More

    ಶೇಂಗಾ ದಾಖಲೆಯ ಆವಕ!

    ಸವಣೂರ: ಪಟ್ಟಣದ ಎಪಿಎಂಸಿಯಲ್ಲಿ ಶೇಂಗಾ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, ಗುರುವಾರ ದಾಖಲೆಯ 20 ಸಾವಿರಕ್ಕೂ ಹೆಚ್ಚು ಚೀಲಗಳ ಆವಕವಾಯಿತು.

    ಈ ಮೊದಲು ಪ್ರತಿದಿನ 800ರಿಂದ 1000 ಚೀಲಗಳವರೆಗೆ ಶೇಂಗಾ ಆಗಮಿಸುತ್ತಿತ್ತು. ಎಪಿಎಂಸಿಯಲ್ಲಿ 60ಕ್ಕೂ ಹೆಚ್ಚು ಲೈಸನ್ಸ್ ಪಡೆದ ದಲ್ಲಾಳಿಗಳು ಕಾರ್ಯನಿರ್ವಹಿಸುತ್ತಿದ್ದು, ಚಿತ್ರದುರ್ಗ, ಚಳ್ಳಕೇರಿ, ಹಾವನೂರ, ಲಕ್ಷೆ್ಮೕಶ್ವರ, ಗದಗ, ರಾಣೆಬೆನ್ನೂರ, ಹರಿಹರ, ಕರ್ಜಗಿ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಆಗಮಿಸುತ್ತಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ.

    ಎಪಿಎಂಸಿಯಲ್ಲಿ ರೈತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ರಾಣೆಬೆನ್ನೂರ, ಹಾನಗಲ್ಲ, ಹಾವೇರಿ, ಶಿಗ್ಗಾಂವಿ ಸೇರಿದಂತೆ ವಿವಿಧ ತಾಲೂಕುಗಳ ರೈತರು ಶೇಂಗಾ ತರುತ್ತಿದ್ದಾರೆ. ಆನ್​ಲೈನ್ ಮೂಲಕ ಟೆಂಡರ್ ನಡೆಸಲಾಗುತ್ತಿದ್ದು, ಅ. 27ರಂದು ಕ್ವಿಂಟಾಲ್​ಗೆ 1,112ರಿಂದ 5,740 ರೂ., 28ರಂದು 1,819ರಿಂದ 5,432 ರೂ. ದರಕ್ಕೆ ಶೇಂಗಾ ಮಾರಾಟವಾಗಿದೆ. 29ರಂದು ಸವಣೂರ ಎಪಿಎಂಸಿ ಇತರೆ ಎಪಿಎಂಸಿಗಳಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ದಾಖಲೆ ಮಾಡಿದೆ.

    ಸದ್ಯ ಹುಬ್ಬಳ್ಳಿ ಎಪಿಎಂಸಿಯಲ್ಲಿ ಶೇಂಗಾಕ್ಕೆ ಉತ್ತಮ ದರ ಸಿಗುತ್ತದೆ. ಆದರೆ, ಇಲ್ಲಿಂದ ಸಾಗಣೆ ವೆಚ್ಚ ರೈತರಿಗೆ ಹೊರೆಯಾಗುತ್ತದೆ. ಆದ್ದರಿಂದ ಸಮೀಪದ ತಾಲೂಕಿನ ರೈತರು ಸವಣೂರ ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ತರುತ್ತಿದ್ದಾರೆ.

    ರೈತರು ಶೇಂಗಾ ಫಸಲನ್ನು ಇನ್ನಷ್ಟು ಸ್ವಚ್ಛಗೊಳಿಸಿ ಮಾರುಕಟ್ಟೆಗೆ ತಂದಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಖರೀದಿಸಲು ಪೂರಕವಾಗುತ್ತದೆ ಎಂದು ಖರೀದಿದಾರ ಪ್ರವೀಣ ಚರಂತಿಮಠ ತಿಳಿಸಿದ್ದಾರೆ.

    ಗುರುವಾರದ ಮಾರುಕಟ್ಟೆ ದರ

    ಸವಣೂರ 1400- 5630 ರೂ.

    ಲಕ್ಷೆ್ಮೕಶ್ವರ 2086- 5439 ರೂ.

    ಹುಬ್ಬಳ್ಳಿ 2000- 5669 ರೂ.

    ಉತ್ತಮ ಮಾರುಕಟ್ಟೆ ವ್ಯವಸ್ಥೆ ಹಾಗೂ ರೈತರಿಗೆ ಅನುಕೂಲಕರ ಸೌಲಭ್ಯಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಸವಣೂರ ಎಪಿಎಂಸಿಗೆ ವಿವಿಧ ಜಿಲ್ಲೆಗಳಿಂದ ಖರೀದಿದಾರರು ಹಾಗೂ ಮಾರಾಟಗಾರರು ಆಗಮಿಸುತ್ತಿದ್ದಾರೆ. ಗುರುವಾರ ದಾಖಲೆಯ ಶೇಂಗಾ ಆವಕವಾಗಿದೆ. ಮುಂದಿನ ದಿನಗಳಲ್ಲಿ ಶೇಂಗಾ ಮಾರಾಟಕ್ಕೆ ಸವಣೂರ ಎಪಿಎಂಸಿ ಹೆಸರುವಾಸಿಯಾಗಲಿದೆ.
    | ಸಂಗಪ್ಪ ಯರೇಶಿಮಿ, ಎಪಿಎಂಸಿ ದಲ್ಲಾಳಿ


    ರೈತರು, ಖರೀದಿದಾರರು ಹಾಗೂ ದಲ್ಲಾಳಿಗಳಿಗೆ ಅವಶ್ಯ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಸವಣೂರಿನಲ್ಲಿ ಉತ್ತಮ ಬೆಲೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಶೇಂಗಾ ಆವಕವಾಗಿದೆ. ಮುಂದಿನ ದಿನಮಾನದಲ್ಲಿ ಇನ್ನೂ ಹೆಚ್ಚಿನ ಶೇಂಗಾ ಆವಕವಾಗುವ ನಿರೀಕ್ಷೆ ಹೊಂದಲಾಗಿದೆ.
    | ವಿರೇಂದ್ರಗೌಡ ಪಾಟೀಲ, ಸವಣೂರ ಎಪಿಎಂಸಿ ಕಾರ್ಯದರ್ಶಿ

    ಎಪಿಎಂಸಿ ದಲ್ಲಾಳಿಗಳು ರೈತರಿಂದ ಪಡೆಯುವ ಶೇ. 2 ಕಮಿಷನ್ ನಿಲ್ಲಿಸಿದಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ.
    | ಪಾಂಡವಪ್ಪ ತಿಪ್ಪಕ್ಕನವರ, ಎಪಿಎಂಸಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts