More

    ಶಿಳ್ಳೇಕ್ಯಾತ ಕುಟುಂಬಗಳ ಬಣ್ಣದ ಬದುಕು ಕಸಿದ ಕರೊನಾ

    ತುಮಕೂರು: ಹಳ್ಳಹಳ್ಳಿಗೆ ತೆರಳಿ ನಾಟಕವಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಶಿಳ್ಳೇಕ್ಯಾತ ಕುಟುಂಬಗಳ ಬಣ್ಣದ ಬದುಕನ್ನೇ ಕರೊನಾ ಕಸಿದುಕೊಂಡಿದೆ. ಸಂಕಷ್ಟದ ಸುಳಿಯಲ್ಲಿ ಸಿಲುಕಿ ಜೀವನ ನಡೆಸುವುದೇ ದುಸ್ತರ ಎನಿಸಿದ್ದ ಕಲಾವಿದರನ್ನು ಸಂಸ್ಕಾರ ಭಾರತಿ ಕೈಹಿಡಿದು ಮತ್ತೆ ಬಣ್ಣ ಹಚ್ಚಿ ನಾಟಕ ಪ್ರದರ್ಶನಗಳಿಗೆ ಸಜ್ಜಾಗಿಸಿದೆ.

    ಒಂದು ಕಡೆ ನೆಲೆ ನಿಲ್ಲದೆ ಬದುಕಿಗಾಗಿ ಊರೂರು ಅಲೆಯುವ ಅಲೆಮಾರಿಗಳೆನಿಸಿರುವ ಶಿಳ್ಳೇಕ್ಯಾತರು 4 ತಲೆಮಾರುಗಳಿಂದ ಹಳ್ಳಿಗಳಲ್ಲಿ ಬಣ್ಣಹಚ್ಚಿಕೊಂಡು ಜನರಿಗೆ ಮನರಂಜನೆ ನೀಡಿ ಬದುಕು ಕಂಡುಕೊಂಡಿದ್ದಾರೆ. ಇಂತಹ 14ಕ್ಕೂ ಹೆಚ್ಚು ಕುಟುಂಬ ವೃತ್ತಿ ರಂಗತಂಡಗಳು ಕರೊನಾ ಹೊಡೆತಕ್ಕೆ ಸಿಲುಕಿ ನಲುಗಿಹೋಗಿ ಬಹುತೇಕ ಕಣ್ಮರೆಯಾಗಿವೆ. ರಾಜ್ಯದಲ್ಲಿ ಈಗ ಒಂದೆರಡು ಶಿಳ್ಳೇಕ್ಯಾತ ಕುಟುಂಬ ರೆಪರ್ಟರಿ ರಂಗ ತಂಡ ಉಳಿದಿದ್ದು, ಬೇರೆ ವೃತ್ತಿ ಗೊತ್ತಿಲ್ಲದೇ ಇರುವುದರಿಂದ ಮತ್ತೆ ಬಣ್ಣ ಹಚ್ಚಿ ಬದುಕು ರೂಪಿಸಿಕೊಳ್ಳುವುದರ ಜತೆಗೆ ಒಪ್ಪೊತ್ತಿನ ಊಟಕ್ಕೂ ಹೆಣಗಾಡುತ್ತಿವೆ.

    ತೊಗಲು ಗೊಂಬೆಯಾಟ, ಬಯಲಾಟ, ಪೌರಾಣಿಕ ನಾಟಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕ ಪ್ರದರ್ಶನ ನೀಡುವ ಶಿಳ್ಳೇಕ್ಯಾತರು ಒಂದೆಡೆ ಕ್ಯಾಂಪ್ ಹಾಕಿ ನೆಲೆ ನಿಲ್ಲುವುದಿಲ್ಲ. ಹಳ್ಳಿ, ಹಳ್ಳಿಗಳಲ್ಲಿ ರಂಗತಂಡಗಳು ಅಂದಂದಿನ ಊಟಕ್ಕೆ, ಜೀವನೋಪಾಯಕ್ಕೆ ನಾಟಕ ಪ್ರದರ್ಶನ ಮಾಡುತ್ತಾ ಬಂದಿವೆ. ಮಾರ್ಚ್‌ನಿಂದ ಅರೆಕಾಸಿನ ದುಡಿಮೆ ಇಲ್ಲದೆ ಅವರಿವರು ಕೊಟ್ಟ ಅಕ್ಕಿ, ಪಡಿತರ ಕಿಟ್‌ಗಾಗಿ ಕೈಚಾಚಿ ಬದುಕು ಸಾಗಿಸಿರುವ ಈ ಕಲಾವಿದರ ಮಾಸಿದ ಬಣ್ಣದ ಬದುಕಿಗೆ ಆಶ್ರಯವಾಗಿ ಸದ್ಯಕ್ಕೆ ಸಂಸ್ಕಾರ ಭಾರತಿ ನಿಂತಿದೆ.

    ಕಲೆ ಬಿಟ್ಟರೆ ಬೇರೆ ಗೊತ್ತಿಲ್ಲ: ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ಬೀಡುಬಿಟ್ಟು ಆಯಾ ಜಿಲ್ಲೆಗಳ ಹಳ್ಳಿಗಳಲ್ಲಿ ಸಂಚಾರ ಮಾಡುತ್ತಾ ನಾಟಕ ಪ್ರದರ್ಶಿಸುವ ಕುಟುಂಬಗಳಿಗೆ ಕಲೆಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲ. ಕರೊನಾ ಕಾರಣಕ್ಕೆ ಕಲಾವಿದರು ಬಣ್ಣ ಅಳಿಸಿ ಹಳ್ಳಿಗಳಿಗೆ ತೆರಳಿ ಫಿನಾಯಿಲ್ ಮಾರಾಟ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಕರೊನಾ ಹಿನ್ನೆಲೆಯಲ್ಲಿ 5-6 ತಿಂಗಳು ಹಳ್ಳಿಗಳಿಗೂ ಅಲೆಮಾರಿ ಕುಟುಂಬಗಳನ್ನು ಬಿಟ್ಟುಕೊಳ್ಳುತ್ತಿರಲಿಲ್ಲ. ಹೀಗಾಗಿ ಶಿಳ್ಳೇಕ್ಯಾತರಿಗೆ ಸಂಸ್ಕಾರಭಾರತಿ ಆಶ್ರಯ ಕಲ್ಪಿಸಿದೆ. ರಾಜ್ಯ ನಾಟಕ ಅಕಾಡೆಮಿ ಸದಸ್ಯೆ ರಾಧಾ ಸಹ ಶಿಳ್ಳೇಕ್ಯಾತರಿಗೆ ಅಕಾಡೆಮಿಯಿಂದ ಆರ್ಥಿಕ ನೆರವು ದೊರಕಿಸಿಕೊಡುವ ಜತೆಗೆ ಕತ್ತಲೆಯಲ್ಲಿದ್ದ ಕಲಾವಿದರ ಭವಿಷ್ಯಕ್ಕೆ ಬೆಳಕು ತೋರಿದ್ದಾರೆ.

    ಶಿರಾ ತಾಲೂಕಿನ ಉದ್ದರಾಮನಹಳ್ಳಿ ಶಿಳ್ಳೇಕ್ಯಾತ ಕುಟುಂಬಗಳ ಶ್ರೀ ಸಂಗಮೇಶ್ವರ ನಾಟ್ಯ ಸಂಘದ ರೆಪರ್ಟರಿ ವೃತ್ತ ರಂಗತಂಡದ ಕೈಹಿಡಿದ ಸಂಸ್ಕಾರ ಭಾರತಿ, ಕರೊನಾ ಜಾಗೃತಿ ಮೂಡಿಸುವ ತರಬೇತಿ ನೀಡುವ ಜತೆಗೆ 40 ನಿಮಿಷ ಕೆಳದಿಚೆನ್ನಮ್ಮ ಐತಿಹಾಸಿಕ ನಾಟಕ ಪ್ರದರ್ಶನಕ್ಕೆ ಕಲಾವಿದರನ್ನು ಅಣಿಗೊಳಿಸಿತು. ಮೈಸೂರಿನ ರಂಗನಿರ್ದೇಶಕ ಪಾಪು ಶ್ರೀನಿವಾಸ್ ಕಲಾವಿದರಿಗೆ ನಾಟಕ ಕಲಿಸಿದ್ದಾರೆ. ಶ್ರೀ ಸಂಗಮೇಶ್ವರ ನಾಟ್ಯ ಸಂಘದಿಂದ ಪಾವಗಡ ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಕರೊನಾ ಜಾಗೃತಿ ಮೂಡಿಸುವ ಜತೆಗೆ ಮನರಂಜನೆಗಾಗಿ ಕೆಳದಿ ಚೆನ್ನಮ್ಮ ಐತಿಹಾಸಿಕ ನಾಟಕ ಪ್ರದರ್ಶನ ಆರಂಭಿಸಲಾಗಿದೆ.

    ಕರೊನಾದಿಂದ ಕಲಾವಿದರು ಜೀವನೋಪಾಯಕ್ಕೆ ಬೇರೆ, ಬೇರೆ ದಾರಿ ತುಳಿದಿದ್ದಾರೆ. ಉಳಿದಿರುವ ಕಲಾವಿದರನ್ನೇ ಕಟ್ಟಿಕೊಂಡು ಮತ್ತೆ ಕರೊನಾ ಜಾಗೃತಿ ಮೂಡಿಸುವುದರ ಜತೆಗೆ ನಾಟಕ ಪ್ರದರ್ಶನಕ್ಕೆ ಮತ್ತೆ ತಯಾರಾಗಿದ್ದೇವೆ. ಸಂಸ್ಕಾರ ಭಾರತಿ ನೆರವು ಮರೆಯಲಾರೆವು.
    ಗಣೇಶ್ ಶ್ರೀ ಸಂಗಮೇಶ್ವರ ನಾಟ್ಯ ಸಂಘ, ಶಿಳ್ಳೇಕ್ಯಾತ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts