More

    ಶಿರಹಟ್ಟಿ ತಾಲೂಕಿನಲ್ಲಿ 18,500 ಹೆಕ್ಟೇರ್ ಬೆಳೆ, 290 ಮನೆಗಳಿಗೆ ಹಾನಿ

    ಶಿರಹಟ್ಟಿ: ಭಾರಿ ಮಳೆಯಿಂದಾಗಿ ತಾಲೂಕಿನಲ್ಲಿ 18,500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾಗೂ 290 ಮನೆಗಳಿಗೆ ಹಾನಿ ಸಂಭವಿಸಿದೆ ಎಂದು ತಹಸೀಲ್ದಾರ್ ಕೆ.ಆರ್. ಪಾಟೀಲ ಮಾಹಿತಿ ನೀಡಿದರು.
    ಈ ಕುರಿತು ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಸಿಬ್ಬಂದಿ ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದು ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 18, 500 ಹೆಕ್ಟೇರ್ ಪ್ರದೇಶದಲ್ಲಿ 14 ಸಾವಿರ ಗೋವಿನ ಜೋಳ, 2 ಸಾವಿರ ಹೆಕ್ಟೇರ್ ಹೆಸರು ಉಳಿದಂತೆ 2,500 ಹೆಕ್ಟೇರ್ ಪ್ರದೇಶ ಶೇಂಗಾ ಮತ್ತು ಹತ್ತಿಗೆ ಸಂಬಂಧಿಸಿದೆ ಬೆಳೆ ಹಾನಿಯಾಗಿದೆ ಎಂದರು.
    ತೋಟಗಾರಿಕೆ ಬೆಳೆಯಲ್ಲಿ 308 ಹೆಕ್ಟೇರ್ ಉಳ್ಳಾಗಡ್ಡಿ ಮತ್ತು 302 ಹೆಕ್ಟೇರ್ ಮೆಣಸಿನ ಗಿಡಕ್ಕೆ ಸಂಬಂಧಿಸಿದ್ದು ಅಂದಾಜು 30-40 ಹೆಕ್ಟೇರ್ ಹೂವು, ತರಕಾರಿ ಮತ್ತು ಹಣ್ಣಿನ ಬೆಳೆ ಹಾನಿಯಾಗಿದೆ. ಎಲ್ಲವನ್ನು ಜಿಪಿಎಸ್ ಅಳವಡಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ಮೂಲಕ ಪರಿಹಾರ ಕಲ್ಪಿಸಲಾಗುತ್ತದೆ ಎಂದರು.
    ಸತತ ಮಳೆಯಿಂದಾಗಿ 16 ಕಿ.ಮೀ. ರಾಜ್ಯ ಹೆದ್ದಾರಿ, 70 ಕಿ.ಮೀ. ಜಿಲ್ಲಾ ಸಂಪರ್ಕ ರಸ್ತೆ ಮತ್ತು 5 ಸೇತುವೆ, ಪಿಆರ್​ಇಡಿ ಇಲಾಖೆಯ 142 ಕಿ.ಮೀ. ರಸ್ತೆ ಮತ್ತು 32 ಕಿರು ಅಡ್ಡ ಚರಂಡಿಗಳು ಹಾನಿಗೊಳಗಾಗಿವೆ. ತಾಲೂಕಿನಲ್ಲಿ 290 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು ಅವುಗಳಲ್ಲಿ ಈಗಾಗಲೇ 66 ಕ್ಕೆ 50 ಸಾವಿರ ರೂ.ಗಳಂತೆ ಪರಿಹಾರ ಧನ ನೀಡಲಾಗಿದೆ. ರಣತೂರ, ದೇವಿಹಾಳ ಸೇರಿದಂತೆ ತಾಲೂಕಿನಲ್ಲಿ 10 ಮನೆಗಳು ಸಂಪೂರ್ಣ ಕುಸಿದಿದ್ದು ಅವುಗಳಿಗೆ 3.50 ಲಕ್ಷದಿಂದ 5 ಲಕ್ಷ ರೂ.ವರೆಗೆ ಪರಿಹಾರ ಧನ ನೀಡಲಾಗುತ್ತದೆ. ಜಲಗಂಡಾಂತರಕ್ಕೆ ತುತ್ತಾದ ಸಂತ್ರಸ್ತರ ನೆರವಿಗಾಗಿ ತಾಲೂಕಿನ ಮಜ್ಜೂರ, ಕನಕವಾಡ, ಬೂದಿಹಾಳ, ದೇವಿಹಾಳ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts