More

    ಶಾಲೆಗಳ ವರ್ಗಾವಣೆಗೆ ಕೆಪಿಸಿ ಸಿದ್ಧತೆ

    ಕಾರವಾರ: ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿ) ತನ್ನ ವ್ಯಾಪ್ತಿಯಲ್ಲಿರುವ 17 ಶಾಲೆಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಲು ಮುಂದಾಗಿದೆ. ಆದರೆ, ಕೆಲ ಸ್ಥಳೀಯರು ಈ ಪ್ರಕ್ರಿಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

    ಕೆಪಿಸಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಜಲ ವಿದ್ಯುತ್ ಯೋಜನೆ ಪ್ರಾರಂಭಿಸಿತ್ತು. ನಿರ್ಮಾಣ ಸಮಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗಾಗಿ ಕಾಲನಿಗಳನ್ನು ಮಾಡಿತ್ತು. ಅಲ್ಲಿ ವಾಸಿಸುವ ಕಾರ್ವಿುಕರು, ಉದ್ಯೋಗಿಗಳ ಮಕ್ಕಳಿಗಾಗಿ ಸ್ವತಃ ಶಾಲೆಗಳನ್ನು ತೆರೆದಿತ್ತು. 1ರಿಂದ 10ನೇ ತರಗತಿ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿತ್ತು.

    ಸದ್ಯ ಉತ್ತರ ಕನ್ನಡ ಜಿಲ್ಲೆಯ ಕದ್ರಾ, ಅಂಬಿಕಾನಗರ, ಗಣೇಶಗುಡಿ, ಉಡುಪಿ ಜಿಲ್ಲೆಯ ಹೊಸಂಗಡಿ ಶಿವಮೊಗ್ಗ ಜಿಲ್ಲೆಯ ಕಾರ್ಗಲ್, ಜೋಗ ಮಾಸ್ತಿಕಟ್ಟಗಳಲ್ಲಿ ಒಟ್ಟು 17 ಶಾಲೆಗಳು ನಡೆಯುತ್ತಿವೆ. ಅದರಲ್ಲಿ 3 ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳು 3 ಹೈಸ್ಕೂಲ್​ಗಳು, 7 ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ನಾಲ್ಕು ಹೈಸ್ಕೂಲ್​ಗಳು ಕೆಪಿಸಿ ಆಡಳಿತದಲ್ಲೇ ನಡೆಯುತ್ತಿವೆ.

    ಹಸ್ತಾಂತರಕ್ಕೆ ಕಾರಣವೇನು?: ಕರ್ನಾಟಕ ವಿದ್ಯುತ್ ನಿಗಮದ ಅಣೆಕಟ್ಟೆ ಹಾಗೂ ವಿದ್ಯುದಾಗಾರಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈಗ ನಿರ್ವಹಣೆ ಕಾರ್ಯ ಮಾತ್ರ ನಡೆದಿದೆ. ಈ ಹಿಂದೆ ಕಾರ್ಯನಿರ್ವಹಿಸಿದ್ದ ಉದ್ಯೋಗಿಗಳು ನಿವೃತ್ತಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕೆಪಿಸಿ ಯೋಜನಾ ಪ್ರದೇಶಗಳ ಕಾಲನಿಗಳಲ್ಲಿ ವಾಸಿಸುವ ಜನರ ಸಂಖ್ಯೆ ಕಡಿಮೆಯಾಗಿದೆ. ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿ ದ್ದಾರೆ. ಆದರೆ, ಅವರಿಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟ, ಸಮವಸ್ತ್ರ, ಸೈಕಲ್, ಪಠ್ಯಪುಸ್ತಕ ಮುಂತಾದ ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ಕೆಪಿಸಿ ಅಡಿ ಇರುವ ಎಲ್ಲ ಶಾಲೆಗಳನ್ನು ಹಸ್ತಾಂತರಿಸುವ ಯೋಜನೆ ಹೊಂದಲಾಗಿದೆ ಎಂದು ಕೆಪಿಸಿ ಬರೆದಿರುವ ಪತ್ರದಲ್ಲಿ ತಿಳಿಸಿದೆ.ಜನರ ಆತಂಕವೇನು?: ಕೆಪಿಸಿ ಶಾಲೆಗಳಲ್ಲಿ ಕೆಪಿಸಿ ಉದ್ಯೋಗಿಗಳ ಜತೆ ಸುತ್ತಲಿನ ಬಡ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡಲಾಗುತ್ತಿತ್ತು. ಕನಿಷ್ಠ ಶುಲ್ಕವನ್ನು ಮಾತ್ರ ಪಡೆಯಲಾಗುತ್ತಿತ್ತು. ಸಮವಸ್ತ್ರ, ಪಠ್ಯ ಸಿಗುತ್ತಿರಲಿಲ್ಲ ಎಂಬುದನ್ನು ಬಿಟ್ಟರೆ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕುಗ್ರಾಮಗಳಲ್ಲಿ ಸಿಕ್ಕಂತಾಗುತ್ತಿತ್ತು. ಈಗ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವಹಿಸಿಕೊಟ್ಟರೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಇಲಾಖೆ ಬಂದ್ ಮಾಡಬಹುದು ಅಥವಾ ಖಾಸಗಿಗೆ ವಹಿಸಬಹುದು ಎಂಬ ಆತಂಕ ಸ್ಥಳೀಯರದ್ದು. ರಾಯಚೂರಿನ ಒಂದು ಶಾಲೆಯನ್ನು ಕೆಪಿಸಿ ಖಾಸಗಿಗೆ ಹಸ್ತಾಂತರಿಸಿದೆ. ಖಾಸಗಿ ಕಂಪನಿ ಡೊನೇಶನ್ ಪಡೆಯಲು ಮುಂದಾಗಿದೆ. ಮುಂದೊಂದು ದಿನ ಇಲ್ಲಿಯೂ ಅಂಥ ವ್ಯವಸ್ಥೆ ಬಂದರೆ ಎಂಬ ಆತಂಕವನ್ನು ಸ್ಥಳೀಯ ನಿವಾಸಿಗಳಾದ ಮೋಹನ ಇತರರು ವ್ಯಕ್ತಪಡಿಸುತ್ತಿದ್ದಾರೆ.

    ಕೆಪಿಸಿ ಶಾಲೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಬಗ್ಗೆ ಪ್ರಸ್ತಾವನೆ ಬಂದಿರುವುದು ಗಮನಕ್ಕಿದೆ. ಆದರೆ, ಈ ಪ್ರಕ್ರಿಯೆ ಹಾಗೂ ನಿರ್ಣಯ ಸರ್ಕಾರದ ಮಟ್ಟದಲ್ಲೇ ಆಗಬೇಕಿದೆ.
    | ಹರೀಶ ಗಾಂವಕರ್ ಡಿಡಿಪಿಐ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts