More

    ಶಾಲೆಗೆ ತೆರಳಲು ವಿದ್ಯಾರ್ಥಿಗಳು ರೆಡಿ

    ಕಾರವಾರ: ಆರರಿಂದ 8ನೇ ಇಯತ್ತೆ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳ ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ತಯಾರಿ ನಡೆಸಿದೆ. ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ 776 ಶಾಲೆಗಳ ಸುಮಾರು 35 ಸಾವಿರ ವಿದ್ಯಾರ್ಥಿಗಳು, ಶಿರಸಿ ಶೈಕ್ಷಣಿಕ ಜಿಲ್ಲೆಯ 724 ಶಾಲೆಗಳ ಸುಮಾರು 32 ಸಾವಿರ ವಿದ್ಯಾರ್ಥಿಗಳು ಬ್ಯಾಗ್ ಹಿಡಿದು ಶಾಲೆಗೆ ತೆರಳಲು ಸಿದ್ಧವಾಗಿದ್ದಾರೆ.

    ಈಗಾಗಲೇ ಹೈಸ್ಕೂಲ್​ಗಳಲ್ಲಿ 9 ಹಾಗೂ 10ನೇ ಇಯತ್ತೆಗೆ ಭೌತಿಕ ತರಗತಿಗಳು ನಡೆಯುತ್ತಿವೆ. 8ನೇ ತರಗತಿ ಸೆ. 6ರಿಂದ ಪ್ರಾರಂಭವಾಗಲಿದೆ. ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6 ತಿಂಗಳ ಬಳಿಕ ಭೌತಿಕ ತರಗತಿಗಳು ಪ್ರಾರಂಭವಾಗುತ್ತಿವೆ. ಕೋವಿಡ್ ಸುರಕ್ಷತೆಯ ದೃಷ್ಟಿಯಿಂದ ಬ್ಯಾಚ್ ಮಾಡಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ವಿದ್ಯಾರ್ಥಿಗಳ ತಂಡ ರಚಿಸುವ ಕಾರ್ಯವನ್ನು ಶಿಕ್ಷಕರು ಶುರು ಮಾಡಿದ್ದಾರೆ.

    ಸ್ಯಾನಿಟೈಸ್​ಗೆ ಮನವಿ: ಪ್ರತಿ ಶನಿವಾರ ಶಾಲೆಗಳನ್ನು ಸ್ಥಳೀಯ ಆಡಳಿತ ಸ್ಯಾನಿಟೈಸ್ ಮಾಡಬೇಕಿದೆ. ಅಲ್ಲದೆ, ಶಾಲೆ ಪ್ರಾರಂಭಕ್ಕೂ ಪೂರ್ವದಲ್ಲಿ

    ಒಮ್ಮೆ ಸ್ಯಾನಿಟೈಸ್ ಮಾಡಬೇಕು. ಈ ನಿಟ್ಟಿನಲ್ಲಿ ಜಿಪಂ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ಸ್ಥಳೀಯ ಆಡಳಿತಗಳಿಗೆ ಮನವಿ ಮಾಡಲಾಗಿದೆ ಎಂದು ಡಿಡಿಪಿಐ ಹರೀಶ ಗಾಂವಕರ್ ತಿಳಿಸಿದ್ದಾರೆ.

    ಮಕ್ಕಳಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ ಮುಗಿಲನ್

    ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಗುರುವಾರ ನಗರದ ಸರ್ಕಾರಿ ಪ್ರೌಢಶಾಲೆ, ಬಾಲಮಂದಿರ ಪ್ರೌಢಶಾಲೆಗಳಿಗೆ ತೆರಳಿ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದರು. ಕೋವಿಡ್ ಆತಂಕ ದೂರವಿಟ್ಟು ಶಾಲೆಗೆ ಬಂದು ಕಲಿಯುವಂತೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಸದ್ಯ ಜಿಲ್ಲೆಗೆ ಸಾಕಷ್ಟು ಡೋಸ್ ಲಸಿಕೆ ಪೂರೈಕೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳ ಪಾಲಕರಿಗೆ ಆದ್ಯತೆ ಮೇಲೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ತಿಳಿಸಿದರು. ಡಿಡಿಪಿಐ ಹರೀಶ ಗಾಂವಕರ್ ಇದ್ದರು.

    ಪಾಲಕರಿಗೂ ಕರೊನಾ ಲಸಿಕೆ

    ಶಾಲೆಗೆ ತೆರಳುವ ಮಕ್ಕಳಿಂದ ಅವರ ಪಾಲಕರಿಗೆ ಅಥವಾ ಪಾಲಕರಿಂದ ಮಕ್ಕಳಿಂದ ರೋಗ ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪಾಲಕರಿಗೂ ಶೀಘ್ರ ಲಸಿಕೆ ಕೊಡಿಸಬೇಕು ಎಂದು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಶಾಲೆ, ಕಾಲೇಜ್​ಗೆ ತೆರಳುವ ವಿದ್ಯಾರ್ಥಿಗಳ ಮನೆಗಳ ಸದಸ್ಯರು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಭೌತಿಕ ತರಗತಿ ನಡೆಯುತ್ತಿರುವ 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಂದ ಈ ಬಗ್ಗೆ ವಿವರವನ್ನು ಸಂಗ್ರಹಿಸಲು ತಿಳಿಸಲಾಗಿದೆ. ಎಲ್ಲ ಬಿಇಒಗಳಿಂದ ವರದಿ ಕೇಳಿದ್ದು, ಒಂದೆರಡು ದಿನದಲ್ಲಿ ವರದಿ ಕೈಸೇರಲಿದ್ದು, ನಂತರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 6 ರಿಂದ 8ನೇ ತರಗತಿ ಪ್ರಾರಂಭವಾದ ನಂತರ ಅವರ ಕುಟುಂಬದ ಸದಸ್ಯರು ಲಸಿಕೆ ಪಡೆದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

    ಸ್ಥಳೀಯ ಆಡಳಿತಗಳ ಸಹಕಾರದೊಂದಿಗೆ ಶಾಲೆಗಳನ್ನು ಸ್ಯಾನಿಟೈಸ್ ಮಾಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಪಠ್ಯ ಚಟುವಟಿಕೆಗಳ ಬಗ್ಗೆ ಯಾವ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

    | ಹರೀಶ ಗಾಂವಕರ್ ಡಿಡಿಪಿಐ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts