More

    ಶಿಗ್ಲಿಯಲ್ಲಿ ತಪ್ಪದ ಟ್ರಾಫಿಕ್ ಕಿರಿಕಿರಿ

    ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿರುವ ಜನಸಂದಣಿಯಿಂದ ಕೂಡಿರುವ ಮುಖ್ಯ ಬಜಾರ್ ರಸ್ತೆ ಅತ್ಯಂತ ಕಿರಿದಾಗಿದ್ದು ನಿತ್ಯವೂ ಟ್ರಾಫಿಕ್ ಕಿರಿಕಿರಿಯಿಂದ ಸಾರ್ವಜನಿಕರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

    ಲಕ್ಷ್ಮೇಶ್ವರ- ಬೆಳ್ಳಟ್ಟಿ ಮಾರ್ಗದ ಈ ರಸ್ತೆ ಜಿಪಂ ವ್ಯಾಪ್ತಿಗೆ ಸೇರಿದೆ. ಶಿಗ್ಲಿಯಲ್ಲಿ ಹಾದು ಹೋಗುವ ಈ ರಸ್ತೆ ಅತ್ಯಂತ ಇಕ್ಕಟ್ಟಿನದಾಗಿದೆ. ಗ್ರಾಮದ ಶಿರಸಂಗಿ ಲಿಂಗರಾಜರ ವೃತ್ತದಿಂದ ಹಳೇ ಬಸ್ ನಿಲ್ದಾಣ ತಲುಪುವವ ರೆಗಿನ 500 ಮೀ. ರಸ್ತೆಯಲ್ಲಿ ಕೇವಲ ಒಂದು ಬಸ್ ಮಾತ್ರ ಸಂಚರಿಸುವಷ್ಟು ಕಿರಿದಾಗಿದೆ. ಎರಡೂ ಬದಿಯಲ್ಲೂ ವ್ಯಾಪಾರಿ ಮಳಿಗೆಗಳಿವೆ. ವಾಹನಗಳು ಎದುರು-ಬದುರು ಬಂದರೆ ಇಲ್ಲಿಂದ ಪಾರಾಗಲು ಹರಸಾಹಸ ಪಡಬೇಕಾಗುತ್ತದೆ. ಪ್ರತಿನಿತ್ಯ ನೂರಾರು ಬಸ್​ಗಳು, ಟಂಟಂ, ಟ್ರ್ಯಾಕ್ಸ್, ಗೂಡ್ಸ್ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುವುದರಿಂದ ಈ ರಸ್ತೆ ಸದಾ ಗದ್ದಲದಿಂದ ಕೂಡಿರುತ್ತದೆ. ಹೀಗಾಗಿ ವಾಹನ ಸವಾರರು, ಪಾದಚಾರಿಗಳು ಹಾಗೂ ವ್ಯಾಪಾರಸ್ಥರು ಕಿರಿಕಿರಿ ಅನುಭವಿಸುತ್ತಿದ್ದಾರೆ.

    ಶಿಗ್ಲಿ ಗ್ರಾಮವು ಶೈಕ್ಷಣಿಕ, ಔದ್ಯೋಗಿಕ ಮತ್ತು ವ್ಯಾಪಾರದ ದೃಷ್ಟಿಯಿಂದ ಭರದಿಂದ ಬೆಳೆಯುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾಗೂ ರೈತರು, ಸಾರ್ವಜನಿಕರು ವ್ಯಾಪಾರ- ವಹಿವಾಟಿಗಾಗಿ ಬರುತ್ತಾರೆ. ಅಲ್ಲದೆ, ಲಕ್ಷ್ಮೇಶ್ವರ- ಹಾವೇರಿಗೆ ಸಂಪರ್ಕ ಕಲ್ಪಿಸುವ ಟೋಲ್ ತಪ್ಪಿಸಲು ಒಳ ರಸ್ತೆಯೂ ಇದಾಗಿದೆ. ಇದರಿಂದ ಅಂತರ ಮತ್ತು ಸಮಯದ ಉಳಿತಾಯವೂ ಆಗುತ್ತದೆ ಎಂಬುದನ್ನು ಮನಗಂಡಿರುವ ಬಹುತೇಕ ವಾಹನಗಳ ಸವಾರರು ಈ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ಲೋಕೋಪಯೋಗಿ ಇಲಾಖೆಯ ರಸ್ತೆ ದುರಸ್ತಿಯಲ್ಲಿರುವುದರಿಂದ ಸದಾ ಗೌಜುಗದ್ದಲ ಈ ರಸ್ತೆಯುದ್ದಕ್ಕೂ ಸಮಸ್ಯೆಗಳ ಸರಮಾಲೆಯೇ ಗೋಚರಿಸುತ್ತದೆ.

    ಶನಿವಾರ ವಾರದ ಸಂತೆ ನಡೆಯುತ್ತದೆ. ಅಂದು ರಸ್ತೆ ಮಧ್ಯದಲ್ಲೇ ಸಂತೆ ನಡೆಯುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗುತ್ತದೆ.

    ಈ ರಸ್ತೆಯನ್ನು ಖುದ್ದು ಪರಿಶೀಲಿಸಿ ಈ ಕುರಿತು ಗ್ರಾಮ ಪಂಚಾಯಿತಿಯೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
    | ನಾಗರತ್ನಾ ಟಿ.ಎಂ. ಎಇಇ ಜಿಪಂ

    ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕು ಹಾಗೂ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಆದಷ್ಟು ಬೇಗ ಪೂರ್ಣಗೊಳಿಸಿ ಈ ರಸ್ತೆಯನ್ನು ಒನ್​ವೇ ಮಾಡಿ ನಿತ್ಯ ಉಂಟಾಗುತ್ತಿರುವ ಕಿರಿಕಿರಿ ತಪ್ಪಿಸಬೇಕು.
    | ನಾಗೇಶ ಅಮರಾಪುರ ಕರವೇ ತಾಲೂಕಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts