More

    ಶಿಕ್ಷಣ ನೀತಿ ಪ್ರಚಾರಕ್ಕೆ ಗೊಂಬೆಯಾಟ

    ಓರ್ವಿಲ್ ಫರ್ನಾಂಡೀಸ್ ಹಳಿಯಾಳ: ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಯಕ್ಷಗಾನ ಸೂತ್ರದ ಗೊಂಬೆಯಾಟದ ಮೂಲಕ ಪ್ರಚಾರ ಮಾಡುವ ಪ್ರಯೋಗ ಆರಂಭವಾಗಿದೆ.

    ವಿಜ್ಞಾನ, ಗಣಿತ ವಿಷಯವನ್ನು ಗೊಂಬೆಯಾಟದ ಮೂಲಕ ಸರಳವಾಗಿ ಕಲಿಸುವ ವಿಧಾನ ಪರಿಚಯಿಸಿರುವ ತಾಲೂಕಿನ ಚಿಬ್ಬಲಗೇರಿ ಪ್ರೌಢಶಾಲೆಯ ಶಿಕ್ಷಕ, ಬಯಲಾಟ ಅಕಾಡೆಮಿ ಸದಸ್ಯ, ಗೊಂಬೆಯಾಟದ ತಜ್ಞ ಸಿದ್ದಪ್ಪ ಬಿರಾದಾರ ಈ ಪ್ರಯೋಗದ ಹರಿಕಾರರು.

    ಯಕ್ಷಗಾನವು ಮಲೆನಾಡು ಮತ್ತು ಕರಾವಳಿ ಭಾಗದ ಅಚ್ಚು ಮೆಚ್ಚಿನ ಕಲೆ. ಹೀಗಿರುವಾಗ, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಹಲವಾರು ವಿಷಯಗಳನ್ನು ಜನ ಸಾಮಾನ್ಯರಿಗೆ ಸುಲಭವಾಗಿ ಯಕ್ಷಗಾನ ಸೂತ್ರದ ಗೊಂಬೆಯಾಟದ ಮೂಲಕ ಪ್ರಚಾರ ಹೇಗೆ ಎಂದು ಯೋಚಿಸಿದರು. ಅದರಂತೆ ತಮ್ಮ ಯೋಚನೆ ಕಾರ್ಯಗತಗೊಳಿಸಲು ಬಿರಾದಾರ ಅವರು ಚಿಬ್ಬಲಗೇರಿ ಪ್ರೌಢಶಾಲೆಯ ನೆರವನ್ನು ಪಡೆದರು. ವಿದ್ಯಾಗಮದ ಜತೆಯಲ್ಲಿ ಚಿಬ್ಬಲಗೇರಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಸೇರಿ ಗೊಂಬೆಯಾಟದ ಪ್ರದರ್ಶನಕ್ಕೆ ಅಣಿಯಾದರು.

    ಪ್ರದರ್ಶನದ ನಿರ್ದೇಶನದ ಹೊಣೆಯನ್ನು ಬಿರಾದಾರ ಅವರು ಹೊತ್ತುಕೊಂಡರು. ಸಾಹಿತ್ಯವನ್ನು ಯಕ್ಷಗಾನ ಅಕಾಡೆಮಿಯ ಸದಸ್ಯೆ ನಿರ್ಮಲಾ ಹೆಗಡೆ ಬರೆದಿದ್ದಾರೆ. ಹಿಮ್ಮೇಳದ ಭಾಗವತರಾಗಿ ಗಜಾನನ ಭಾಗವತ ವಾನಳ್ಳಿ, ಮದ್ದಲೆಯಲ್ಲಿ ಶ್ರೀಪಾದ ಭಟ್ ಮೂಡಗಾರ, ಚಂಡೆಯಲ್ಲಿ ಪ್ರಸನ್ನ ಭಟ್ ಹೆಗ್ಗಾರ ಸಹಕರಿಸಿದ್ದಾರೆ. ವಿವಿಧ ಪಾತ್ರಗಳ ಗೊಂಬೆಗಳಿಗೆ ಮಂಜುನಾಥ ಗೊರಮ್ಮನೆ, ನಿರಂಜನ ಜಾಗನಳ್ಳಿ ಮತ್ತು ಪ್ರವೀಣ ಹೆಗಡೆ ತಟ್ಟೀಸರ ಧ್ವನಿಯಾಗಿದ್ದಾರೆ. ಗೊಂಬೆಯಾಟದ ಸೂತ್ರಧಾರರಾಗಿ ನಾರಾಯಣ, ಸತೀಶ, ಕೃಷ್ಣ, ಮತ್ತು ಪ್ರದೀಪ ಕಾರ್ಯನಿರ್ವಹಿಸಿದ್ದಾರೆ. ಈ ಪ್ರದರ್ಶನಕ್ಕೆ ಚಿಬ್ಬಲಗೇರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಬೇಲಿಫ ಮತ್ತು ಸುಜಾತಾ ಬಿರಾದಾರ ನೆರವು ನೀಡಿದ್ದಾರೆ.

    ಹೀಗಿದೆ ಶಿಕ್ಷಣ ನೀತಿ: ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಮಕ್ಕಳಲ್ಲಿ ಕೌಶಲಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಮತ್ತು ಮಗುವಿನಲ್ಲಿ ಸಂಶೋಧನಾತ್ಮಕ ಆವಿಷ್ಕಾರಗಳನ್ನು ಬೆಳೆಸಲು, ಪಠ್ಯಕ್ರಮದಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿಗೆ ಒತ್ತು ನೀಡಲು ಈ ನೀತಿಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನಕ್ಕೆ ಮಹತ್ವ ನೀಡುವುದು, ವೈಜ್ಞಾನಿಕ ಮನೋಭಾವ ಬೆಳೆಸುವುದು, ಜಾಗತಿಕ ಮಟ್ಟಕ್ಕೆ ಸಮಾನವಾಗಿ ಉನ್ನತ ಶಿಕ್ಷಣವನ್ನು ನೀಡುವುದು, ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದು ಇದರ ಮೂಲ ಉದ್ದೇಶವಾಗಿದೆ.

    ಕರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕ ಪ್ರಯೋಗಕ್ಕೆ ಅವಕಾಶ ಇಲ್ಲದಿರುವುದರಿಂದ ನಮ್ಮ ಯಕ್ಷಗಾನ ಸೂತ್ರದ ಗೊಂಬೆಯಾಟದ ಪ್ರದರ್ಶನವನ್ನು ಯ್ಯೂಟ್ಯೂಬ್, ಫೇಸ್​ಬುಕ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಲು ಆರಂಭಿಸಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. | ಸಿದ್ದಪ್ಪ ಬಿರಾದಾರ ಬಯಲಾಟ ಅಕಾಡೆಮಿ ಸದಸ್ಯ, ಗೊಂಬೆಯಾಟ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts