More

    ಶೀಘ್ರದಲ್ಲೇ ಧೂಳುಮುಕ್ತ ದಾವಣಗೆರೆ  -ಸಚಿವ ಮಲ್ಲಿಕಾರ್ಜುನ್ ಭರವಸೆ -ನಗರಪಾಲಿಕೆ ಕನ್ನಡ ರಾಜ್ಯೋತ್ಸವ

    ದಾವಣಗೆರೆ: ದಾವಣಗೆರೆಯಲ್ಲಿ ಮುಖ್ಯ ರಸ್ತೆಗಳು ನಿರ್ಮಾಣವಾಗಿದ್ದು ನಗರಪಾಲಿಕೆಗೆ ಹೆಚ್ಚಿನ ಹೊರೆ ತಪ್ಪಿದೆ. ಒಳಚರಂಡಿ ವ್ಯವಸ್ಥೆ ಉತ್ತಮಪಡಿಸಿ ನಗರವನ್ನು ಸ್ವಚ್ಛವಾಗಿರಿಸಬೇಕಿದೆ. ಬರುವ ದಿನಗಳಲ್ಲಿ ಧೂಳುಮುಕ್ತ ನಗರವಾಗಿಸುವ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭರವಸೆ ನೀಡಿದರು.
    ನಗರಪಾಲಿಕೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ನಗರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರುತ್ತಿದೆ. ಸಮರ್ಪಕ ಯುಜಿಡಿ ವ್ಯವಸ್ಥೆಗಾಗಿ 1 ಸಾವಿರ ಕೋಟಿ ರೂ. ನೆರವು ಕೇಳಲಾಗಿದೆ. ಅದು ದೊರೆತಲ್ಲಿ ದಾವಣಗೆರೆ ಸ್ವಚ್ಛ ನಗರವಾಗಿಸಬಹುದು. ಮುಖ್ಯ ರಸ್ತೆಗಳನ್ನು ನೋಡಲು ದಾವಣಗೆರೆಗೆ ಬರುತ್ತಿರುವ ಜನರು ಮುಂದಿನ ದಿನದಲ್ಲಿ ಇಡೀ ನಗರವನ್ನೇ ವೀಕ್ಷಿಸುವಂತೆ ಆಗಬೇಕಿದೆ ಎಂದು ಹೇಳಿದರು.
    ನಗರದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡುವ ಪ್ರವೃತ್ತಿ ಬೇಡ. ಅವರ ಜೀವನ ನಿರ್ವಹಣೆಗೆ ಫುಡ್‌ಕೋರ್ಟ್ ಅಥವಾ ಪ್ರತ್ಯೇಕ ಅಂಗಡಿಗಳ ನಿರ್ಮಿಸಿಕೊಡಲು ಅಧಿಕಾರಿಗಳು ಕ್ರಮ ವಹಿಸಬೇಕು. ಹೊರವಲಯದ ಬಡಾವಣೆಗಳ ನಿವಾಸಿಗಳಿಗೂ ಮೂಲ ಸೌಕರ್ಯ ಒದಗಿಸಲು ಪಾಲಿಕೆ ಮುಂದಾಗಬೇಕು. ನಗರದ ಅಭಿವೃದ್ಧಿಗೆ ಒಂದು ಪುಟ್ಟಿ ಮಣ್ಣು ಹೊತ್ತಿದ್ದರೆ ಅಂಥವರ ಹೆಸರನ್ನು ಯೋಜನೆಗಳಿಗೆ ಇರಿಸಲು ಅಭ್ಯಂತರವಿಲ್ಲ ಎಂದರು.
    ಪಾಲಿಕೆಯ 135 ಪೌರಕಾರ್ಮಿಕರನ್ನೂ ಕಾಯಂಗೊಳಿಸಬೇಕು. ಅವರಿಗೆ ದೊಡ್ಡಬೂದಿಹಾಳ್‌ನಲ್ಲಿ ನಿರ್ಮಿಸಿದ ವಸತಿ ಸಮುಚ್ಛಯಕ್ಕೆ ತಲುಪಲು ಬಸ್ ಸೌಕರ್ಯ ಕಲ್ಪಿಸುವ ಅಗತ್ಯವಿದೆ. ಕವಿ ಮಹಲಿಂಗರಂಗರ ಹೆಸರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿನ ಕನ್ನಡ ಭವನದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು. ದೃಶ್ಯಕಲಾ ಕಾಲೇಜು ಬಳಿ ಬಯಲು ರಂಗಮಂದಿರ ಹಾಗೂ ಥೀಮ್ ಪಾರ್ಕ್ ನಿರ್ಮಾಣವಾಗಿದೆ ಎಂದು ತಿಳಿಸಿದರು.
    ರಾಜ್ಯದಲ್ಲೇ ಅತಿ ದೊಡ್ಡದಾದ, ನಗರದ ಸರ್ಕಾರಿ ಹೈಸ್ಕೂಲ್ ಮೈದಾನ ಹಾಳು ಮಾಡಲಾಗಿದೆ. ಕೂಡಲೆ ಇಲ್ಲಿನ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಬೇಕಿದೆ. ಎಪಿಎಂಸಿ ಸಚಿವನಾಗಿದ್ದಾಗ 30 ಕೋಟಿ ರೂ. ಅನುದಾನವನ್ನು ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆ ನವೀಕರಣಕ್ಕೆ ಕ್ರಮವಹಿಸಲಾಗಿತ್ತು. ಮಳಿಗೆಗಳ ಹಂಚಿಕೆಯೇ ನಡೆಯದೇ ಬಿಜೆಪಿ ಅವಧಿಯಲ್ಲಿ ತರಾತುರಿಯಲ್ಲಿ ಮಾರುಕಟ್ಟೆ ಉದ್ಘಾಟನೆಯಾಗಿದೆ. ಅಲ್ಲಿಯೂ ವ್ಯವಸ್ಥೆ ಸರಿಪಡಿಸಬೇಕಿದೆ ಎಂದು ಹೇಳಿದರು.
    1992ರಲ್ಲಿ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆ ಆಗಿತ್ತು. ಬರಗಾಲದಿಂದಾಗಿ ಮುಂದೂಡಿಕೆಯಾಗಿದೆ. ಇದು ನಡೆದಲ್ಲಿ ಕನ್ನಡದ ಅಭಿವೃದ್ಧಿಗೆ ಅನುಕೂಲತೆ ಹೆಚ್ಚಲಿವೆ ಎಂದು ತಿಳಿಸಿದರು.
    ವಿವಿಧ ಕ್ಷೇತ್ರಗಳ 45 ಸಾಧಕರನ್ನು ಸನ್ಮಾನಿಸಲಾಯಿತು. ಮೇಯರ್ ಬಿ.ಎಚ್. ವಿನಾಯಕ, ಉಪಮೇಯರ್ ಯಶೋದಾ ಯಗ್ಗಪ್ಪ, ಆಯುಕ್ತೆ ಎನ್. ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಎಚ್.ಉದಯಕುಮಾರ್, ಮೀನಾಕ್ಷಿ ಜಗದೀಶ್, ಶಾಯಿರಿ ಕವಿ ಅಸಾದುಲ್ಲಾ ಬೇಗ್, ಅಧ್ಯಾಪಕ ವಿಜಯ ಸೊಲ್ಲಾಪುರ, ದಾಕ್ಷಾಯಣಮ್ಮ ಮಲ್ಲಿಕಾರ್ಜುನಯ್ಯ, ಕೆ.ಜಿ.ಯಲ್ಲಪ್ಪ, ವಿ. ಅವಿನಾಶ್, ಎಸ್.ಜಿ.ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts