More

    ಶೋತೃಗಳ ಮನದಾಳಕ್ಕೆ ಇಳಿದ ಬುದ್ಧನ ಬೆಳಕು

    ಚಿತ್ರದುರ್ಗ: ಅಲ್ಲಿ ಹಿಂಸೆ ಇತ್ತು, ಸಾವು-ನೋವಿತ್ತು, ಮೌಢ್ಯ ಬಿತ್ತುವ ಕೆಲಸವೂ ಮುಂದುವರೆದಿತ್ತು, ದುಃಖ ಸೇರಿ ಸಮಸ್ಯೆಗಳ ಸರಮಾಲೆ ಜನರನ್ನು ಕಾಡುತ್ತಲೇ ಇತ್ತು. ಇವುಗಳಿಗೆ ಪರಿಹಾರ ಕಂಡುಕೊಳ್ಳಲು, ವಿಶ್ವಕ್ಕೆ ನೆಮ್ಮದಿ, ಸಂತೋಷ ಸಿಗಲು ಶಾಂತಿಯಿಂದ ಮಾತ್ರ ಸಾಧ್ಯವೆಂಬ ಬುದ್ಧನ ಪಯಣ ಮುಂದುವರೆದಿತ್ತು….

    ತರಾಸು ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯಿಂದ ಭಾನುವಾರ ನಡೆದ ಡಿಂಗ್ರಿ ನರೇಶ್ ನಿರ್ದೇಶನದ, ವಿಕಾಸ್ ಆರ್. ಮೌರ್ಯ ರಚನೆಯ ‘ಬುದ್ಧನ ಬೆಳಕು’ ನಾಟಕದಲ್ಲಿ ಕಂಡುಬಂದ ದೃಶ್ಯವಿದು.

    ಮಾನವ ಬಂಧುತ್ವ ವೇದಿಕೆ ತಂಡದ ಕಲಾವಿದರು ಗೌತಮ ಬುದ್ಧನಾಗುವ ಕಡೆ ಸಾಗಿದ ಹಾದಿ, ಅಷ್ಠಾಂಗ ಮಾರ್ಗವನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಶೋತೃಗಳ ಮನದಾಳದೊಳಗೆ ಇಳಿದರು. ಮನೋಜ್ಞ ಅಭಿನಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.

    ಯುದ್ಧ ಸರ್ವಕಾಲಕ್ಕೂ ಹಿಂಸೆಯನ್ನೇ ಪ್ರಚೋದಿಸಿ ಧರ್ಮ, ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯದೊಂದಿಗೆ ಪರಸ್ಪರ ಮನುಷ್ಯರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತ ಬಂದಿದೆ ಎಂಬ ನೈಜ ಘಟನೆ ಆಧರಿಸಿ ನಾಟಕ ಆರಂಭವಾಯಿತು. ಈ ಸತ್ಯ ಅರಿತ ಸಾಮ್ರಾಟ ಅಶೋಕ ಕಳಿಂಗ ಯುದ್ಧದ ನಂತರ ತನ್ನಿಂದಾದ ಅನಾಹುತಕ್ಕೆ ಬುದ್ಧ ಧಮ್ಮ ಸ್ವೀಕರಿಸಿದ ಬಗೆ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಯಿತು.

    ಉಪವಾಸ ನಿರಾಕರಿಸಿ, ಜ್ಞಾನ ಸಾಧನೆಗೆ ಜನರೊಂದಿಗೆ ಬೆರೆತ ಬುದ್ಧ ದುಃಖಕ್ಕೆ ಕಾರಣವಾದ ಬಗೆ, ಅದರ ನಿವಾರಣೆ, ಮನುಕುಲದ ಒಳತಿಗಾಗಿ ಶಾಂತಿ ಮರುಸ್ಥಾಪಿಸುವ ಇಚ್ಛೆಯಿಂದ ರೋಹಿಣಿ ನದಿ ನೀರಿನ ಹಂಚಿಕೆಯ ಸಂಘರ್ಷದಿಂದ ಅರಮನೆ ತ್ಯಜಿಸಿದ ಪ್ರಸಂಗ ರೋಮಾಂಚನ ಮೂಡಿಸಿತು.

    ಸತ್ಯ ಶೋಧನೆಯ ಹುಡುಕಾಟ, ಅಸ್ಪಶ್ಯತೆ, ಅಸಮಾನತೆ ಸೇರಿ ಸಾಮಾಜಿಕ ಪಿಡುಗುಗಳಿಗೆ, ಸಂಕಟಗಳಿಗೆ ತನ್ನ ಅರಿವಿನ ಬೆಳಕಿನ ಔಷಧಿ ನೀಡುತ್ತ, ಬೌದ್ಧ ಬಿಕ್ಕುಗಳನ್ನು ಹೊಂದುತ್ತ ಸಾಗುವ ಹಾದಿ ಮಂತ್ರಮುಗ್ಧರನ್ನಾಗಿಸಿತು. ಪ್ರಶ್ನಿಸುವ ಮನೋಭಾವ, ಬುದ್ಧನ ಸಮಾನತೆಯ ತತ್ವಗಳ ಬೋಧನೆ ಸಂವಿಧಾನದಲ್ಲಿ ರೂಪುಗೊಂಡ ಅಂಶಗಳಂತೆ ಭಾಸವಾಯಿತು.

    ಮುಟ್ಟಾದ ಸ್ತ್ರೀಯನ್ನು ಪ್ರಕೃತಿಗೆ ಸಮೀಕರಿಸುವ, ನಾಟಕದ ಕೊನೆಯ ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧಮ್ಮ ಸ್ವೀಕರಿಸುವುದು, ಶಿಕ್ಷಣದ ಮಹತ್ವ ಸಾರಿ ದಾರಿ ತೋರಿಸುವ ಸಾಂಕೇತಿಕ ದೃಶ್ಯಕ್ಕೆ ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ ವ್ಯಕ್ತವಾಯಿತು.

    ವೇದಿಕೆ ಸದಸ್ಯರಾದ ವೇದಾಂತ ಏಳಂಜಿ, ಕೆ.ಸಿದ್ದೇಶ್, ಜಿ.ಹನುಮಂತಪ್ಪ, ಡಾ.ಸಂಜೀವಕುಮಾರ್ ಪೋತೆ, ಎಚ್.ಕುಮಾರ್, ಶ್ರೀನಿವಾಸರಾಜು, ಆರ್.ಮಂಜುನಾಥ, ವಿಶ್ವಾನಂದ ವದ್ದಿಕೆರೆ, ಲಿಂಗೇಶ್ವರ್, ರಮೇಶ್, ಪರಶುರಾಮ್, ಶ್ರೀನಿವಾಸ್, ಡಾ.ಗಿರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts