More

    ಶಿಕ್ಷಕರಿಗೆ ಕರ್ತವ್ಯ ಪ್ರಜ್ಞೆ ಇರಲಿ

    ಬೆಳಗಾವಿ: ಎಲ್ಲ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ. ವಿದ್ಯಾರ್ಥಿಗಳ ಭವಿಷ್ಯದ ಕುರಿತು ಕಾಳಜಿ ಹಾಗೂ ಕರ್ತವ್ಯ ಪ್ರಜ್ಞೆಯಿಂದ ವೃತ್ತಿ ನಿರ್ವಹಿಸಿದಾಗ, ಪ್ರತಿಯೊಬ್ಬರೂ ಆದರ್ಶ ಶಿಕ್ಷಕರಾಗಲು ಸಾಧ್ಯ ಎಂದು ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜರು ಹೇಳಿದರು.

    ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ರಾಮಕೃಷ್ಣ ವಿಶ್ವ ಭಾವೈಕ್ಯ ಮಂದಿರದ ಪ್ರತಿಷ್ಠಾಪನೆ ಸ್ಮರಣಾರ್ಥದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ಸಮಾವೇಶದಲ್ಲಿ ಮಾತನಾಡಿದ ಅವರು, ಶಿಕ್ಷಕರು ಕೇವಲ ಪಠ್ಯ ಬೋಧನೆಗೆ ಸೀಮಿತರಾಗದೇ, ವಿದ್ಯಾರ್ಥಿಗಳಿಗೆ ಹೊಸತು ಕಲಿಸುವುದನ್ನು ಪ್ರೀತಿಸಬೇಕು. ಬೋಧಿಸುವ ವಿಷಯ ಹಾಗೂ ವೃತ್ತಿ ಪ್ರೀತಿಸಬೇಕು. ಅಂದಾಗ ಮಾತ್ರ ಸಮರ್ಥವಾಗಿ ಹಾಗೂ ಮನದಟ್ಟು ಆಗುವಂತೆ ಪಾಠ ಮಾಡಲು ಸಾಧ್ಯ ಎಂದರು.

    ಸಂಪನ್ಮೂಲ ವ್ಯಕ್ತಿ ಸುರೇಶ ಕುಲಕರ್ಣಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಿ, ಶಾಲೆಯೊಂದು ಹೊಲದಂತೆ. ವಿದ್ಯಾರ್ಥಿಗಳು ವಿವಿಧ ಬೀಜಗಳಿದ್ದಂತೆ. ಪ್ರತಿಯೊಂದು ಬೀಜ ವಿಭಿನ್ನವಾಗಿರುತ್ತವೆ. ಅವುಗಳ ಸಾಮರ್ಥ್ಯ ಹಾಗೂ ಪ್ರತಿಭೆಗೆ ತಕ್ಕಂತೆ ಪೋಷಿಸಬೇಕು. ಸಾಮೂಹಿಕ ಪ್ರಯೋಗ ಸದಾಕಾಲವೂ ಫಲಪ್ರದವಾಗಿರುವುದಿಲ್ಲ. ವೈಯಕ್ತಿಕ ಕಾಳಜಿಯೂ ಬಹುದೊಡ್ಡ ಬದಲಾವಣೆಯ ಫಸಲು ನೀಡಬಹುದು ಎನ್ನುವುದನ್ನು ಶಿಕ್ಷಕರು ಮರೆಯಬಾರದು ಎಂದು ಕಿವಿಮಾತು ಹೇಳಿದರು.

    ಮಕ್ಕಳಲ್ಲಿ ಕುತೂಹಲ ಸೃಷ್ಟಿಸುವಲ್ಲಿ ಚಿತ್ರಕಲೆ ಅತ್ಯಂತ ಮಹತ್ವದ ಪಾತ್ರ ಹೊಂದಿದ್ದು, ಎಲ್ಲ ವಿಷಯ ಶಿಕ್ಷಕರೂ ಚಿತ್ರಕಲೆಯ ಕೌಶಲಗಳನ್ನು ತರಗತಿಯಲ್ಲಿ ಅನ್ವಯಿಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಕಲಿಸುವ ಸಾಧನಗಳಷ್ಟೇ ಅಲ್ಲ; ವಿಧಾನವೂ ಬದಲಾದಾಗ ಕಲಿಕೆಗೆ ವೇಗ ಬರುತ್ತದೆ. ವಿಶ್ವವನ್ನು ಬದಲಾಯಿಸುವ ತಾಕತ್ತು ಶಿಕ್ಷಕ ಸಮುದಾಯಕ್ಕಿದೆ. ವಿದ್ಯಾರ್ಥಿಗಳು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ ಶಿಕ್ಷಕರ ಜವಾಬ್ದಾರಿ ಮುಗಿಯುವುದಿಲ್ಲ. ಇಡಿ ಜೀವನದಲ್ಲಿ ಯಶಸ್ಸು ಸಾಧಿಸಿ, ಜಗತ್ತಿಗೆ ಆಸ್ತಿಯಾಗುವಂತೆ ವ್ಯಕ್ತಿತ್ವ ರೂಪಿಸಬೇಕು ಎಂದು ತಿಳಿಸಿದರು.

    ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ಮಂಗಳನಾಥಾನಂದಜಿ ಮಹಾರಾಜರು ‘ಮಿದುಳಿನ ವಿಕಾಸ-ಒತ್ತಡ ನಿರ್ವಹಣೆ’ ಕುರಿತು ಉಪನ್ಯಾಸ ನೀಡಿ, ಶಿಕ್ಷಣ ನೀಡುವುದು ಇಂದು ಕೇವಲ ವೃತ್ತಿಗೆ ಸೀಮಿತಗೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ. ಜ್ಞಾನಾರ್ಜನೆಯ ಹಸಿವು ಹೆಚ್ಚಿಸಿಕೊಂಡಾಗ ಮಾತ್ರ ಶಾಲೆ, ಕಾಲೇಜು ವಿಶ್ವವಿದ್ಯಾಲಯಗಳಿಗೆ ದೇವಸ್ಥಾನದಂತೆ ಪವಿತ್ರ ಸ್ಥಾನ ಉಳಿಯಲಿದೆ. ಎಲ್ಲ ವೃತ್ತಿಗಳಲ್ಲೂ ಒತ್ತಡ ಇದ್ದೇ ಇದೆ. ಅದು ಎಂದಿಗೂ ನಿರ್ನಾಮ ಆಗುವುದಿಲ್ಲ. ಆದರೆ, ಯಶಸ್ವಿಯಾಗಿ ನಿರ್ವಹಣೆ ಮಾಡಬಹುದು ಎಂದು ಹಲವು ನಿದರ್ಶನಗಳ ಮೂಲಕ ಶಿಕ್ಷಕರಿಗೆ ಮನದಟ್ಟು ಮಾಡಿದರು.

    ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜಿ, ಸ್ವಾಮಿ ಮೋಕ್ಷಾತ್ಮಾನಂದಜಿ, ಬಿಇಒ ರವಿ ಭಜಂತ್ರಿ, ವಕೀಲ ಮಲ್ಲಿಕಾರ್ಜುನ ಗುನ್ನಾಗೋಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts