್ತಿ ಪ್ರದರ್ಶಿಸಬೇಕಿದೆ. ಇದನ್ನು ಹಿಂದುಳಿದ ಸಮಾಜದವರು ಚಳವಳಿ ರೂಪವಾಗಿ ಪರಿಗಣಿಸಬೇಕು ಎಂದು ನಾಯಕ ಸಮಾಜದ ಮುಖಂಡ ಹೊದಿಗೆರೆ ರಮೇಶ್ ಮನವಿ ಮಾಡಿದರು.
    ಶೋಷಿತರ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಛಲವಾದಿ ಮಹಾಸಭಾದ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
    ನಾವುಗಳು ನಮ್ಮ ಸಮಾವೇಶವನ್ನು ಚಳವಳಿಯಾಗಿ ಪರಿಗಣಿಸಬೇಕು. ಇದು ರಾಜಕೀಯ ಸಮಾವೇಶದಂತಲ್ಲ. ಇಲ್ಲಿ ಸಮುದಾಯದ ಜನರು ಸ್ವಯಂಪ್ರೇರಿತರಾಗಿ ಬರಬೇಕು. ಜಿಲ್ಲೆಯ ಮುಖಂಡರು ಅಗತ್ಯ ಬಸ್ ಸೌಕರ್ಯ ಕಲ್ಪಿಸಬೇಕು ಎಂದರು.
    ಎಚ್.ಕಾಂತರಾಜು ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಬೇಕು ಎಂಬ ಉದ್ದೇಶಕ್ಕೆ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇವೆಯೇ ಹೊರತಾಗಿ ಅವರು ಅಹಿಂದ ಸಮಾಜದವರು ಎಂಬ ಕಾರಣಕ್ಕಾಗಿ ಅಲ್ಲ ಎಂದೂ ಸಮರ್ಥಿಸಿಕೊಂಡರು.
    ಜಾತಿಗಣತಿ ವರದಿ ವೈಜ್ಞಾನಿಕವಾಗಿದ್ದು, ಇದು ಜಾರಿಯಾಗಲೇಬೇಕು. ಶೋಷಿತ ಸಮುದಾಯಗಳು ಎಂಟು ರೂ.ಗಳ ಮೌಲ್ಯ ಹೊಂದಿದ್ದರೂ ಕೇವಲ ಎರಡು ರೂ. ಮೌಲ್ಯದ ಸೌಲಭ್ಯ ಪಡೆಯುತ್ತಿವೆ. ಆದರೆ, ಕೆಲ ಸಮಾಜಗಳು ತಮ್ಮ ಮೌಲ್ಯಕ್ಕೂ ಮೀರಿದ ಅವಕಾಶಗಳನ್ನು ಪಡೆಯುತ್ತಿವೆ. ಇದು ತಪ್ಪಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.
    ಸಮಾವೇಶ ಯಶಸ್ಸಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಚಿತ್ರದುರ್ಗಕ್ಕೆ ಹತ್ತಿರವುಳ್ಳ ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಜನರನ್ನು ಕರೆತರಲು ಹಿಂದುಳಿದ ಸಮಾಜಗಳ ಮುಖಂಡರು ಶ್ರಮಿಸಬೇಕು. ಜಿಲ್ಲೆಯಿಂದ ಕನಿಷ್ಠ 1 ಸಾವಿರ ಬಸ್, ದಾವಣಗೆರೆ ನಗರದಿಂದ ಕನಿಷ್ಠ 100 ಬಸ್ ಸಂಪರ್ಕ ಕಲ್ಪಿಸಲಾಗುವುದು. ಯಾವ ಭಾಗದಿಂದ ಎಷ್ಟು ಜನರು ಬರಬಹುದು ಎಂಬ ಲೆಕ್ಕ ನೀಡಿದರೆ ಬಸ್ ಸೌಕರ್ಯ ಕಲ್ಪಿಸಬಹುದು ಎಂದು ತಿಳಿಸಿದರು.
    ಬೈಕ್‌ಗಳಲ್ಲಿ ಯುವಕರು ಭಾಗವಹಿಸುತ್ತಾರೆ. ಅದಕ್ಕೂ ಆದ್ಯತೆ ನೀಡುವಂತೆ ಮುಖಂಡ ಆರ್.ರವಿ ಹೇಳಿದಾಗ, ಬಸ್‌ಗಳಲ್ಲಿ ಹೋಗುವುದು ಸುರಕ್ಷಿತ. ಬೈಕ್‌ಗಳಿಂದ ಕೆಲವೆಡೆ ಅನಾಹುತಗಳಾಗಿವೆ. ಅದಕ್ಕೆ ಆಸ್ಪದ ನೀಡುವುದು ಬೇಡ ಎಂದು ಹೊದಿಗೆರೆ ರಮೇಶ್ ಮನವಿ ಮಾಡಿದರು.
    ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಅಹಿಂದ ನಾಯಕ ಸಿದ್ದರಾಮಯ್ಯನವರ ಕೈ ಬಲ ಪಡಿಸಲು ಶೋಷಿತ ಸಮುದಾಯದವರು ಸಮಾವೇಶ ಯಶಸ್ವಿಗೊಳಿಸಬೇಕು ಎಂದರು.
    ಲಂಬಾಣಿ ಸಮುದಾಯದ ಮುಖಂಡ ವೀರೇಶ್‌ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಹಿಂದುಳಿದ ಸಮಾಜದ ಇಬ್ಬರು ಶಾಸಕರಿದ್ದಾರೆ, ಸಮಾಜದ ಮತಗಳಿಂದ ಗೆದ್ದಿರುವ ಅವರು ಸಮಾವೇಶದ ಜವಾಬ್ದಾರಿ ಹೊರುತ್ತಿಲ್ಲ. ಫೋನ್ ಸಹ ಸ್ವೀಕರಿಸುತ್ತಿಲ್ಲ. ಸಭೆಗಳಲ್ಲೂ ಭಾಗವಹಿಸುತ್ತಿಲ್ಲ ಎಂದು ಕಿಡಿಕಾರಿದರು.
    ಕುರುಬ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಚ್. ಪರಶುರಾಮಪ್ಪ, ಶಿವಕುಮಾರ್ ಒಡೆಯರ್ ಮಾತನಾಡಿ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ರುದ್ರಮುನಿ ಮಾತನಾಡಿದರು.
    ನಿವೃತ್ತ ಡಿಎಚ್‌ಒ ಡಾ. ಜಗನ್ನಾಥ್, ಶೇಖರಪ್ಪ, ಹದಡಿ ಚಂದ್ರಪ್ಪ, ಕೊಟ್ರಬಸಪ್ಪ, ಚಿದಾನಂದಪ್ಪ, ಎಸ್.ಎಸ್.ಗಿರೀಶ್, ಕೆ. ರೇವಣಸಿದ್ದಪ್ಪ, ಮೌನೇಶಾಚಾರ್, ಕರಿಬಸಪ್ಪ ಬಾವಿಕಟ್ಟೆ, ಸೋಮಶೇಖರಪ್ಪ, ಸಿರಾಜ್‌ಶೇಖ್, ಎನ್.ಎಂ. ಆಂಜನೇಯ ಗುರೂಜಿ, ದೇವರಬೆಳೆಕೆರೆ ಮಹೇಶ್ವರಪ್ಪ, ಎನ್. ರವಿ ಇತರರಿದ್ದರು.

    ದಾವಣಗೆರೆ ನಗರದಲ್ಲಿ ಅಹಿಂದ ಬಲಿಷ್ಠವಾಗಿದೆ. ಈ ಭಾಗದಿಂದಲೇ ಅತಿ ಹೆಚ್ಚಿನ ಜನದು ಸಮಾವೇಶದಲ್ಲಿ ಭಾಗಿಯಾಗಬೇಕಿದೆ. ಈ ದಿಸೆಯಲ್ಲಿ ಪಾಲಿಕೆ ಸದಸ್ಯರಿಗೆ ಜವಾಬ್ದಾರಿ ನೀಡಬೇಕು.
    ಎನ್. ಜಯದೇವ ನಾಯ್ಕ, ವಕೀಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts