More

    ಶಾಹೀನ್ ಕೇಸ್ ಕಾಂಗ್ರೆಸ್ ತುಷ್ಠೀಕರಣ

    ಬೀದರ್: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಶಾಹೀನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಬೆಂಬಲ ಘೋಷಿಸುವ ಮೂಲಕ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನೀತಿ, ತತ್ವ, ಸಿದ್ಧಾಂತ ಹಾಗೂ ಸಂಸ್ಕೃತಿ ಎಂಥದ್ದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
    ಶಾಹೀನ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ನಡೆದ ನಾಟಕದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಾಚ್ಯ ಪದ ಬಳಸಲಾಗಿದೆ. ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಧಿಕ್ಕರಿಸಿ ಪ್ರದರ್ಶನ ನೀಡಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಲಾಗಿದೆ. ಈ ಕಾಯ್ದೆ ವಿರುದ್ಧ ಜನರಲ್ಲಿ ಸರ್ಕಾರದ ಬಗ್ಗೆ ದ್ವೇಷ ಹುಟ್ಟಿಸಿ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡಲಾಗಿದೆ. ಎನ್ಆರ್ಸಿ ಕುರಿತು ಸುಳ್ಳು ವಿಷಯ ನಾಟಕದಲ್ಲಿ ಸೇರಿಸಿ ಕೋಮು ದ್ವೇಷ ಸೃಷ್ಟಿಸಲಾಗಿದೆ. ಈ ಸಂಬಂಧ ಬಂದ ದೂರಿನನ್ವಯ ಪೊಲೀಸರು ನಿಯಮದಂತೆ ದೇಶದ್ರೋಹ ಸೇರಿ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದು ಸರಿಯೋ? ತಪ್ಪೋ ಎಂಬ ಬಗ್ಗೆ ನ್ಯಾಯಾಲಯದ ಮೂಲಕ ಗೊತ್ತಾಗಲಿದೆ. ವಸ್ತುಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ಅವರು ಯಾರದೋ ತುಷ್ಠೀಕರಣಕ್ಕಾಗಿ ಶಾಹೀನ್ ಸಂಸ್ಥೆ ಬೆನ್ನಿಗೆ ನಿಂತಿರುವುದು ನಾಚಿಕೆಗೇಡಿನ ಸಂಗತಿ. ದೇಶದ್ರೋಹದಂಥ ಗಂಭೀರ ಪ್ರಕರಣವನ್ನೂ ರಾಜಕೀಯ ಸ್ವಾರ್ಥಕ್ಕೆ ಬಳಸಲು ಹೊರಟಿರುವುದು ಖಂಡನೀಯ ಎಂದು ಸಚಿವರು ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.
    ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಮುಖ್ಯಮಂತ್ರಿ ಆಗಿದ್ದವರು. ಮೇಲಾಗಿ ಹಿರಿಯ ವಕೀಲರು. ದೇಶದ ಸಂವಿಧಾನ, ಕಾನೂನು, ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದ ಕಾಯ್ದೆಗಳ ಮಹತ್ವ ಗೊತ್ತಿರಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಏನು ಹೇಳಬೇಕು ಎಂಬುದನ್ನು ಅರಿತಿರಬೇಕು. ನ್ಯಾಯಾಲಯ ಮೇಲೆ ಗೌರವ, ವಿಶ್ವಾಸ, ನಂಬಿಕೆ ಇಡಬೇಕು. ಇದನ್ನೆಲ್ಲ ಬಿಟ್ಟು ಶಾಹೀನ್ ಸಂಸ್ಥೆಗೆ ಓಡೋಡಿ ಬಂದು ಪ್ರಕರಣದಲ್ಲಿ ಬಂಧಿತರಾದವರನ್ನು ಭೇಟಿಯಾಗಿ ನಿಮ್ಮ ಜತೆಗೆ ನಾವಿದ್ದೇವೆ ಎಂದು ಹೇಳಿರುವುದು ಹಾಸ್ಯಾಸ್ಪದ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಯಾವುದೇ ಕೆಲಸ ಮಾಡಲು ಹೇಸುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.
    ಶಾಹೀನ್ ಪ್ರಕರಣದಲ್ಲಿ ಸರ್ಕಾರ ಮತ್ತು ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಯಾರನ್ನೋ ಮೆಚ್ಚಿಸಲು ಅಥವಾ ಈ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಪ್ರಶ್ನೆಯೇ ಬರದು. ಅದರ ಅವಶ್ಯಕತೆಯೂ ನಮಗಿಲ್ಲ. ನಮಗೆ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಶಾಹೀನ್ ಸಂಸ್ಥೆಯಲ್ಲಿ ನಾಟಕ ನಡೆದಿದ್ದು, ಸಮಗ್ರ ತನಿಖೆ ಆಗಬೇಕು. ಈ ನಿಟ್ಟಿನಲ್ಲಿ ನಿಷ್ಪಕ್ಷಪಾತ ವಿಚಾರಣೆ ಮಾಡಿ ಸತ್ಯಾಂಶ ಹೊರತರಬೇಕು. ಈ ವಿಷಯದಲ್ಲಿ ನಾವು ಬದ್ಧರಾಗಿದ್ದೇವೆ. ಆದರೆ ಕಾಂಗ್ರೆಸಿಗರು ರಾಜಕಾರಣ ಆರಂಭಿಸಿರುವುದು ದುರದೃಷ್ಟಕರ. ಕಾಂಗ್ರೆಸ್ ನೀತಿ, ನಿಲುವುಗಳು ದೇಶದ ಹಿತದ ವಿರುದ್ಧ ಇರುತ್ತವೆ ಎಂಬುದನ್ನು ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಶಾಹೀನ್ ಪರವಾಗಿ ನಿಂತಿರುವುದು, ದಿನವೂ ಭಟ್ಟಂಗಿತನದ ಹೇಳಿಕೆ ನೀಡುತ್ತಿರುವುದು ತೋರಿಸಿಕೊಡುತ್ತದೆ ಎಂದು ಕಿಡಿಕಾರಿದ್ದಾರೆ.
    ಪ್ರತಿಯೊಂದರಲ್ಲೂ ಜಾತಿ ಹುಡುಕುವ, ಸ್ವಾರ್ಥ ಸಾಧಿಸಿಕೊಳ್ಳುವಂಥ ಕೆಲಸ ಕಾಂಗ್ರೆಸ್ನವರು ಮಾಡುತ್ತಲೇ ಇದ್ದಾರೆ. ಶಾಹೀನ್ ವಿಷಯದಲ್ಲಿ ಮೂಗು ತೂರಿಸುವುದನ್ನು ನೋಡಿದರೆ ಕಾಂಗ್ರೆಸಿಗರಿಗೆ ದೇಶದ ಸಂವಿಧಾನ, ಸಂಸತ್ತು, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದು ಛೇಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts