More

    ಶಿಕ್ಷಕಿ ವರ್ಗಾವಣೆ ರುದ್ರನಕಟ್ಟೆ ಶಾಲೆಗೆ ಬೀಗ! -ಆದೇಶ ಬದಲಾದರೆ ಮರಳಲು ಟೀಚರ್ ಇಂಗಿತ – ಅವರನ್ನೇ ಮುಂದುವರಿಸಲು ಗ್ರಾಮಸ್ಥರ ಪಟ್ಟು

    ದಾವಣಗೆರೆ: ತಾಲೂಕಿನ ರುದ್ರನಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯೊಬ್ಬರು ಸ್ವ ಇಚ್ಛೆಯಿಂದ ವರ್ಗಾವಣೆ ಪಡೆದಿರುವುದನ್ನು ವಿರೋಧಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಶುಕ್ರವಾರ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
    ಶಿಕ್ಷಕಿ ಸುನಂದಮ್ಮ ವರ್ಗ ಮಾಡಿಸಿಕೊಂಡಿದ್ದ ಮಲ್ಲಾಪುರ ಶಾಲೆಗೆ ಹೊರಡಲು ಮುಂದಾದಾಗ ಗ್ರಾಮಸ್ಥರು ಶಾಲೆ ಬಿಟ್ಟು ಹೋಗದಂತೆ ಪರಿಪರಿಯಾಗಿ ಬೇಡಿದರು. ಅಲ್ಲದೆ ಶಾಲೆಗೆ ಬೀಗ ಹಾಕಿದರು. ಶಿಕ್ಷಕಿ ಶಾಲೆ ತೊರೆಯುತ್ತಿರುವುದಕ್ಕೆ ಕೆಲವು ಚಿಣ್ಣರು ಕಣ್ಣೀರು ಹಾಕಿದರು.
    ‘ನೀವು ಇಲ್ಲಿಯೇ ಶಿಕ್ಷಕರಾಗಿ ಇರಬೇಕು. ಇಲ್ಲವಾದರೆ ಮಕ್ಕಳ ಭವಿಷ್ಯ ಹಾಳಾಗಲಿದೆ. ನೀವು ಬೇರೆಕಡೆ ಹೋಗುವುದಾದರೆ ಹೋಗಿ, ನಮ್ಮ ಮಕ್ಕಳ ಟಿಸಿ ಕೊಟ್ಟುಬಿಡಿ, ಅವರನ್ನು ಕೂಲಿ ಕೆಲಸಕ್ಕೆ ಹೆಚ್ಚುತ್ತೇವೆ’ ಎಂದು ಗ್ರಾಮಸ್ಥರು ಹೇಳಿದರು. ಆದರೂ ಶಿಕ್ಷಕಿ ಅಲ್ಲಿಂದ ತೆರಳಿ ಮಲ್ಲಾಪುರದಲ್ಲಿ ಕರ್ತವ್ಯಕ್ಕೆ ಹಾಜರಾದರು.
    ಘಟನೆ ವಿವರ:
    ರುದ್ರನಕಟ್ಟೆ ಶಾಲೆಯಲ್ಲಿದ್ದ ಬಿ.ಇ.ಸುನಂದಮ್ಮ ಹಾಗೂ ಶಾರದಮ್ಮ ಕ್ರಮವಾಗಿ ಮಲ್ಲಾಪುರ ಹಾಗೂ ಹಳೆಬಾತಿ ಗ್ರಾಮದ ಶಾಲೆಗಳಿಗೆ ಪರಸ್ಪರ ವರ್ಗಾವಣೆ ಪಡೆದಿದ್ದರು. ಶಾರದಮ್ಮ ಸ್ಥಾನಕ್ಕೆ ಮೈಲಾರಪ್ಪ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
    ದಾವಣಗೆರೆ ಹೊರವಲಯದ ರಂಗನಾಥ ಬಡಾವಣೆ ನಿವಾಸಿ ಬಿ.ಸಿ.ಸುನಂದಮ್ಮ ನಾಲ್ಕು ವರ್ಷದಿಂದ ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದರಿಂದ 5ನೇ ತರಗತಿವರೆಗೆ 40 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಕೂಲಿಕಾರ್ಮಿಕರ ಮಕ್ಕಳೇ ಹೆಚ್ಚು ಬರುತ್ತಿದ್ದರು. ಮಕ್ಕಳಿಗೆ ನೋಟ್‌ಪುಸ್ತಕ ಮತ್ತಿತರೆ ನೆರವಿನೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದರು. ಪರಿಣಾಮವಾಗಿ ಮಕ್ಕಳ ಸಂಖ್ಯೆ ಹೆಚ್ಚಿತ್ತು ಎನ್ನಲಾಗಿದೆ.
    ಸುನಂದಮ್ಮ ಅವರ ಪತಿ ಮಹದೇವಸ್ವಾಮಿ, ಬಸವನಾಳ್ ಗ್ರಾಮದ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಬಸವನಾಳ್ ಮತ್ತು ರುದ್ರನಕಟ್ಟೆಗೆ 10 ಕಿ.ಮೀ ಅಂತರವಿದ್ದು, ಪತ್ನಿಯನ್ನು ಶಾಲೆಗೆ ಬಿಡಲು ಮತ್ತು ಕರೆದೊಯ್ಯಲು ನಿತ್ಯ 40 ಕಿ.ಮೀ. ಓಡಾಟ ಆಗುತ್ತಿದ್ದರಿಂದಾಗಿ ಸುನಂದಮ್ಮ ಬಸವನಾಳ್‌ಗೆ ಮೂರೂವರೆ ಕಿ.ಮೀ ದೂರದ ಮಲ್ಲಾಪುರ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಅಲ್ಲಿಗೆ ತೆರಳಿದ್ದಾರೆ.
    ‘ಸ್ವ ಇಚ್ಛೆಯಿಂದ ವರ್ಗ ಮಾಡಿಸಿಕೊಂಡಿದ್ದು ನಿಜ. ಆದರೆ ರುದ್ರನಕಟ್ಟೆ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ನನ್ನನ್ನು ಇಷ್ಟು ಹಚ್ಚಿಕೊಂಡಿದ್ದಾರೆ ಎಂಬುದು ತಿಳಿದಿರಲಿಲ್ಲ. ಅವರು ತೋರಿಸಿದ ಪ್ರೀತಿಗೆ ನಾನು ಋಣಿ. ಸರ್ಕಾರದ ಆದೇಶ ಬದಲಾವಣೆ ಆದಲ್ಲಿ ಅದೇ ಶಾಲೆಗೆ ಬಂದು ಕೆಲಸ ಮಾಡಲು ಸಿದ್ಧಳಿದ್ದೇನೆ’ ಎಂದು ಸುನಂದಮ್ಮ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
    ನಿಯಮದನ್ವಯ ಒಮ್ಮೆ ವರ್ಗಾವಣೆಯಾದ ಸ್ಥಳಕ್ಕೆ ತೆರಳಿ ಕೆಲಸ ನಿರ್ವಹಿಸಬೇಕಿದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅದು ಇಲಾಖೆ ಆಯುಕ್ತರ ಹಂತದಲ್ಲಿದೆ ಎಂದು ದಾವಣಗೆರೆ ಉತ್ತರ ವಲಯ ಶಿಕ್ಷಣಾಧಿಕಾರಿ ಟಿ.ಅಂಬಣ್ಣ ಹೇಳುತ್ತಾರೆ. ಆದರೆ ಇತ್ತ ಗ್ರಾಮಸ್ಥರು, ಮಕ್ಕಳು ಹೋರಾಟ ಮುಂದುವರಿಸುವ ಚಿಂತನೆಯಲ್ಲಿದ್ದಾರೆ.

    ಕೋಟ್
    ‘ಸುನಂದಮ್ಮ ಟೀಚರ್ ಮಕ್ಕಳಿಗೆ ಒಳ್ಳೆಯ ರೀತಿಯಿಂದ ಪಾಠ ಮಾಡುತ್ತಾರೆ. ಹೇಗಾದರೂ ಮಾಡಿ ಮತ್ತೆ ಅವರನ್ನೇ ಮುಂದುವರಿಸಬೇಕು. ಶನಿವಾರ ದಾವಣಗೆರೆಗೆ ಬಂದು ಅಧಿಕಾರಿಗಳನ್ನು ಕೇಳುತ್ತೇವೆ’
    ಟಿ.ಹೇಮಂತ್
    ರುದ್ರನಕಟ್ಟೆ ಗ್ರಾಮಸ್ಥ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts