More

    ಶೈಕ್ಷಣಿಕ ಗುಣಮಟ್ಟಕ್ಕಾಗಿ ಪುನಶ್ಚೇತನ ತರಬೇತಿ ಅತ್ಯವಶ್ಯ – ಪ್ರೊ. ಎಚ್. ಚನ್ನಪ್ಪ ಪಲ್ಲಾಗಟ್ಟಿ

    ದಾವಣಗೆರೆ: ವಿದ್ಯಾರ್ಥಿಗಳಿಗೆ ವಿಶೇಷ ಮತ್ತು ವಿನೂತನ ಶಿಕ್ಷಣ ನೀಡುವುದಾದರೆ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ಅಗತ್ಯವಿದೆ. ಇದರೊಂದಿಗೆ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಪ್ರೊ. ಎಚ್. ಚನ್ನಪ್ಪ ಪಲ್ಲಾಗಟ್ಟೆ ಹೇಳಿದರು.
    ಭಾರತ ಸೇವಾದಳ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸೇವಾದಳ ತರಬೇತಿ ಪಡೆದ ಶಿಕ್ಷಕರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬ ಶಿಕ್ಷಕರು ಭಾರತ ಸೇವಾದಳದ ಉದ್ದೇಶಗಳನ್ನು ತಿಳಿದುಕೊಂಡು ಅದರ ವಾರ್ಷಿಕ ಕೈಪಿಡಿಯಂತೆ ಮಹಾತ್ಮ ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮದ ತಳಹದಿಯ ಮೇಲೆ ಮಕ್ಕಳಿಗೆ ಅಗತ್ಯ ಶಿಕ್ಷಣ ನೀಡಬೇಕೆಂದು ಹೇಳಿದರು.
    ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಮಂಜುಳಾ ಮಾತನಾಡಿ ಪ್ರತಿಯೊಂದು ಶಾಲೆಗಳಲ್ಲೂ ಸೇವಾದಳ ಘಟಕವನ್ನು ಆರಂಭಿಸಬೇಕು. ಈ ಮೂಲಕ ಮಕ್ಕಳಲ್ಲಿ ಶಿಸ್ತು ಮೂಡಿಸಬೇಕೆಂದು ತಿಳಿಸಿದರು.
    ಭಾರತ ಸೇವಾದಳದ ಪದಾಧಿಕಾರಿ ದಿ. ಮುನಿಸ್ವಾಮಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ , ನಿಟುವಳ್ಳಿ ಪ್ರೌಢಶಾಲೆಯ ಸೇವಾದಳ ವಿದ್ಯಾರ್ಥಿನಿಯೊಬ್ಬರಿಗೆ ಆರ್ಥಿಕ ಸಹಾಯಧನ ನೀಡಲಾಯಿತು.
    ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ಹುಸೇನ್ ಪೀರ್, ಸೇವಾದಳ ತಾಲೂಕು ಸಮಿತಿ ಉಪಾಧ್ಯಕ್ಷ ಕೆ. ಆರ್. ಸಿದ್ದೇಶಪ್ಪ, ತಾಲೂಕು ಸೇವಾದಳ ಕೋಶ್ಯಾಧ್ಯಕ್ಷ ಎಸ್.ಎನ್. ರಮೇಶ್, ದೈಹಿಕ ಶಿಕ್ಷಣ ಸಂಘದ ಪದಾಧಿಕಾರಿಗಳಾದ ಗಣೇಶ್, ಶ್ರೀನಿವಾಸ್, ಸಂತೋಷ್, ಸತ್ಯನಾರಾಯಣ್ ಇದ್ದರು.
    ತಾಲೂಕು ಅಧ್ಯಕ್ಷರಾದ ಹಾಸಬಾವಿ ಕರಿಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವಲಯ ಸಂಘಟಕ ಎಂ.ಅಣ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಎ.ಆರ್. ಗೋಪಾಲಪ್ಪ ಸ್ವಾಗತಿಸಿದರು. ರಾಘವೇಂದ್ರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts