More

    ಶಾಲೆ, ವಸತಿ ನಿಲಯಗಳಾಯ್ತು ‘ಆರೈಕೆ’ ಕೇಂದ್ರ

    ಬೆಳಗಾವಿ: ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಸತಿ ನಿಲಯ, ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳು ಕೆಲ ದಿನಗಳವರೆಗೆ ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತನೆಯಾಗಲಿದ್ದು, ಜನರ ಜೀವ ಉಳಿಸುವ ತಾಣವಾಗಲಿದೆ.

    ಗಡಿಜಿಲ್ಲೆಯಲ್ಲಿ ಕರೊನಾ ರಣಕೇಕೆ ಹಾಕುತ್ತಿದ್ದು, ನಿತ್ಯ ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದರೂ ಹಲವರಲ್ಲಿ ಗಂಭೀರ ಲಕ್ಷಣ ಕಂಡುಬರುತ್ತಿಲ್ಲ. ಆದರೆ, ಹೋಂ ಐಸೋಲೇಷನ್‌ನಲ್ಲಿರುವ ಕೆಲವರು ಆರೋಗ್ಯ ಪರಿಸ್ಥಿತಿ ಕೈಮೀರಿದಾಗ ಆಸ್ಪತ್ರೆಗೆ ದಾಖಲಾಗಿ ಪ್ರಾಣ ಬಿಡುತ್ತಿದ್ದಾರೆ. ಇದನ್ನು ತಡೆಯಲು ಜಿಲ್ಲಾಡಳಿತ ಹೊಸ ಕ್ರಮಕ್ಕೆ ಮುಂದಾಗಿದೆ.

    ಸ್ಥಳೀಯವಾಗಿ ಚಿಕಿತ್ಸೆ: ಸೌಮ್ಯ ಸ್ವರೂಪದ, ಲಕ್ಷಣರಹಿತ ಕರೊನಾ ಸೋಂಕಿತರಿಗೆ ಆರಂಭದಲ್ಲಿ ಸ್ಥಳೀಯ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು, ಚಿಕಿತ್ಸೆ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಇದಕ್ಕಾಗಿ ವಸತಿ ನಿಲಯ, ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳನ್ನು ಬಳಸಿಕೊಳ್ಳುತ್ತಿದೆ. ಕೆಲವೆಡೆ ಈಗಾಗಲೇ ಸೆಂಟರ್ ಆರಂಭವಾಗಿದೆ. 12 ಕೇಂದ್ರಗಳಲ್ಲಿ 17 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಳ್ಳಿಗಳಲ್ಲಿ ಆದ್ಯತೆ: ಗ್ರಾಮೀಣ ಭಾಗಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಮನೆ-ಮನೆಗೆ ತೆರಳಿ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಿದೆ. ಈ ವೇಳೆ, ಲಕ್ಷಣರಹಿತ ಸೋಂಕಿತರ ಪ್ರಕರಣ ಹೆಚ್ಚಾಗಿ ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ‘ಹೋಂ ಐಸೋಲೇಷನ್’ ರದ್ದುಗೊಳಿಸಿ ಆಯಾ ಗ್ರಾಪಂ ವ್ಯಾಪ್ತಿಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯ, ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಅಲ್ಲದೆ, ವಸತಿ ನಿಲಯ, ಗ್ರಾಪಂ, ವೈದ್ಯಕೀಯ ಸಿಬ್ಬಂದಿಯನ್ನೇ ಈ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ.

    ಕೇಂದ್ರಕ್ಕೆ ಬರಲು ಹಿಂದೇಟು: ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ 92 ವಸತಿ ನಿಲಯ, ಹಿಂದುಳಿದ ವರ್ಗದ 152, ಅಲ್ಪಸಂಖ್ಯಾತ ಇಲಾಖೆಯ 25 ವಸತಿ ನಿಲಯಗಳಿವೆ. ಇವುಗಳಲ್ಲಿ 50ಕ್ಕೂ ಅಧಿಕ ನಿಲಯಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಆದರೆ, ಕೆಲವೆಡೆ ಲಕ್ಷಣರಹಿತ ಸೋಂಕಿತರು ಆರೋಗ್ಯದ ಸಮಸ್ಯೆ ಕಾರಣ ನೀಡಿ ಕೋವಿಡ್ ಕೇರ್ ಸೆಂಟರ್‌ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಕೆಗೆ ಪ್ರಯತ್ನ ನಡೆದಿದೆ.

    4 ಸಾವಿರಕ್ಕೂ ಅಧಿಕ ಟೆಸ್ಟ್: ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ನಿತ್ಯ 4-5 ಸಾವಿರ ಜನರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಶೇ.20 ಜನರಲ್ಲಿ ಲಕ್ಷಣರಹಿತ ಸೋಂಕು ಪತ್ತೆಯಾಗುತ್ತಿದೆ. ಹೃದಯ ಕಾಯಿಲೆ, ಸಕ್ಕರೆ ರೋಗ ಇನ್ನಿತರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸೋಂಕಿತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಆರ್ಥಿಕವಾಗಿ ಸದೃಢವಾಗಿದ್ದವರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ವಾರದ ಒಳಗೆ ಪರೀಕ್ಷೆ ಕೆಲಸ ಅರ್ಧದಷ್ಟು ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸೌಲಭ್ಯ ಕಲ್ಪಿಸುವುದು ದೊಡ್ಡ ಸವಾಲು: ಸರ್ಕಾರ ಸೋಂಕಿತರಿಗೆ ಹೋಂ ಐಸೋಲೇಷನ್ ರದ್ದು ಪಡಿಸಿ ಸೋಂಕಿತರ ಆರೈಕೆಗೆ ವಸತಿ ನಿಲಯ, ಶಾಲೆಗಳನ್ನೇ ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾಡುತ್ತಿದೆ. ಆದರೆ, ಲಕ್ಷಣರಹಿತ ಸೋಂಕಿತರನ್ನು ಈ ಕ್ವಾರಂಟೈನ್ ಕೇಂದ್ರಗಳಲ್ಲಿ ಇಟ್ಟು ಆರೈಕೆ ಮಾಡಲು ವೈದ್ಯರು, ನರ್ಸ್‌ಗಳು, ಔಷಧ, ಊಟ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸುವುದು ಸವಾಲಾಗಲಿದೆ. ಸರ್ಕಾರ ಕ್ವಾರಂಟೈನ್ ಕೇಂದ್ರಗಳಿಗಾಗಿ ಪ್ರತ್ಯೇಕ ಅನುದಾನ ನೀಡಿಲ್ಲ. ಬದಲಾಗಿ ಸಂಬಂಧಿಸಿದ ಇಲಾಖೆಗಳಲ್ಲಿರುವ ಅನುದಾನ ಬಳಸಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ
    ಡಾ.ಎಸ್.ಬಿ.ಮುನ್ಯಾಳ ತಿಳಿಸಿದ್ದಾರೆ.

    ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಡಿಸಿ ಸೂಚಿಸಿದ್ದಾರೆ. ಈಗಾಗಲೇ ಎಲ್ಲ ನಿಲಯಗಳಲ್ಲಿ ಕುಡಿಯುವ ನೀರು, ಬೆಡ್, ವಿದ್ಯುತ್ ಸೇರಿದಂತೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕೆಲವು ಕಡೆ ಸೋಂಕಿತರು ಈ ಆರೈಕೆ ಕೇಂದ್ರಕ್ಕೆ ಬರುತ್ತಿಲ್ಲ.
    | ಡಾ.ಉಮಾ ಸಾಲಿಗೌಡರ ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ

    ಹೋಂ ಐಸೋಲೇಷನ್ ರದ್ದುಪಡಿಸಿ ಆಯಾ ಗ್ರಾಪಂ ವ್ಯಾಪ್ತಿಗಳಲ್ಲಿಯೇ ಕೋವಿಡ್ ಕೇರ್ ಆರಂಭಿಸಲು ಜಿಲ್ಲಾಡಳಿತ ಕ್ರಮವಹಿಸಿದೆ. ಹಾಗಾಗಿ ಹಿಂದುಳಿದ ವರ್ಗದ ವಸತಿ ನಿಲಯಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.
    | ಕೆ.ಗೌರಿಶಂಕರ. ಜಿಲ್ಲಾ ಹಿಂದುಳಿದ ವರ್ಗದ ಇಲಾಖೆ ಅಧಿಕಾರಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts