More

    ಶುಶ್ರೂಷಕರ ಸೇವೆ ಕಾಯಂಗೊಳಿಸಲು ಧ್ವನಿ ಎತ್ತಿ

    ಬೈಲಹೊಂಗಲ: ರಾಜ್ಯಾದ್ಯಂತ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 9000 ಶುಶ್ರೂಷಕ ಹಾಗೂ ಶುಶ್ರೂಷಕಿಯರ ಸೇವೆಯನ್ನು ಕಾಯಂಗೊಳಿಸಲು ಬೆಳಗಾವಿಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಶುಶ್ರೂಷಕ ಹಾಗೂ ಶುಶ್ರೂಷಕಿಯರ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.

    ಹಲವು ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ 13,000 ರೂ. ವೇತನವಿದ್ದು, ಕೈಗೆ ಕೇವಲ ರೂ. 11,000 ರೂ. ಸಿಗುತ್ತಿದೆ. ಇಷ್ಟು ಕಡಿಮೆ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟದಾಯಕವಾಗಿದೆ. ಕೋವಿಡ್-19 ಸಂದರ್ಭದಲ್ಲಿ ಸರ್ಕಾರ ನೀಡಿರುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದೇವೆ. ಆದರೂ ಸರ್ಕಾರ ನಮ್ಮ ಸೇವೆಯನ್ನು ಕಾಯಂ ಮಾಡುತ್ತಿಲ್ಲ. ಸಮಾನ ವೇತನವನ್ನೂ ನೀಡುತ್ತಿಲ್ಲ. ಅಲ್ಲದೆ ಗುತ್ತಿಗೆ ಸಿಬ್ಬಂದಿ ಎಂದು ಕೀಳಾಗಿ ನೋಡಲಾಗುತ್ತಿದೆ. ತಿಂಗಳಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ, ಬರುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಪರ ಧ್ವನಿ ಎತ್ತಿ ನಮ್ಮ ಸೇವೆಯನ್ನು ಕಾಯಂ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು. ಪೌರ ಕಾರ್ಮಿಕರು ಮತ್ತು 108 ಸಿಬ್ಬಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿದಂತೆ ನಮಗೂ ನೀಡಬೇಕು ಎಂದು ಆಗ್ರಹಿಸಬೇಕು ಎಂದು ಶಾಸಕರನ್ನು ಶುಶ್ರೂಷಕ ಅಧಿಕಾರಿಗಳು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಶಾಸಕ ಮಹಾಂತೇಶ ಕೌಜಲಗಿ ಅವರು ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.

    ಶುಶ್ರೂಷಕ ಅಧಿಕಾರಿಗಳಾದ ಕಲ್ಲಪ್ಪ ಕಡಕೋಳ, ಈರಮ್ಮ ಕಬ್ಬುರ, ಮಹಾದೇವಿ ಸುಳ್ಳನ್ನವರ, ಜ್ಯೋತಿ ಚರಂತಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts