More

    ಶಿಕ್ಷಕರ ಸೇವಾ ಪುಸ್ತಕ ಉನ್ನತೀಕರಣವಾಗಲಿ

    ಹಾನಗಲ್ಲ: ಗುರುಸ್ಪಂದನ ಕಾರ್ಯಕ್ರಮ ಶಿಕ್ಷಕ ಸಮುದಾಯಕ್ಕೆ ಸಹಕಾರಿಯಾಗಿದ್ದು, ಬಿಇಲ್​ಒ, ಗಣತಿ, ಬೇಸಿಗೆ ಸಂಭ್ರಮ, ಬಿಸಿಯೂಟ, ಇನ್ಕ್ರಿಮೆಂಟ್ ಸೇರಿ ಎಲ್ಲವನ್ನೂ ಅಪ್​ಡೇಟ್ ಮಾಡಲಾಗುವುದು ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳವಾರ ಆಯೋಜಿಸಿದ್ದ ಗುರುಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರತಿವರ್ಷವೂ ಶಿಕ್ಷಕರ ಸೇವಾ ಪುಸ್ತಕದ ಉನ್ನತೀಕರಣವಾಗಬೇಕು. ಶಿಕ್ಷಕರ ಸಾಧನೆಗಳು, ದಾಖಲೆಗಳು, ಹಾಜರಾತಿ, ಅಮಾನತು ಮತ್ತಿತರ ವಿಷಯಗಳು ಸೇರ್ಪಡೆಗೊಳ್ಳುವುದು ವಿಳಂಬವಿಲ್ಲದಂತೆ ನಡೆಯಬೇಕು. ಇವೆಲ್ಲ ನಿವೃತ್ತಿ ಸಂದರ್ಭದಲ್ಲಿ ಸಹಕಾರಿಯಾಗುತ್ತವೆ. ಶಾಲೆಯಲ್ಲಿ ಸ್ವಂತದ ಚಿಂತೆಯಿಲ್ಲದಂತೆ ಶಿಕ್ಷಕರು ಪಾಠದಲ್ಲಿ ತೊಡಗಬೇಕಾದಲ್ಲಿ ಇವುಗಳನ್ನು ಬಿಇಒ ಕಚೇರಿಯಲ್ಲಿ ನಿರ್ವಹಣೆ ಮಾಡುವುದು ಅತ್ಯಗತ್ಯವಾಗಿದೆ. ಇವುಗಳಿಗಾಗಿ ಶಿಕ್ಷಕರು ಶಾಲೆ ಬಿಟ್ಟು ಕಚೇರಿಗೆ ಅಲೆಯುವಂತಾಗಬಾರದು ಎಂದರು.

    ಸಮಯ ಪಾಲನೆ ಶಿಕ್ಷಕರ ಮೊದಲ ಆದ್ಯತೆಯಾಗಬೇಕು. ಪ್ರತಿ ಮಗುವಿನ ಶೈಕ್ಷಣಿಕ ಬೆಳವಣಿಗೆ ಬಗ್ಗೆ ಗಮನವಿರಬೇಕು. ಕಲಿಕೆಗೆ ಹಿನ್ನಡೆಯಾಗಬಾರದು. ಫಲಿತಾಂಶವೇ ಆಯಾ ಶಾಲೆಯ ಕಲಿಕಾ ಗುಣಮಟ್ಟ ತೋರಿಸುತ್ತದೆ. 7ನೇ ತರಗತಿಯಲ್ಲೂ ಕನಿಷ್ಠ ಶಿಕ್ಷಣ ಬಾರದ ಮಕ್ಕಳಿದ್ದಾರೆ. 6-7ನೇ ತರಗತಿಯ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ. ಅವರು ದಾರಿ ತಪ್ಪುವ ಸಂದರ್ಭಗಳು ಹೆಚ್ಚಾಗುತ್ತಿವೆ. ಹೆಣ್ಣು ಮಕ್ಕಳೊಂದಿಗೆ ಜವಾಬ್ದಾರಿಯಿಂದ ವರ್ತಿಸಿ. ಸಮಾಜಕ್ಕೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

    ಬಿಇಒ ಎಚ್.ಶ್ರೀನಿವಾಸ ಮಾತನಾಡಿ, ಶಾಲಾ ಅವಧಿಯಲ್ಲಿ ಶಿಕ್ಷಕರು ಶಾಲೆ ಬಿಟ್ಟು ನಮ್ಮ ಕಚೇರಿಗೆ ಬರಬಾರದು. ಯಾವುದೇ ಕೆಲಸ ಕಾರ್ಯಗಳಿದ್ದರೂ ಸಿಆರ್​ಪಿಗಳ ಮೂಲಕ ಅಥವಾ ದೂರವಾಣಿ ಮೂಲಕ ಮಾಹಿತಿ ನೀಡಬೇಕು. ಶಿಕ್ಷಣದ ಗುಣಮಟ್ಟ- ಫಲಿತಾಂಶವನ್ನು ಹೆಚ್ಚಿಸುವಲ್ಲಿ ಶ್ರಮ ವಹಿಸಬೇಕು. ಶಿಕ್ಷಕರ ಎಲ್ಲ ಸಮಸ್ಯೆಗಳಿಗೂ ಪಾರದರ್ಶಕ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಫೆ. 21 ರವರೆಗೆ ಗುರುಸ್ಪಂದನ ಕಾರ್ಯ ನಡೆಯಲಿದೆ ಎಂದರು.

    ವಿಷಯ ಪರಿವೀಕ್ಷಕ ಡಿ.ಎಸ್. ಬಸಮ್ಮನವರ ಮಾತನಾಡಿ, ವಿದ್ಯಾರ್ಥಿಗಳಿಗೆ ಧ್ಯಾನ, ಏಕಾಗ್ರತೆಗಳನ್ನು ಪ್ರತಿದಿನ ರೂಢಿಸಿದರೆ ಪಾಠ-ಫಲಿತಾಂಶ ಸಾಧನೆ ಸರಳವಾಗುತ್ತದೆ. ಯೋಗ ಶಿಕ್ಷಣ ನೀಡಿ, ನೆನಪಿನ ಶಕ್ತಿ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಸೇವಾ ಪುಸ್ತಕ ಅಪ್​ಡೇಟ್ ಮಾಡಿದ ನಂತರ ಎಚ್​ಆರ್​ಎಂಎಸ್​ಗೆ ಅವೆಲ್ಲವನ್ನೂ ಅಳವಡಿಸಿ ಎಂದರು.

    ಡಿಡಿಪಿಐ ಅಂದಾನಪ್ಪ ವಡಗೇರಿ ಹಾಗೂ ಬಿಇಒ ಎಚ್.ಶ್ರೀನಿವಾಸ ಅವರನ್ನು ಶಿಕ್ಷಕರ ಸಂಘದ ಪರವಾಗಿ ಸನ್ಮಾನಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ, ವಿಷಯ ಪರಿವೀಕ್ಷಕ ಬಸನಗೌಡ ಪಾಟೀಲ, ಶರಣಬಸಪ್ಪ ದೊಡ್ಡಮನಿ, ಡಿ. ಮೋಹನಕುಮಾರ, ಎಸ್.ಕೆ. ದೊಡ್ಡಮನಿ, ಸಿ.ಜಿ. ಪಾಟೀಲ, ಎಂ.ಬಿ. ವಡೆಯರ, ಎಂ.ಎ. ಜಾಗೀರದಾರ, ಅನಿಲಕುಮಾರ ಗೋಣೆಣ್ಣನವರ, ವಾಗೀಶ ಆರಾಧ್ಯಮಠ, ಪಿ.ಎಚ್. ಹಿರೇಗೌಡರ, ಅನಿತಾ ಕಿತ್ತೂರ, ಎನ್.ಜೆ. ಇನಾಂದಾರ, ಎಂ.ಜೆ. ನಾಯಕ, ಮರಿಗೌಡರ ಉಪಸ್ಥಿತರಿದ್ದರು. ಶಿಕ್ಷಕ ಎಂ.ಎಸ್.ಬಡಿಗೇರ ಸ್ವಾಗತಿಸಿದರು. ಬಿ.ಎಸ್. ಚಲ್ಲಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಕೆ. ಶಂಕರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts