More

    ಶೈಕ್ಷಣಿಕ ಯಶಸ್ಸಿಗೆ ಸಿದ್ಧತೆ ಮಾಡಿಕೊಳ್ಳಿ

    ಹುಕ್ಕೇರಿ: ಕೋವಿಡ್-19 ಸಂಭವನೀಯ 3ನೇ ಅಲೆ ನಿಯಂತ್ರಿಸಲು ಬೇಕಾದ ಎಲ್ಲ ಮುಂಜಾಗ್ರತೆ ಕೈಗೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳು ಸಿದ್ಧ
    ಇರಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಸೂಚಿಸಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ತಮ್ಮ ಅನುದಾನದಲ್ಲಿ ತಾಲೂಕಾಡಳಿತಕ್ಕೆ ನೀಡಿದ ಆಮ್ಲಜನಕ ಸಾಂದ್ರಕಗಳ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ತಾಲೂಕಾಡಳಿತ ಶ್ರಮಿಸಿದಂತೆ 3ನೇ ಅಲೆ ಎದುರಿಸಲೂ ಸಹ ಸನ್ನದ್ಧರಾಗಿರಬೇಕು. ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಹುಕ್ಕೇರಿ ಮತ್ತು ಸಂಕೇಶ್ವರ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸಬೇಕು ಎಂದು ಸೂಚಿಸಿದರು. ಎರಡು ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಇದೇ ರೀತಿ ಮುಂದುವರಿದಲ್ಲಿ ಮಕ್ಕಳಲ್ಲಿ ಕಲಿಕಾಸಕ್ತಿ ಕಡಿಮೆಯಾಗುತ್ತದೆ. ಹಾಗಾಗಿ, ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದ ಯಶಸ್ಸಿಗೆ ಗಮನ ಹರಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಸಚಿವ ಉಮೇಶ ಕತ್ತಿ ಆದೇಶಿಸಿದರು.

    ಮಾದರಿ ಕಾರ್ಯ: ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಹುಕ್ಕೇರಿ ತಾಲೂಕು ರಾಜ್ಯಕ್ಕೆ ಮಾದರಿಯಾಗಿದೆ. ಅದಕ್ಕೆ ಸಚಿವ ಉಮೇಶ ಕತ್ತಿ ಅವರ ಕರ್ತೃತ್ವ ಶಕ್ತಿ ಮತ್ತು ತಾಲೂಕಾಡಳಿತದ ಅಧಿಕಾರಿಗಳ ಇಚ್ಛಾಶಕ್ತಿ ಕಾರಣ. ಪಿಕೆಪಿಎಸ್‌ಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ಸೂಕ್ತ ಕ್ರಮ ತೆಗೆದುಕೊಂಡಿರುವುದು ಕೂಡ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

    ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಅವರು, ಕೋವಿಡ್ ನಿಯಂತ್ರಣ ಹಾಗೂ ಬಿಇಒ ಮೋಹನ ದಂಡಿನ ಶೈಕ್ಷಣಿಕ ಚಟುವಟಿಕೆ ಕಾರ್ಯ ಪ್ರಾರಂಭಿಸುವ ಕುರಿತು ಕೈಗೊಂಡ ಕ್ರಮಗಳ ಮಾಹಿತಿ ನೀಡಿದರು. ಮುಜರಾಯಿ ಇಲಾಖೆಯಿಂದ ಆರ್ಚಕರಿಗೆ ದಿನಸಿ ಕಿಟ್ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಆಹಾರ ಸಾಮಗ್ರಿ ಹಂಚಿಕೆ ಮಾಡಲಾಯಿತು.

    ಮುಖಂಡರಾದ ಪರಗೌಡ ಪಾಟೀಲ, ಸುಭಾಸ ನಾಯಿಕ, ಶಿವನಗೌಡ ಪಾಟೀಲ, ಸಂಜು ಬಸ್ತವಾಡೆ, ರಾಜು ಮುನ್ನೋಳಿ, ಅಧಿಕಾರಿಗಳಾದ ಬಿ.ಕೆ. ಲಾಳಿ, ಉದಯ ಕುಡಚಿ, ಎಂ.ಎಂ. ನರಸಣ್ಣವರ, ಎಂ.ಎಸ್. ಪಟಗುಂದಿ, ಮಂಜುನಾಥ ಪರಸಣ್ಣವರ, ರಮೇಶ ಛಾಯಾಗೋಳ, ಉಮೇಶ ಸಿದ್ನಾಳ ಇತರರಿದ್ದರು. ಶ್ರೀಶೈಲ ಹಿರೇಮಠ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts