More

    ಶಾಲೆ ದುರಸ್ತಿಗೆ ಅನುದಾನ ಮಂಜೂರು

    ಶಿವಮೊಗ್ಗ: ಕಳೆದ ಸಾಲಿನಲ್ಲಿ ನೆರೆಯಿಂದ ಹಾನಿಗೀಡಾಗಿದ್ದ ನಗರದ 87 ಶಾಲಾ ಕಟ್ಟಡ ದುರಸ್ತಿಗೊಳಿಸಲು ಸರ್ಕಾರ ಅನುದಾನ ಮಂಜೂರು ಮಾಡಿದ್ದು ತ್ವರಿತಗತಿಯಲ್ಲಿ ದುರಸ್ತಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಹಾನಗರ ಪಾಲಿಕೆ ಇಂಜಿನಿಯರ್​ಗಳಿಗೆ ಸೂಚಿಸಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪಾಲಿಕೆ ವ್ಯಾಪ್ತಿಯ ಶಾಲೆಗಳು ಹಾಗೂ ಶೌಚಗೃಹಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬಾಕಿ ಇರುವ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ಆರಂಭಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

    ಕೈಗೊಂಡ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಕಾಮಗಾರಿ ಆರಂಭಿಸುವಲ್ಲಿ ವಿಳಂಬ ಧೋರಣೆ ತೋರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

    ಶಾಲಾ ಕಟ್ಟಡಗಳ ದುರಸ್ತಿ ಮತ್ತು ಪೀಠೋಪಕರಣ ಪೂರೈಸಲು ಆಸಕ್ತರಿರುವ ದಾನಿಗಳ ನೆರವು ಪಡೆಯಬೇಕು. ಪೀಠೋಪಕರಣ ಅಗತ್ಯವಿರುವ ಶಾಲೆಗಳ ಪಟ್ಟಿ ತಯಾರಿಸುವಂತೆ ಡಿಡಿಪಿಐಗೆ ಸಲಹೆ ನೀಡಿದರು.

    ಡಿಡಿಪಿಐ ಎನ್.ಎಂ.ರಮೇಶ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಡಿಸಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಇದ್ದರು.

    ಮುಂಗಾರು ಆರಂಭಗೊಳ್ಳುತ್ತಿದ್ದು, ಸೋರುವ ಶಾಲೆಗಳ ದುರಸ್ತಿಗೆ ಮೊದಲು ಗಮನಹರಿಸಬೇಕು. ಕಾಮಗಾರಿಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಆಯುಕ್ತರು ನನ್ನ ನೇತೃತ್ವದಲ್ಲಿ ಸಭೆ ಕರೆದು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು.

    | ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಇದೇ ಮೊದಲ ಬಾರಿಗೆ ಶಾಲಾ ದುರಸ್ತಿಗಾಗಿ ಸರ್ಕಾರ ಭಾರಿ ಮೊತ್ತ ಬಿಡುಗಡೆಗೊಳಿಸಿದೆ. ಈ ಅನುದಾನವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಶಾಲಾ ದುರಸ್ತಿ ಪೂರ್ಣಗೊಂಡ ನಂತರ ಎಸ್​ಡಿಎಂಸಿ ಮತ್ತು ಆಯಾ ಶಾಲೆಗಳ ಮುಖ್ಯಾಧ್ಯಾಪಕರ ನಿರಾಕ್ಷೇಪಣ ಪತ್ರ ಪಡೆದು ಹಣ ಬಿಡುಗಡೆ ಮಾಡಬೇಕು.

    | ಎಚ್.ಸಿ.ಯೋಗೇಶ್, ಪಾಲಿಕೆ ಪ್ರತಿಪಕ್ಷ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts