More

    ಶೀಘ್ರದಲ್ಲಿ ಮೇಯರ್-ಉಪಮೇಯರ್ ಚುನಾವಣೆ

    ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ನಡೆದು ಅನೇಕ ತಿಂಗಳು ಗತಿಸಿದರೂ ಮೇಯರ್-ಉಪಮೇಯರ್ ಹುದ್ದೆಗಳ ಮೀಸಲಾತಿ ಪ್ರಕಟಗೊಳ್ಳದ ಕಾರಣ ಹೆಸರಿಗಷ್ಟೇ ನಗರ ಸೇವಕರು ಎಂಬಂತಾಗಿತ್ತು. ಆದರೆ, ಸರ್ಕಾರ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳೆಗೆ, ಉಪಮೇಯರ್ ಹುದ್ದೆಯನ್ನು ಹಿಂದುಳಿದ ‘ಬ’ ವರ್ಗದ ಮಹಿಳೆಗೆ ಎಂದು ಮೀಸಲಾತಿ ಪ್ರಕಟಿಸಿದ್ದು, ಶೀಘ್ರದಲ್ಲಿಯೇ ಮೇಯರ್-ಉಪಮೇಯರ್ ಚುನಾವಣೆ ನಡೆಯಲಿದೆ.

    ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಸದ್ಯದ ಮೂಲಗಳ ಪ್ರಕಾರ ಮೇಯರ್ ಹುದ್ದೆಯನ್ನು ದಕ್ಷಿಣ ವಿಧಾನಸಭಾ ವ್ಯಾಪ್ತಿಗೆ, ಉಪಮೇಯರ್ ಹುದ್ದೆಯನ್ನು ಉತ್ತರ ವಿಧಾನಸಭೆ ಕ್ಷೇತ್ರದಲ್ಲಿರುವ ನಗರ ಸೇವಕರಿಗೆ ನೀಡುವ ಸಾಧ್ಯತೆ ದಟ್ಟವಾಗಿವೆ. ಮೇಯರ್-ಉಪಮೇಯರ್ ಹುದ್ದೆಯನ್ನೇರಲು ತೆರೆಮರೆಯಲ್ಲಿ ಬಿರುಸಿನ ಕಸರತ್ತುಗಳೂ ನಡೆಯುತ್ತಿವೆ.

    ಸಾರಿಕಾ-ವಾಣಿ ನಡುವೆ ಪೈಪೋಟಿ?: ವಾರ್ಡ್ ನಂಬರ್- 43ರ ಚಿದಂಬರ ನಗರದಿಂದ ಆಯ್ಕೆಯಾದ ನಗರ ಸೇವಕಿ ವಾಣಿ ವಿಲಾಸ ಜೋಶಿ ಹಾಗೂ ವಾರ್ಡ್ ನಂಬರ್-50ರ ಸಾರಿಕಾ ಪಾಟೀಲ ನಡುವೆ ಮೇಯರ್ ಹುದ್ದೆಗೆ ಪೈಪೋಟಿ ನಡೆಯುತ್ತಿದೆ. ಇನ್ನೂ 7-8 ಮಹಿಳಾ ನಗರ ಸೇವಕಿಯರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

    ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ವಾಣಿ ಜೋಶಿ, ನಾನೂ ಮೇಯರ್ ಆಕಾಂಕ್ಷಿ ನಿಜ. ಆದರೆ, ಬಿಜೆಪಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಪಕ್ಷವೂ ಆಯ್ಕೆ ಮಾಡುವ ಅಭ್ಯರ್ಥಿಗೆ ನಾವು ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

    ಸಾರಿಕಾ ಪಾಟೀಲ ಅವರು ಕೂಡ ತಮ್ಮದೇ ಆದ ನಾಯಕರ ಮುಖಾಂತರ ಮೇಯರ್ ಹುದ್ದೆ ಅಲಂಕರಿಸುವುದಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಉಪಮೇಯರ್ ಹುದ್ದೆಯು ಹಿಂದುಳಿದ ‘ಬ’ ವರ್ಗಕ್ಕೆ ಮೀಸಲಿರುವುದರಿಂದ ವಾರ್ಡ್ ನಂ-31ರ ನಗರ ಸೇವಕಿಯಾಗಿರುವ ವೀಣಾ ವಿಜಾಪುರೆ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

    ಶೀಘ್ರದಲ್ಲಿಯೇ ಮೇಯರ್-ಉಪಮೇಯರ್ ಚುನಾವಣೆ ನಡೆಯಲಿರುವುದಿಂದ ಅನೇಕ ತಿಂಗಳುಗಳಿಂದ ಖಾಲಿಯಿರುವ ನಗರ ಸೇವಕರಿಗೂ ತಮ್ಮನ್ನು ಆರಿಸಿ ಕಳುಹಿಸಿರುವ ಜನತೆಯ ಸೇವೆ ಮಾಡುವ ಸೌಭಾಗ್ಯ ದೊರೆಯಲಿದೆ. ಮುಂಬರುವ ಮೇಯರ್-ಉಪಮೇಯರ್ ಬೆಳಗಾವಿ ಅಭಿವೃದ್ಧಿಗೆ ಶ್ರಮಿಸಲಿ ಎಂಬದಷ್ಟೇ ನಮ್ಮ ಹಾರೈಕೆ.
    | ಮಂಗಲ ಅಂಗಡಿ ಸಂಸದೆ, ಬೆಳಗಾವಿ ಲೋಕಸಭಾ ಕ್ಷೇತ್ರ

    ಸರ್ಕಾರ ಈಗಾಗಲೇ ಮೇಯರ್-ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದೆ. ಯಾರೇ ಮೇಯರ್-ಉಪಮೇಯರ್ ಆಗಿ ಆಧಿಕಾರ ವಹಿಸಿಕೊಂಡರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವೂ ಕೆಲಸ ಮಾಡಲಿದೆ.
    | ಅಭಯ ಪಾಟೀಲ ಶಾಸಕರು, ದಕ್ಷಿಣ ವಿಧಾನಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts