More

    ಶಾಸಕ ಸೋಮಶೇಖರರೆಡ್ಡಿ ರಾಜೀನಾಮೆ ಬೇಡ, ಹೋರಾಟದ ನೇತೃತ್ವ ವಹಿಸಿಕೊಳ್ಳಲಿ

    ಬಳ್ಳಾರಿ:
    ಜಿಲ್ಲೆಯ ಸಚಿವರು ಹಾಗೂ ಶಾಸಕರು ಅಖಂಡ ಜಿಲ್ಲೆ ಉಳಿಯಬೇಕೆಂಬ ಹಂಬಲ ಹೊಂದಿಲ್ಲ. ಈ ಕುರಿತು ಹೋರಾಟಕ್ಕೂ ಸ್ಪಂದಿಸುತ್ತಿಲ್ಲ. ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನಡುವೆ ಆಗಿರುವ ಒಳ ಒಪ್ಪಂದ ಬಹಿರಂಗಪಡಿಸಬೇಕೆಂದು ಅಖಂಡ ಜಿಲ್ಲಾ ಹೋರಾಟ ಸಮಿತಿ ಮುಖಂಡ ಕುಡತಿನಿ ಶ್ರೀನಿವಾಸ ಆಗ್ರಹಿಸಿದರು.
    ಅಖಂಡ ಜಿಲ್ಲೆಗಾಗಿ ಶಾಸಕ ಸೋಮಶೇಖರ ರೆಡ್ಡಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅವರು ರಾಜೀನಾಮೆ ನೀಡುವ ಬದಲಿಗೆ ಹೋರಾಟದ ನೇತೃತ್ವ ವಹಿಸಿಕೊಳ್ಳಲಿ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಸಚಿವರಾದ ಶ್ರೀರಾಮುಲು ಹಾಗೂ ಆನಂದ ಸಿಂಗ್ ಜಿಲ್ಲೆಯನ್ನು ಹಂಚಿಕೊಂಡಿದ್ದಾರೆ. ಶ್ರೀರಾಮುಲು ರಾಜಕೀಯ ಕಾರಣಗಳಿಗಾಗಿ ಮೊಳಕಾಲ್ಮೂರು ತಾಲೂಕನ್ನು ಸೇರ್ಪಡೆ ಮಾಡಿ ಬಳ್ಳಾರಿ ಜಿಲ್ಲೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
    ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಗ್ರಾಪಂವಾರು ಅಭಿಪ್ರಾಯ ಸಂಗ್ರಹಿಸಬೇಕು. ತಾಲೂಕುವಾರು ಹೋರಾಟ ಆರಂಭಿಸುವುದರ ಜತೆಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಭೇಟಿ ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಅಖಂಡ ಜಿಲ್ಲೆ ಉಳಿಸುವಂತೆ ಕೋರಲಾಗುವುದು ಎಂದು ಕುಡತಿನಿ ಶ್ರೀನಿವಾಸ ತಿಳಿಸಿದರು.
    ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಮಾತನಾಡಿ,
    ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಯಾವ ಶಾಸಕರೂ ಮಾತನಾಡಲಿಲ್ಲ. ನಾವು ಕರ್ನಾಟಕದಲ್ಲಿರಬೇಕಾ ಅಥವಾ ಆಂಧ್ರಕ್ಕೆ ಹೋಗಬೇಕಾ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
    ವಿವಿಧ ಸಂಘಟನೆಗಳ ಮುಖಂಡರಾದ ಚಾನಾಳ್ ಶೇಖರ್, ಸಿದ್ಮಲ್ ಮಂಜುನಾಥ, ಮೃತ್ಯುಂಜಯ ಸ್ವಾಮಿ ಬಂಡ್ರಾಳ್, ಚಂದ್ರಶೇಖರ ಆಚಾರ್, ವೀರೇಶ ಗಂಗಾವತಿ, ರಂಜಾನ್ ಸಾಬ್, ಶ್ರೀಧರಗೌಡ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts