More

    ಶಿಂಗಟಾಲೂರಿನ ಸಂತ್ರಸ್ತರಿಗಿಲ್ಲ ಸೂರು

    ಮುಂಡರಗಿ: ತುಂಗಭದ್ರಾ ನದಿ ಪ್ರವಾಹಕ್ಕೆ ತುತ್ತಾಗಿದ್ದ ಹಳೇ ಶಿಂಗಟಾಲೂರ ಗ್ರಾಮಸ್ಥರಿಗೆ ಪರಿಹಾರ ಒದಗಿಸುವುದಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೊಟ್ಟ ಭರವಸೆಯು ವರ್ಷ ಕಳೆದರೂ ಈಡೇರಿಲ್ಲ. ಹೀಗಾಗಿ, ಗ್ರಾಮದ ಕಟುಂಬಗಳು ಸಂಕಷ್ಟದ ಸ್ಥಿತಿಯಲ್ಲಿ ದಿನ ದೂಡುತ್ತಿವೆ.

    2019ರ ಆಗಸ್ಟ್​ನಲ್ಲಿ ತಾಲೂಕಿನ ಹಳೇ ಶಿಂಗಟಾಲೂರ ಗ್ರಾಮದ 14 ಕುಟುಂಬಗಳು ತುಂಗಭದ್ರಾ ನದಿ ಪ್ರವಾಹಕ್ಕೆ ತುತ್ತಾಗಿದ್ದವು. ಈ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕ ರಾಮಣ್ಣ ಲಮಾಣಿ ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದರು.

    ಶಿಂಗಟಾಲೂರ ಗ್ರಾಮದಲ್ಲಿ ಮನೆ ಇಲ್ಲದವರಿಗೆ ಆಶ್ರಯ ಮನೆ ಕಲ್ಪಿಸಲಾಗುತ್ತದೆ. ಅಲ್ಲಿಯವರೆಗೂ ಸರ್ಕಾರಿ ಜಾಗದಲ್ಲಿ ತಾತ್ಕಾಲಿಕವಾಗಿ ತಗಡಿನ ಶೆಡ್​ಗಳನ್ನು ಹಾಕಿಕೊಡಲಾಗುತ್ತದೆ. ಶೆಡ್ ಹಾಕುವವರೆಗೆ ಗ್ರಾಮದ ನೀರಾವರಿ ಇಲಾಖೆಯ ವಸತಿ ಗೃಹದಲ್ಲಿ ಆಶ್ರಯ ಪಡೆಯಿರಿ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಚಿಸಿದ್ದರು. ಹೀಗಾಗಿ, 14 ಕುಟುಂಬಗಳು ನೀರಾವರಿ ಇಲಾಖೆಯ ವಸತಿ ಗೃಹದಲ್ಲಿ ಆಶ್ರಯ ಪಡೆದಿವೆ. ಈ ಪೈಕಿ ಒಂದು ಕುಟುಂಬ ಪುನಃ ಹಳೇ ಶಿಂಗಟಾಲೂರಿನ ಮನೆಗೆ ತೆರಳಿದೆ. ಹದಿನಾಲ್ಕು ತಿಂಗಳು ಕಳೆದರೂ ಸಂತ್ರಸ್ತರಿಗೆ ಇದುವರೆಗೂ ಆಶ್ರಯ ಮನೆಯೂ ಇಲ್ಲ, ತಗಡಿನ ಶೆಡ್ ಕೂಡ ಹಾಕಿಲ್ಲ.

    ನೀರಾವರಿ ಇಲಾಖೆ ವಸತಿ ಗೃಹದ ಸುತ್ತಲೂ ಜಾಲಿಗಿಡಗಳು ಹೆಚ್ಚಾಗಿ ಬೆಳೆದಿವೆ. ಹಾವು, ಚೇಳುಗಳ ಕಾಟವೂ ಹೆಚ್ಚಾಗಿದೆ. ಅಲ್ಲದೆ, ಮಳೆಗಾಲವಾಗಿದ್ದರಿಂದ ಗೃಹಗಳು ತಂಪು ಹಿಡಿದು ಸೋರುತ್ತಿವೆ. ಮನೆಯವರೆಲ್ಲರೂ ಭಯದಲ್ಲಿ ಜೀವನ ಮಾಡುವಂತಾಗಿದೆ.

    ವಸತಿಗೃಹ ತೆರವಿಗೆ ನೋಟಿಸ್: ಹಳೇ ಶಿಂಗಟಾಲೂರಿನ 13 ಕುಟುಂಬಗಳು ಸಿಂಗಟಾಲೂರ ಏತ ನೀರಾವರಿ ಯೋಜನೆಯ 3 ವಸತಿ ಗೃಹಗಳಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿನ ನೀರಾವರಿ ಇಲಾಖೆ ಸಿಬ್ಬಂದಿಗೆ ವಾಸಿಸಲು ಜಾಗವಿಲ್ಲದಂತಾಗಿದೆ. ಸಿಬ್ಬಂದಿಯು ಬೇರೆ ಕಡೆ ಮನೆ ಮಾಡಿಕೊಂಡಿದ್ದು, ವಸತಿ ಗೃಹ ತೆರವು ಮಾಡಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ, ವಸತಿ ಗೃಹ ತೆರವುಗೊಳಿಸುವಂತೆ ಶಿಂಗಟಾಲೂರ ಗ್ರಾ.ಪಂ.ನಿಂದ ಸಂತ್ರಸ್ತರಿಗೆ ನೋಟಿಸ್ ನೀಡಲಾಗಿದೆ. ‘ಆಶ್ರಯ ಮನೆ ನೀಡುವವರೆಗಾದರೂ ತಾತ್ಕಾಲಿಕವಾಗಿ ತಗಡಿನ ಶೆಡ್ ಹಾಕಿಕೊಟ್ಟರೆ ವಸತಿ ಗೃಹಗಳನ್ನು ಬಿಡುತ್ತೇವೆ’ ಎಂದು ಸಂತ್ರಸ್ತ ಕುಟುಂಬದವರು ಹೇಳುತ್ತಿದ್ದಾರೆ.

    ಸದ್ಯ ವಸತಿ ಗೃಹದಲ್ಲಿ 13 ಕುಟುಂಬಗಳು ಒಂದೇ ಕಡೆ ಆಶ್ರಯ ಪಡೆಯುತ್ತಿದ್ದೇವೆ. ವಸತಿ ಗೃಹ ತೆರವು ಮಾಡುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕೊಟ್ಟ ಭರವಸೆ ಈಡೇರಿಸದೇ ನಮ್ಮನ್ನು ಬೀದಿಗೆ ತಳ್ಳಲಾಗುತ್ತಿದೆ. ಆಶ್ರಯ ಮನೆ ನೀಡುವವರೆಗೆ ಎಲ್ಲ ಕುಟುಂಬದವರಿಗೆ ತಾತ್ಕಲಿಕವಾಗಿ ಖಾಲಿ ಜಾಗದಲ್ಲಿ ತಗಡಿನ ಶೆಡ್ ನಿರ್ವಿುಸಿಕೊಡಬೇಕು.
    | ಬಸವೇಶ್ವರ ಕುಮಾರ, ಈರಪ್ಪ ಬಾಗೇವಾಡಿ, ಹಳೇ ಶಿಂಗಟಾಲೂರ ಗ್ರಾಮಸ್ಥರು

    ಒಂದು ವಾರದ ನಂತರ ಗ್ರಾಮಕ್ಕೆ ಭೇಟಿ ನೀಡಿ, ಹಳೇ ಶಿಂಗಟಾಲೂರಿನ ಕುಟುಂಬದವರೊಂದಿಗೆ ರ್ಚಚಿಸ್ತುತೇನೆ. ಶೀಘ್ರವೇ ಸಮಸ್ಯೆ ಬಗೆಹರಿಸಲಾಗುವುದು.
    | ಆಶಪ್ಪ ಪೂಜಾರಿ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts