More

    ಶಾಲೆಗಳಿಗೆ ಅಧಿಕಾರಿಗಳ ದೌಡು

    ಬೆಳಗಾವಿ: ಕಚೇರಿಯಲ್ಲೇ ಠಿಕಾಣಿ ಹೂಡಿದ್ದ ಬಿಸಿಯೂಟ ಅಕ್ಷರ ದಾಸೋಹ ಅಧಿಕಾರಿಗಳು ಕೊನೆಗೆ ಶಾಲೆಗಳತ್ತ ಮುಖ ಮಾಡಿದ್ದು, ಪೋಷಣ್ ಮಾಸಾಚರಣೆ ಯಶಸ್ಸಿಗಾಗಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರಗಳ ಸೇವನೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.

    ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ, ಶೇಂಗಾ ಚಿಕ್ಕಿ ಹಾಗೂ ಮೊಟ್ಟೆ ವಿತರಣೆಯಲ್ಲಿ ಆಗುತ್ತಿರುವ ಕಳಪೆ ಸಾಧನೆ ಕುರಿತು, ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಪತ್ರಿಕೆ ಸೆ.12ರಂದು ಸೋಮವಾರ ‘ಪೋಷಣ್ ಮಾಸಾಚರಣೆಯಲ್ಲೇ ಹಿನ್ನಡೆ..!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ, ಬೆಳಕು ಚೆಲ್ಲಿತ್ತು. ಆ ಮೂಲಕ ಮಕ್ಕಳು ಹಾಗೂ ಪಾಲಕರಲ್ಲಿನ ಜಾಗೃತಿ ಕೊರತೆ ಕುರಿತು ಹಾಗೂ ಅಧಿಕಾರಿಗಳ ನಿರ್ಲಕ್ಷೃದ ಬಗ್ಗೆ ಆಡಳಿತ ವರ್ಗದ ಗಮನ ಸೆಳೆದಿತ್ತು.

    ವ್ಯವಸ್ಥೆ ಪರಿಶೀಲನೆ: ವಿಜಯವಾಣಿ ವಿಶೇಷ ವರದಿಯಿಂದ ಎಚ್ಚೆತ್ತ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ಬೆಳಗ್ಗೆಯಿಂದಲೇ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳತ್ತ ದೌಡಾಯಿಸಿ, ಬಿಸಿಯೂಟ ವ್ಯವಸ್ಥೆ ಪರಿಶೀಲಿಸಿದ್ದಾರೆ. ಜತೆಗೆ ಪೌಷ್ಟಿಕಾಂಶ ಪದಾರ್ಥಗಳ ಲಭ್ಯತೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು. ಜತೆಗೆ ಪೋಷಣ್ ಅಭಿಯಾನದ ಸಮಯ ಪಾಲನೆಗಾಗಿ ಮಂಗಳವಾರವೇ ಎಲ್ಲ ಶಾಲೆಗಳಲ್ಲಿ ಸ್ಥಳೀಯವಾಗಿ ವಿಧ್ಯಾರ್ಥಿಗಳ ಮೂಲಕ ಊರಿನಲ್ಲಿ ಪ್ರಭಾತ್‌ಪೇರಿ ನಡೆಸಿ, ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸಲು ಘೋಷಣೆಗಳ ಮೂಲಕ ಜಾಗೃತಿ ಮೂಡಿಸಲು ತಿಳಿಸಿದ್ದಾರೆ.

    ಅರಿವು ಮೂಡಿಸುವ ಪ್ರಯತ್ನ: ಮಧ್ಯಾಹ್ನ ಬಿಸಿಯೂಟ ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ನೇತೃತ್ವದ ತಂಡ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಬೆಣಚನಮರಡಿ, ಗದ್ದಿಕರವಿನಕೊಪ್ಪ ಹಾಗೂ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳಿಯ ಶಾಲೆಗಳಿಗೆ ಭೇಟಿ ನೀಡಿ, ಸ್ಥಳೀಯ ಶಿಕ್ಷಕರಿಂದ ಮಾಹಿತಿ ಪಡೆದರು. ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳೀಯ ಶಿಕ್ಷಕರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿಗಳೊಂದಿಗೆ ಆಯಾ ತರಗತಿಗಳಲ್ಲಿ ಸಭೆ, ಪ್ರಶ್ನಾವಳಿ, ಘೋಷಣೆ ರಚನೆ ಮೂಲಕ ಪೌಷ್ಟಿಕ ಆಹಾರ ಸೇವನೆ ಅವಶ್ಯಕತೆ ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.

    ಇನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಶಾಲೆಗಳಿಗೆ ಭೇಟಿ ನೀಡಿದ ಬೆಳಗಾವಿ ತಾಲೂಕು ಅಕ್ಷರ ದಾಸೋಹ ಶಿಕ್ಷಕಣಾಧಿಕಾರಿ ಆರ್.ಸಿ.ಮುದಕನಗೌಡರ, ‘ಶಿಕ್ಷಕರು ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ನಿಗಾವಹಿಸಬೇಕು. ಬಿಸಿಯೂಟ ಸೇವನೆಯಿಂದ ಮಕ್ಕಳ ಆರೋಗ್ಯದಲ್ಲಿ ಏರಾಪೇರಾದರೇ ಆಯಾ ಶಾಲೆ ಮುಖ್ಯಶಿಕ್ಷಕರೇ ಹೊಣೆ’ ಎಂದು ಎಚ್ಚರಿಕೆ ನೀಡಿದ್ದಾರೆ.

    ಆದರೆ, ತಮ್ಮ ಹೊಣೆಗಾರಿಕೆಯನ್ನು ಶಿಕ್ಷಕರಿಗೆ ವಹಿಸಿರುವ ಅಧಿಕಾರಿಗಳ ನಡೆ ಶಿಕ್ಷಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ‘ಶಿಕ್ಷಕರು ಶೈಕ್ಷಣಿಕ ಚಟುವಟಿಕೆಗಳಿಗಿಂತ ಈ ಕೆಲಸವನ್ನೇ ಮಾಡುವುದಾದರೇ, ಇದೆಲ್ಲವನ್ನು ಶಿಕ್ಷಕರೇ ಮಾಡುವುದಾದರೆ ಅಧಿಕಾರಿಗಳೇಕೆ?’ ಎಂಬ ಚರ್ಚೆ ಶುರುವಾಗಿದೆ. ಒಟ್ಟಾರೆ ವಿಧ್ಯಾರ್ಥಿಗಳಿಗೆ ನಿಗಧಿತ ಅವಧಿಯಲ್ಲಿ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಲಿ ಎಂಬುದು ಜನತೆಯ ಆಶಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts