More

    ಶಿಗ್ಗಾಂವಿಯಲ್ಲಿ ಮಾದರಿ ಬಟಾಲಿಯನ್ ನಿರ್ಮಾಣ

    ಹಾವೇರಿ: ಶಿಗ್ಗಾಂವಿಯಲ್ಲಿರುವ ರಾಜ್ಯ ಮೀಸಲು ಪಡೆ ಬಟಾಲಿಯನ್ ಸಮಗ್ರ ಅಭಿವೃದ್ಧಿಪಡಿಸಿ, ರಾಜ್ಯದಲ್ಲಿಯೇ ಮಾದರಿ ಬಟಾಲಿಯನ್ ಮಾಡುವ ಚಿಂತನೆಯಿದ್ದು, ಡಿಪಿಆರ್ ತಯಾರಿಸಲು ಸೂಚಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಶನಿವಾರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಟಾಲಿಯನ್​ನಲ್ಲಿರುವ ಶಾಲೆಯ ವಿಸ್ತರಣೆ, ಮಾರುಕಟ್ಟೆ ಅಭಿವೃದ್ಧಿ, ಆರೋಗ್ಯ, ವ್ಯಾಯಾಮ ಹಾಗೂ ಆಸ್ಪತ್ರೆಗಳನ್ನು ಹೊಂದಿದ ಪೊಲೀಸ್ ಕಾಂಪ್ಲೆಕ್ಸ್ ನಿರ್ವಿುಸಲಾಗುವುದು ಎಂದರು.

    ಹಾವೇರಿ ತಾಲೂಕು ಕೆರಿಮತ್ತಿಹಳ್ಳಿಯಲ್ಲಿರುವ ಪೊಲೀಸ್ ವಸತಿ ಸಮುಚ್ಛಯಕ್ಕೆ ಮಳೆಗಾಲದಲ್ಲಿ ನೀರು ನುಗ್ಗುವುದರಿಂದ ಕೆರೆಗೆ ತಡೆಗೋಡೆ ಕಟ್ಟಬೇಕೋ ಅಥವಾ ಸಮುಚ್ಛಯ ಕಟ್ಟಡದ ನೆಲಮಹಡಿಯನ್ನು ಮುಚ್ಚಿ ಎತ್ತರಗೊಳಿಸಬೇಕೋ ಎಂಬ ಬಗ್ಗೆ ಮುಖ್ಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಜತೆ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಜಿಲ್ಲೆಯ ನೆರೆಪೀಡಿತ 22 ಗ್ರಾಮಗಳ ಸ್ಥಳಾಂತರಕ್ಕೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಿ ಸರ್ಕಾರಿ ಜಾಗ ಇಲ್ಲವೋ ಅಲ್ಲಿ ಖಾಸಗಿ ಭೂಮಿ ಖರೀದಿಸಲು ಸೂಚಿಸಲಾಗಿದೆ. ಹಿರೇಮುಗದೂರ ಗ್ರಾಮದಲ್ಲಿ ಜಮೀನು ದೊರೆತಿದೆ. ಜಮೀನು ಸಿಕ್ಕ ಕೂಡಲೇ ಎಲ್ಲೆಡೆ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

    ನಬಾರ್ಡ್ ನೀತಿ ನಿಯಮಗಳ ಅನುಸಾರ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿಲ್ಲ. ಆದ್ದರಿಂದ ರಾಜ್ಯದಲ್ಲಿ ಇದೇ ರೀತಿ ಸಮಸ್ಯೆ ಎದುರಿಸುತ್ತಿರುವ ಐದಾರು ಜಿಲ್ಲೆಗಳನ್ನು ಸೇರಿಸಿಕೊಂಡು ರಾಜ್ಯ ಸರ್ಕಾರದ ವತಿಯಿಂದಲೇ ನಬಾರ್ಡ್ ಚೇರ್ಮನ್​ರಿಗೆ ಭೇಟಿಯಾಗಿ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

    ಸೋಯಾಬೀನ್ ಬಿತ್ತನೆ ಬೀಜ ಮೊಳಕೆಯೊಡೆಯದೇ ಆಗಿರುವ ಸಮಸ್ಯೆಗೆ ಬೀಜ ಕಂಪನಿಯಿಂದಲೇ ರೈತರಿಗೆ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸಮೀಕ್ಷೆ ಮಾಡಿ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಪೊಲೀಸ್ ಗೃಹ-2025ಕ್ಕೆ ಅನುಮೋದನೆ: ಪೊಲೀಸ್ ಗೃಹ-2025 ಯೋಜನೆ ಪೂರ್ಣಗೊಂಡರೆ ರಾಜ್ಯ ದೇಶದಲ್ಲಿಯೇ ಅತಿಹೆಚ್ಚು ಪೊಲೀಸ್ ವಸತಿ ಗೃಹ ಹೊಂದಿರುವ ರಾಜ್ಯವಾಗಲಿದೆ. ಪೊಲೀಸ್ ಗೃಹ-2020 ಕಾರ್ಯಕ್ರಮದಡಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿ ಈಗಾಗಲೇ ಶೇ. 48ರಷ್ಟು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ 2025 ಯೋಜನೆಯಲ್ಲಿ 10 ಸಾವಿರ ಪೊಲೀಸ್ ವಸತಿಗೃಹಗಳನ್ನು ನಿರ್ವಿುಸುವ ಗುರಿಯಿದೆ. ಪ್ರಸಕ್ತ ವರ್ಷದ ಬಜೆಟ್​ನಲ್ಲಿ ಪೊಲೀಸ್ ಗೃಹ-2025 ಯೋಜನೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಜನವರಿಯಲ್ಲಿ ಯೋಜನೆ ಆರಂಭವಾಗಲಿದೆ. ಪೊಲೀಸ್ ಗೃಹ ಮಂಡಳಿಯಿಂದಲೂ ರಾಜ್ಯದಲ್ಲಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ಎಸ್​ಪಿ ಕಚೇರಿ, ಆಯುಕ್ತರ ಕಚೇರಿ, ಪೊಲೀಸ್ ಠಾಣೆ, ಪೊಲೀಸ್ ತರಬೇತಿ ಶಾಲೆ, ಕಾರಾಗೃಹ ಕಟ್ಟಡಗಳನ್ನು ನಿರ್ವಿುಸಲಾಗುವುದು. ಕರೊನಾ ಲಾಕ್​ಡೌನ್ ಇರುವುದರಿಂದ ಯಾರಿಗೂ ತೊಂದರೆ ಆಗದಂತೆ ಪೊಲೀಸ್ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಈ ಬಗ್ಗೆ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಪ್ರಕಟಿಸಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಯಾರಿಗೂ ಅಸಮಾಧಾನವಿಲ್ಲ: ಕೆಲ ಶಾಸಕರು ತಮ್ಮ ಕ್ಷೇತ್ರಕ್ಕೆ ಸಮರ್ಪಕ ಅನುದಾನ ಸಿಗುತ್ತಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಪಕ್ಷದ ಶಾಸಕರೆಲ್ಲ ತಮ್ಮ ಕ್ಷೇತ್ರದ ಬಗ್ಗೆ ಕಳಕಳಿ ಹೊಂದಿದ್ದಾರೆ. ಅಭಿವೃದ್ಧಿಪರ ನಿಲುವು ಉಳ್ಳವರಾಗಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳುತ್ತಿದ್ದು ಅದನ್ನು ನಾವು ಧನಾತ್ಮಕವಾಗಿ ಪರಿಗಣಿಸಬೇಕು. ಯಾರಲ್ಲಿಯೂ ಅಸಮಾಧಾನವಿಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts