More

    ಶೇಂಗಾಕ್ಕೂ ಕಂಟಕನಾದ ಮಳೆರಾಯ

    ಹುಬ್ಬಳ್ಳಿ: ಮುಂಗಾರಿನ ಪ್ರಮುಖ ಆಹಾರ ಬೆಳೆ ಹೆಸರು ಕಾಳು ಮಳೆಗೆ ಕೊಚ್ಚಿ ಹೋದ ಬೆನ್ನಲ್ಲೇ ಇದೀಗ ಶೇಂಗಾಕ್ಕೂ ವರುಣ ಕಂಟಕಪ್ರಾಯನಾಗಿ ಪರಿಣಮಿಸಿದ್ದಾನೆ.

    ಪ್ರತಿ ದಿನ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹೊಲದಲ್ಲಿ ಬೆಳೆದು ನಿಂತ ಶೇಂಗಾವನ್ನು ಒಕ್ಕಣೆ ಮಾಡಿ ಮನೆಗೆ ತರಲು ಸಾಧ್ಯವಾಗದೇ ರೈತರು ಪರದಾಡುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ ಎಂದು ಅಲವತ್ತುಕೊಳ್ಳುವಂತಾಗಿದೆ.

    ಎಣ್ಣೆಕಾಳುಗಳ ಪೈಕಿ ಶೇಂಗಾ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದೆ. ಪ್ರತಿ ವರ್ಷ ಜೂನ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಬಿತ್ತನೆಯಾಗುವ ಶೇಂಗಾ ಬೆಳೆ ಸೆಪ್ಟೆಂಬರ್​ನಲ್ಲಿ ಕೊಯ್ಲಿಗೆ ಬರುತ್ತದೆ. ಅದರಂತೆ ಈ ವರ್ಷ ಉತ್ತಮ ಮುಂಗಾರಿನ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ರೈತರು ಖುಷಿಯಿಂದ ಶೇಂಗಾ ಬೆಳೆ ಕೊಯ್ಲು ಮಾಡುವ ಹೊತ್ತಿಗೆ ಹಿಡಿದುಕೊಂಡಿರುವ ಮಳೆರಾಯ ನಿರಾಸೆ ಉಂಟು ಮಾಡುತ್ತಿದ್ದಾನೆ. ಕೆಲವೆಡೆ ಶೇಂಗಾ ಕಿತ್ತು ಹಾಕಿದ್ದರೆ, ಇನ್ನೂ ಕೆಲವೆಡೆ ಹೊಲದಲ್ಲೇ ಇದೆ. ಕಿತ್ತು ಹಾಕಿದ ಶೇಂಗಾ ಬಿಡಿಸಲು ಆಗುತ್ತಿಲ್ಲ. ಇನ್ನು ಹೊಲದಲ್ಲಿ ಇರುವ ಶೇಂಗಾ ಕೊಳೆಯುವ ಹಂತಕ್ಕೆ ಹೋಗುತ್ತಿದೆ.

    ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ, ಕೋಳಿವಾಡ ಭಾಗದಲ್ಲಿ ಮಳೆ ಹೆಚ್ಚಾಗಿ ಕಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲೂ ಎರಡ್ಮೂರು ದಿನಗಳಿಂದ ಮಳೆ ಸುರಿಯುತ್ತಲೇ ಇದ್ದು, ರೈತರಿಗೆ ಈ ವರ್ಷದ ಮುಂಗಾರು ಬೆಳೆಗಳು ಕೈಗೆ ಸಿಗದ ಸ್ಥಿತಿ ನಿರ್ವಣವಾಗುತ್ತಿದೆ.

    ಕಳೆದೆರಡು ವರ್ಷಗಳಿಂದ ಅತಿವೃಷ್ಟಿ ಬೆಂಬಿಡದೇ ಕಾಡುತ್ತಿದೆ. ರೈತ ಸಮೂಹ ಕಂಗೆಟ್ಟು ಹೋಗಿದ್ದು, ಪರಿಹಾರ ಕಾಣದಾಗಿದ್ದಾರೆ. ಬೆಳೆ ವಿಮೆ ಪರಿಹಾರವೂ ಸಿಗದೇ, ವಿಮೆ ಯಾಕಾದರೂ ಮಾಡಿಸಬೇಕು ಎಂದು ಹತಾಶೆಯಿಂದ ಪ್ರಶ್ನಿಸುತ್ತಿದ್ದಾರೆ.

    ಶೇಂಗಾ ಬಿತ್ತನೆ: ಧಾರವಾಡ ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಪ್ರಮಾಣ ಕೃಷಿ ಇಲಾಖೆಯ ಗುರಿಗಿಂತ ಕಡಿಮೆಯಾಗಿದೆ. ಈ ವರ್ಷದ ಮುಂಗಾರಿನಲ್ಲಿ 31,703 ಹೆಕ್ಟೇರ್​ನಲ್ಲಿ ಶೇಂಗಾ ಬಿತ್ತನೆ ಗುರಿ ಇತ್ತು. ಆದರೆ, ವಾಸ್ತವದಲ್ಲಿ 22,401 ಹೆಕ್ಟೇರ್ ಬಿತ್ತನೆಯಾಗಿದೆ. ಅತಿ ಹೆಚ್ಚು ಕುಂದಗೋಳ ತಾಲೂಕಿನಲ್ಲಿ ಬಿತ್ತನೆಯಾಗಿದೆ. ಇಲ್ಲಿ ಮಾತ್ರ ಗುರಿ ತಲುಪಿದ್ದು, 13,769 ಹೆಕ್ಟೇರ್ ಬಿತ್ತನೆಯಾಗಿದೆ.ಉಳಿದಂತೆ ಹುಬ್ಬಳ್ಳಿ ತಾಲೂಕಿನಲ್ಲಿ 6544 ಹೆಕ್ಟೇರ್ ಗುರಿ ಇದ್ದರೆ ಬರೀ 3776 ಹೆಕ್ಟೇರ್ ಬಿತ್ತನೆಯಾಗಿದೆ. ಇದೇ ರೀತಿ ಉಳಿದ ತಾಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಇದಕ್ಕೆ ಕಾರಣ, ಈ ವರ್ಷದ ಮುಂಗಾರು ಮಳೆ ಆರಂಭದಲ್ಲಿ ಉತ್ತಮವಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೆಸರು, ಸೋಯಾಬೀನ್ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ಹೆಸರುಕಾಳು ಈ ಬಾರಿ ಬಹುತೇಕ ಕೊಳೆತು ಹೋಗಿದೆ. ಹಾಗಾಗಿ ರೈತರು ಶೇಂಗಾ ಬೆಳೆ ಕೈ ಹಿಡಿಯುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅದು ಕೂಡ ಈಗ ಕೈ ಕೊಡುತ್ತಿದೆ.

    ನವಲಗುಂದದಲ್ಲೂ ಧಾರಾಕಾರ ಮಳೆ

    ನವಲಗುಂದ: ತಾಲೂಕಾದ್ಯಂತ ಶನಿವಾರ ಧಾರಾಕಾರವಾಗಿ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜತೆಗೆ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಜನರಲ್ಲಿ ಆತಂಕ ಮೂಡಿದೆ. ತಾಲೂಕಿನ ಶಲವಡಿ, ಮೊರಬ, ಅಳಗವಾಡಿ, ತಿರ್ಲಾಪೂರ ಹಾಗೂ ಅಣ್ಣಿಗೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿದೆ. ಇದರಿಂದ ಗೋವಿನಜೋಳ, ಹತ್ತಿ, ಉಳ್ಳಾಗಡ್ಡಿ, ಶೇಂಗಾ, ಮೆಣಸಿನಕಾಯಿ, ಮತ್ತಿತರ ಬೆಳೆಗಳು ಕಂದು ಹಾಗೂ ಹಳದಿ ವರ್ಣಕ್ಕೆ ತಿರುಗಿ ಕುಂದುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಮಣ್ಣಿನ ಮನೆಗಳು ಸೋರತೊಡಗಿವೆ. ತಾಲೂಕಿನಲ್ಲಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ತಹಸೀಲ್ದಾರ್ ನವೀನ ಹುಲ್ಲೂರ ಸೂಚಿಸಿದ್ದಾರೆ. ನಿರಂತರ ಮಳೆಯಿಂದಾಗಿ ಬೆಣ್ಣಿ ಹಾಗೂ ತುಪ್ಪರಿಹಳ್ಳ ಅಕ್ಕಪಕ್ಕದಲ್ಲಿರುವ ಹೊಲಗಳಿಗೆ ನೆರೆಹಾವಳಿ ಸೃಷ್ಟಿಯಾಗಬಹುದಾದ ಸಾಧ್ಯತೆಗಳಿದ್ದು, ಗ್ರಾಮಸ್ಥರು ಮತ್ತು ರೈತರು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts