More

    ಶಾಲೆಯಲ್ಲಿ ದೇವಲೋಕ ಸೃಷ್ಟಿ! -ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

    ದಾವಣಗೆರೆ: ಅಲ್ಲಿ ಜಾನಪದ ಕಲಾ ತಂಡಗಳ ನೃತ್ಯ ವೈವಿಧ್ಯವಿತ್ತು. ಛದ್ಮವೇಷರೂಪಿ ದೇವರ ದರ್ಶನ ಭಾಗ್ಯವಿತ್ತು! ಜೇಡಿಮಣ್ಣಲ್ಲಿ ಜೀವಂತಿಕೆ ಪಡೆದ ಕಲಾಕೃತಿಗಳ ಮೋಡಿಯಿತ್ತು. ಭಾಷಣ, ಕವ್ವಾಲಿ, ಹಾಡುಗಾರಿಕೆ ಸಮಾಗಮವಿತ್ತು…
    ಶಾಮನೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಮೇಳೈಸಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಸ್ಯಾಂಪಲ್‌ಗಳಿವು. ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದುನೂರಕ್ಕೂ ಹೆಚ್ಚು ಮಕ್ಕಳು 48 ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಒರೆಗೆ ಹಚ್ಚಿದರು.
    ಇಡೀ ನಗರಕ್ಕೆ ಕಾಡಿದ್ದ ವಿದ್ಯುತ್ ಕಣ್ಣಾಮುಚ್ಚಾಲೆ ಪ್ರತಿಭಾ ಕಾರಂಜಿಯತ್ತಲೂ ವಾಲಿತ್ತು. ಜನರೇಟರ್ ಸದ್ದಿನ ನಡುವೆಯೂ ಪ್ರಾಥಮಿಕ, ಪ್ರೌಢಶಾಲೆ ಮಕ್ಕಳ ಕಲರವ ನೋಡುಗರ ಮನ ಸೆಳೆಯಿತು. ಬಹುತೇಕರು ಆಕರ್ಷಕ ದಿರಿಸುಗಳಲ್ಲಿ ಮಿಂಚಿದರು. ಪಾಲಕರು, ಶಿಕ್ಷಕರು ಕೂಡ ಮಕ್ಕಳ ಸಂಭ್ರಮದಲ್ಲಿ ತೊಡಗಿದ್ದರು.
    ಜನಪ್ರತಿನಿಧಿಗಳು, ಮೇಲಧಿಕಾರಿಗಳು ಸುಳಿಯಲೇ ಇಲ್ಲ. ಬೆಳಗ್ಗೆ 10-30ಕ್ಕೆ ಉದ್ಘಾಟನೆ ಆಗಬೇಕಿದ್ದ ಕಾರ್ಯಕ್ರಮ ಎರಡು ತಾಸು ನಂತರ ಶುರುವಾಯಿತು. ಸಿಂಗರಿಸಿದ್ದ ಎತ್ತಿನ ಬಂಡಿಯನ್ನೇರಿದ ಛದ್ಮವೇಷಧಾರಿ ಮಕ್ಕಳು ಮೆರವಣಿಗೆಯಲ್ಲಿ ಬಂದರು. ಪೂರ್ಣಕುಂಭ ಹೊತ್ತ ಬಾಲಕಿಯರು ಪುಟ್ಟ ಹೆಜ್ಜೆ ಹಾಕಿ ಕಳೆ ಹೆಚ್ಚಿಸಿದರು.

    ಭೂಮಿಗಿಳಿದ ದೇವರು..
    ತ್ಯಾವಣಗಿ ಶಾಲೆಯ ಸಂಜನಾ ಶಾರದಮಾತೆಯಾಗಿ, ಅಯ್ಯನಹಳ್ಳಿ ಶಾಲೆಯ ಅಂಜಿನಮ್ಮ ಧನಲಕ್ಷ್ಮಿಯಾಗಿ ಧರೆಗಿಳಿದಿದ್ದರು. ಮೆದಗಿನಕೆರೆ ಶಾಲೆಯ ಎಸ್.ಟಿ.ನವೀನ್ ಹಾಗೂ ಕುಳಗುಟ್ಟೆ ಶಾಲೆಯ ಪ್ರಣವ್, ವೆಂಕಟೇಶನ ಭಂಗಿಯಲ್ಲಿದ್ದರು.
    ತಾವರೆಕೆರೆಯ ಸರ್ವೋದಯ ಪ್ರಾಥಮಿಕ ಶಾಲೆಯ ಪಿ.ಪಿ. ಹರ್ಷವರ್ಧನ ಕಾಂತಾರ ವರಾಹ ರೂಪ ಅವತರಿಸಿದ್ದ. ಈ ದೇವರ ಕಿರೀಟ ತಯಾರಿಗೆ ಮೂರು ದಿನವಾಯಿತು. ತೆಂಗಿನ ಗರಿ, ಹೊಂಬಾಳೆ ಇತ್ಯಾದಿ ನೈಸರ್ಗಿಕ ಅಲಂಕಾರದೊಂದಿಗೆ ಬಾಲಕಿಯನ್ನು ಸಿದ್ಧಪಡಿಸಲು ಅರ್ಧ ದಿನ ಬೇಕಾಯಿತು ಎಂದು ಇಂಜಿನಿಯರ್ ವಿನಯ್ ಪತ್ರಿಕೆಗೆ ತಿಳಿಸಿದರು.
    ರೋವರ್- ಲ್ಯಾಂಡರ್ ಅನ್ನು ಶಾಲೆಯೊಂದರ ಪ್ರದೀಪ್ ಪ್ರದರ್ಶಿಸಿದರೆ, ಅಣ್ಣಾಪುರದ ಶಾಲೆಯ ವಿ. ಮಹೇಶ ಶ್ರವಣಕುಮಾರ ವೇಷಧಾರಿಯಾಗಿದ್ದ. ಯಕ್ಷ ವೇಷದಲ್ಲಿದ್ದ ಸತ್ಯಸಾಯಿ ಶಾಲೆಯ ಬಿ. ಪ್ರಜ್ಞಾ ಸುಮಾರು ಹೊತ್ತು ತಲೆ ಮೇಲೆ 15 ಕೆಜಿ ಭಾರದ ಕಿರೀಟ ಹೊತ್ತು ನಿಸ್ತೇಜಳಾಗಿದ್ದಳು.

    ಸಾಂಪ್ರದಾಯಿಕ ನೃತ್ಯ ವೈಭವ
    ಸುಗ್ಗಿ ಕಾಲ, ಕಂಸಾಳೆ, ಯಲ್ಲಮ್ಮನ ಹಾಡಿಗೆ ಮಕ್ಕಳು ಜಾನಪದ ನೃತ್ಯ ಮಾಡಿ ರಂಜಿಸಿದರು. ಕೆಲ ತಂಡಗಳು ಮಳೆರಾಯನಿಗೆ ಪ್ರಾರ್ಥಿಸಿ ಗುರಜಮ್ಮನ ಪೂಜೆಯ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆಯಾದವು. ಹೊನ್ನಾಳಿ ತಾಲೂಕು ಜೀನಹಳ್ಳಿ ಶಾಲೆಯ ಬಾಲೆಯರು ಡೊಳ್ಳು ಕುಣಿತದ ಮನರಂಜನೆ ನೀಡಿದರು. ವಿದ್ಯಾರ್ಥಿಗಳೇ ಹಿನ್ನೆಲೆಗಾಯನ ಒದಗಿಸಿದ್ದು ವಿಶೇಷವಾಗಿತ್ತು.

    ಕಣ್ಸೆಳೆದ ಮಣ್ಣಿನ ಮಾದರಿಗಳು
    ಜೇಡಿಮಣ್ಣಿನ ಮಾದರಿಗಳು ಗಮನ ಸೆಳೆದವು. ಚನ್ನಗಿರಿ ತಾಲೂಕು ಕಾಕನೂರು ಶಾಲೆಯ 8ನೇ ತರಗತಿಯ ಎಚ್.ಬಿ.ಶಿವು ನಿರ್ಮಿಸಿದ್ದ ಸುಮಾರು ನಾಲ್ಕಡಿ ಉದ್ದದ ಮೀನಿಗೆ ನೋಡುಗರ ಕಂಗಳು ಬಲೆ ಬೀಸಿದವು! ಬಟ್ಟಲಕಟ್ಟೆ ಶಾಲೆಯ ಎಚ್.ಪಿ.ಭರತನ ಕೈಯಲ್ಲಿ ಸಾಲುಮರದ ತಿಮ್ಮಕ್ಕ, ಕಮಲಾಪುರದ ಬಿ.ಬಿ. ವಿಶ್ವನಾಥನಿಂದ ಸ್ವಾಮಿ ವಿವೇಕಾನಂದ ಅರಳಿದ್ದರು. ಉಳಿದಂತೆ ನೀರಿನ ಕಾರಂಜಿ, ಗಂಡಭೇರುಂಡ ಕಲಾಕೃತಿಗಳಿದ್ದವು.

    ಸಂಸ್ಕೃತಿ ವಾಹಕರಾಗಿ
    ಇಂದಿನ ಟಿವಿ, ಮೊಬೈಲ್ ಭರಾಟೆ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿ ಹಿಂದುಳಿದಿದೆ. ಹಿರಿಯರ ಕೊಡುಗೆಯನ್ನು ಬಳುವಳಿಯಾಗಿ ಪಡೆದ ಮಕ್ಕಳು ಇದನ್ನು ಉಳಿಸುವ ವಾಹಕರಾಗಬೇಕು ಎಂದು ಡಯಟ್ ಉಪನಿರ್ದೇಶಕಿ ಎಸ್. ಗೀತಾ ಆಶಿಸಿದರು.
    ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ. ಒಂದು ಹೆಚ್ಚಿದ್ದರೂ ಜೀವನಕ್ಕೆ ವಿಷವಾಗಲಿದೆ ಎಂದು ಸೂಚ್ಯವಾಗಿ ಹೇಳಿದರು.
    ಮಕ್ಕಳ ಪ್ರತಿಭಾ ಕೌಶಲಗಳಿಗೆ ಈ ಕಾರ್ಯಕ್ರಮ ವೇದಿಕೆಯಾಗಿದೆ. ಇದಲ್ಲದೆ ಜಿಲ್ಲೆಯ 40 ಮಕ್ಕಳು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗಿಯಾಗಿದ್ದು ಕರಾಟೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಐದನೇ ಸ್ಥಾನಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದು ಡಿಡಿಪಿಐ ಜಿ. ಕೊಟ್ರೇಶ್ ತಿಳಿಸಿದರು.
    ಶಾಸಕ ಬಿ.ಪಿ.ಹರೀಶ್ ಮಾತನಾಡಿ ಹಳ್ಳಿ ಮಕ್ಕಳ ಪ್ರತಿಭಾ ಪ್ರದರ್ಶನದಿಂದ ದೇಶ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ. ಕೆಲವರು ದೂರದರ್ಶನ ಗಮನಿಸಿ ಕಲೆಗಳನ್ನು ಬೆಳೆಸಿಕೊಂಡಿದ್ದು ಅವರಿಗೆ ತರಬೇತಿ ಸಿಕ್ಕಿದ್ದಲ್ಲಿ ಇನ್ನಷ್ಟು ಪ್ರತಿಭಾವಂತರಾಗಲು ಸಾಧ್ಯವಿದೆ ಎಂದರು.
    ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಮನೂರು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಿ.ಆರ್.ಮುದೇಗೌಡಪ್ಪ, ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಹೇಶ್ ದೊಡ್ಮನಿ, ಮುಖಂಡರಾದ ಓಂಕಾರಪ್ಪ, ಕಲ್ಲೇಶಪ್ಪ, ಶಿಕ್ಷಕರ ಸಂಘದ ರಾಮಪ್ಪ, ಶಿವಲಿಂಗಪ್ಪ, ಮುಬಾರಕ್ ಅಲಿ, ಅಜ್ಜಣ್ಣ, ಗದಿಗೆಪ್ಪ, ಸುರೇಶ್, ರವಿಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts